ನೀವು ಬಳಸುತ್ತಿರುವುದು ಅಸಲಿ ಮುತ್ತೇ ಅಥವಾ ಪ್ಲಾಸ್ಟಿಕ್ ತುಂಡೇ?: ಕಂಡುಹಿಡಿಯಲು ಇದೆ ಏಳು ಸರಳ ಮಾರ್ಗಗಳು
ಮುತ್ತಿನ ಆಭರಣದ ಲುಕ್ಕೇ ಬೇರೆ. ಮುತ್ತಿನ ಸರ, ನೆಕ್ಲೆಸ್, ಕಿವಿಯೋಲೆ, ಬಳೆ, ಬ್ರೆಸ್‌ಲೆಟ್ ಹೀಗೆ ಎಲ್ಲಾ ಆಭರಣಗಳಲ್ಲಿ ಮುತ್ತನ್ನು ಬಳಸುತ್ತಾರೆ. ಸಾಂಪ್ರದಾಯಿಕ ಆಭರಣಗಳಿಂದ ಹಿಡಿದು ಟ್ರೆಂಡಿ ಸೆಟ್‌ಗಳವರೆಗೂ ಮುತ್ತನ್ನು ಬಳಸಲಾಗುತ್ತದೆ. ಹಾಗಾದ್ರೆ ಇದು ನಿಜವಾದ ಮತ್ತೇ ಎಂದು ಕಂಡುಹಿಡಿಯುವ ಸುಲಭ ಮಾರ್ಗ ಇಲ್ಲಿದೆ ನೋಡಿ.
ಮುತ್ತಿನ ಆಭರಣಗಳು ನಿಮ್ಮ ಲುಕ್‌ಗೆ ರಾಯಲ್ ಟಚ್ ನೀಡುವುದಂತೂ ಸುಳ್ಳಲ್ಲ. ಮುತ್ತು ಅಗ್ಗದ ರತ್ನವೂ ಅಲ್ಲ. ಕೆಲವೊಮ್ಮೆ ದುಬಾರಿ ಹಣ ನೀಡಿ ಖರೀದಿಸಿರುತ್ತೇವೆ. ಆದರೆ ಇದು ಅಸಲಿ ಮುತ್ತು ಎಂದು ಖರೀದಿಸಿರುವ ವಸ್ತು ಸಿಂಥೆಟಿಕ್, ಪ್ಲಾಸ್ಟಿಕ್ ಅಥವಾ ಚೈನೀಸ್ ಪರ್ಲ್ ಆಗಿದ್ದರೆ, ನಕಲಿ ಮುತ್ತನ್ನು ಬಳಸಿ ಆಭರಣ ತಯಾರಿಸಿದರೆ ಆ ಮುತ್ತಿನ ಹೊಳಪು ಮಾಸುತ್ತದೆ. ಇದು ತುಂಬಾ ಸಮಯದವರೆಗೆ ಬಾಳಿಕೆ ಬರುವುದೂ ಇಲ್ಲ. ಬಾಳಿಕೆ ಬರಬೇಕಾದರೆ ನೀವು ಖರೀದಿಸುತ್ತಿರುವುದು ಅಸಲಿಯೋ, ನಕಲಿಯೋ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಅಸಲಿ ಮತ್ತು ನಕಲಿ ಮುತ್ತುಗಳನ್ನು ಪರಿಶೀಲಿಸುವುದು ಹೇಗೆ?
ನಿಮ್ಮ ಹಲ್ಲುಗಳಿಂದ ಪರೀಕ್ಷಿಸಿ: ನಿಜವಾದ ಮುತ್ತನ್ನು ಗುರುತಿಸಲು ಇದು ಸುಲಭವಾದ ಮಾರ್ಗವಾಗಿದೆ. ಮುತ್ತನ್ನು ನಿಮ್ಮ ಮುಂಭಾಗದ ಹಲ್ಲಿನ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಅಸಲಿ ಮುತ್ತಾಗಿದ್ದರೆ ಅದರ ಮೇಲ್ಮೈ ಸ್ವಲ್ಪ ಒರಟಾಗುತ್ತದೆ. ಅಸಲಿ ಮುತ್ತುಗಳು ನೈಸರ್ಗಿಕ ಪದರಗಳನ್ನು ಹೊಂದಿರುತ್ತವೆ. ಆದರೆ ನಕಲಿ ಅಥವಾ ಪ್ಲಾಸ್ಟಿಕ್ ಮುತ್ತುಗಳನ್ನು ಹಲ್ಲುಗಳ ಮೇಲೆ ಉಜ್ಜಿದರೂ ಮೃದುವಾಗಿಯೇ ಇರುತ್ತದೆ.
ಸ್ಪರ್ಶಿಸುವ ಮೂಲಕ ಗಮನಿಸಿ: ಅಸಲಿ ಮುತ್ತನ್ನು ಮುಟ್ಟಿ ನೋಡುವಾಗ ಅದು ತಂಪಾಗಿರುತ್ತದೆ. ಅದನ್ನು ಕೈಯಲ್ಲಿ ಹಿಡಿದಾಗ, ಆರಂಭದಲ್ಲಿ ತಂಪಾಗಿರುತ್ತದೆ. ಕ್ರಮೇಣ ನಿಮ್ಮ ದೇಹದ ಉಷ್ಣತೆಗಿಂತ ಸ್ವಲ್ಪ ಹೆಚ್ಚು ಬಿಸಿಯಾಗುತ್ತದೆ. ಆದರೆ, ಪ್ಲಾಸ್ಟಿಕ್ ಮುತ್ತು ಮುಟ್ಟಿದ ತಕ್ಷಣ ಬಿಸಿಯಾಗುತ್ತದೆ.
ಸೈಜ್ ಗಮನಿಸಿ: ಈ ಪ್ರಕೃತಿಯಲ್ಲಿ ಸೃಷ್ಟಿಯಾದ ಯಾವ ವಸ್ತುವೂ ಕೂಡಾ ಪರ್ಫೆಕ್ಟ್ ಶೇಪ್‌ನಲ್ಲಿ ಇರುವುದಿಲ್ಲ. ಹಾಗಾಗಿ ಅಸಲಿ ಮುತ್ತು ಯಾವತ್ತೂ ಸಂಪೂರ್ಣವಾಗಿ ದುಂಡಾಗಿರುವುದಿಲ್ಲ ಅಥವಾ ಏಕರೂಪದಲ್ಲಿ ಇರುವುದೇ ಇಲ್ಲ. ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ದುಂಡಗಿನ ಮತ್ತು ಹೊಳೆಯುವ ಮುತ್ತು ಕಂಡುಬಂದರೆ, ಅದು ನಕಲಿಯಾಗಿರಬಹುದು.
ಎರಡು ಮಣಿಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ
ಎರಡು ಮುತ್ತುಗಳ ಮಣಿಗಳನ್ನು ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ. ಅವು ಅಸಲಿ ಮುತ್ತುಗಳಾಗಿದ್ದರೆ, ಉಜ್ಜಿದಾಗ ಸ್ವಲ್ಪ ಬಿಳಿ ಪುಡಿಯಂತಹ ವಸ್ತು ಹೊರಬರುತ್ತದೆ. ನಕಲಿ ಅಥವಾ ಪ್ಲಾಸ್ಟಿಕ್ ಮುತ್ತುಗಳು ತುಂಬಾ ಸರಾಗವಾಗಿ ಒಟ್ಟಿಗೆ ಜಾರುತ್ತವೆ.
ತೂಕದ ವ್ಯತ್ಯಾಸವನ್ನು ಗಮನಿಸಿ
ಅಸಲಿ ಮುತ್ತುಗಳು ನಕಲಿ ಮುತ್ತುಗಳಿಗಿಂತ ಹೆಚ್ಚು ತೂಕವಿರುತ್ತವೆ. ಅಸಲಿ ಮುತ್ತುಗಳು ಸ್ಥಿರವಾದ ತೂಕವನ್ನು ಹೊಂದಿರುತ್ತವೆ. ಪ್ಲಾಸ್ಟಿಕ್ ಮುತ್ತುಗಳು ಹೆಚ್ಚು ಹಗುರವಾಗಿರುತ್ತವೆ.
ರಂಧ್ರವನ್ನು ಎಚ್ಚರಿಕೆಯಿಂದ ನೋಡಿ
ಮುತ್ತಿನಲ್ಲಿ ದಾರವನ್ನು ಎಳೆದಿರುವ ರಂಧ್ರವನ್ನು ಹತ್ತಿರದಿಂದ ನೋಡಿ. ನಿಜವಾದ ಮುತ್ತಿನ ರಂಧ್ರವು ಚಿಕ್ಕದಾಗಿರುತ್ತದೆ, ಸ್ವಚ್ಛವಾಗಿರುತ್ತದೆ ಮತ್ತು ಚೂಪಾದ ಅಂಚುಗಳನ್ನು ಹೊಂದಿರುತ್ತದೆ. ಮುತ್ತು ನಕಲಿಯಾಗಿದ್ದರೆ, ರಂಧ್ರದ ಸುತ್ತಲಿನ ಬಣ್ಣವು ಸಿಪ್ಪೆ ಸುಲಿದಂತೆ ಕಾಣುತ್ತದೆ.
ಎಕ್ಸ್-ರೇ ಪರೀಕ್ಷೆ: ನೀವು ತುಂಬಾ ದುಬಾರಿ ಅಥವಾ ಅಪರೂಪದ ಮುತ್ತನ್ನು ಖರೀದಿಸುತ್ತಿದ್ದರೆ, ಅದನ್ನು ಪ್ರಯೋಗಾಲಯದಲ್ಲಿ ಎಕ್ಸ್-ರೇ ಮಾಡಿಸಬಹುದು. ಅಸಲಿ ಮುತ್ತಿನೊಳಗೆ ನೈಸರ್ಗಿಕವಾಗಿ ಕಂಡುಬರುವ ರಿಂಗ್‌ಗಳನ್ನು ಎಕ್ಸ್-ರೇಗಳು ಸ್ಪಷ್ಟವಾಗಿ ತೋರಿಸುತ್ತವೆ. ಮುತ್ತುಗಳನ್ನು ಖರೀದಿಸುವಾಗ ಆತುರಪಡಬೇಡಿ. ವಿಶ್ವಾಸಾರ್ಹ, ಪ್ರಮಾಣೀಕೃತ ಆಭರಣ ವ್ಯಾಪಾರಿಗಳಿಂದಲೇ ಖರೀದಿಸಿ. ನಿಮ್ಮ ಹಣ ವಿನಾ ಕಾರಣ ಖರ್ಚಾಗಬಾರದು ಎಂದಿದ್ದರೆ ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸುವುದು ಸೂಕ್ತ.


Click it and Unblock the Notifications
