ದೇಹದ ತೂಕ ಇಳಿಸಿಕೊಳ್ಳಲು ಪ್ರತಿದಿನ ಎಷ್ಟು ದೂರ, ಎಷ್ಟು ಸಮಯ ವಾಕಿಂಗ್ ಮಾಡಬೇಕು ?
ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಜನ ತುಂಬಾ ಸರ್ಕಸ್ ಮಾಡುವುದು ಇದೆ. ಕೆಲವರು ತಮ್ಮ ಇಷ್ಟದ ಆಹಾರ ಮತ್ತು ಸ್ವೀಟ್ಸ್ ತಿನ್ನುವುದನ್ನು ಬಿಡುವುದು ಇದೆ. ಆದರೆ, ಅದೆಲ್ಲದ್ದಕ್ಕಿಂತ ಸುಲಭವಾಗಿ ನೀವು ಪ್ರತಿ ದಿನ ಸ್ವಲ್ಪ ಸ್ವಲ್ಪ ವಾಕಿಂಗ್ ಮಾಡುವುದರ ಮೂಲಕವೇ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವುದಕ್ಕೆ ವಾಕಿಂಗ್ ಅತ್ಯಂತ ಸಹಕಾರಿಯಾಗಿದೆ. ದಿನ ವಾಕಿಂಗ್ ಮಾಡುವುದರಿಂದ ನೀವು ದೇಹದ ತೂಕವನ್ನು ಇಳಿಸಿಕೊಳ್ಳುವುದು ಮಾತ್ರವಲ್ಲದೆ. ವಿವಿಧ ಆರೋಗ್ಯ ಸಮಸ್ಯೆಗಳಿಂದಲೂ ತಪ್ಪಿಸಿಕೊಳ್ಳಬಹುದಾಗಿದೆ. ವಾಕಿಂಗ್ ಮಾಡುವುದರಿಂದ ನಿಮಗೆ ಹಲವು ಲಾಭಗಳು ಸಿಗುತ್ತವೆ. ದೇಹದ ತೂಕವನ್ನು ಕಡಿಮೆ ಮಾಡಲು ವಾಕಿಂಗ್ ಹೇಗೆ ಸಹಾಯ ಮಾಡುತ್ತದೆ, ಎಷ್ಟು ಸಮಯ ವಾಕಿಂಗ್ ಮಾಡಬೇಕು ಎನ್ನುವ ವಿವರ ಇಲ್ಲಿದೆ.
ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ದೇಹದ ತೂಕ ಹೆಚ್ಚಾಗಿ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಸಿಂಪಲ್ ರೆಮಿಡಿ ಎಂದರೆ ನೀವು ನಿತ್ಯವೂ ಸ್ವಲ್ಪ ಸಮಯವಾದರೂ ವಾಕಿಂಗ್ ಮಾಡುವುದು. ವಾಕಿಂಗ್‌ನಿಂದ ಹೃದಯದ ಕಾಯಿ ತಡೆಯಬಹುದು. ದೇಹದಲ್ಲಿನ ಕೊಬ್ಬಿನ ಅಂಶ ಕರಗುವುದಕ್ಕೂ ಇದು ಸಹಕಾರಿಯಾಗಿದೆ. ನಿಯಮಿತ ವಾಕಿಂಗ್ ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಕರಗಿಸುತ್ತದೆ. ಹೆಚ್ಚೆಚ್ಚು ವಾಕಿಂಗ್ ಮಾಡಬೇಕು ಎಂದೇನಿಲ್ಲ. ನೀವು ನಿಯಮಿತವಾಗಿ ಇದನ್ನು ರೂಢಿಸಿಕೊಂಡು. ಒಂದು ಹಂತಕ್ಕೆ ಬಂದ ಮೇಲೂ ನೀವು ವಾಕಿಂಗ್ ಸಮಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ನಿಯಮಿತವಾಗಿ ನೀವು ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಅಲ್ಲದೆ ನೀವು ಲವಲವಿಕೆಯಿಂದ ಇರುತ್ತೀರಿ. ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಹೃದಯ ಮತ್ತು ಸ್ನಾಯುಗಳ ಆರೋಗ್ಯ ವೃದ್ಧಿಯಾಗುತ್ತದೆ. ಮೊದಲ ಬಾರಿ ವಾಕಿಂಗ್ ಪ್ರಾರಂಭಿಸುತ್ತಿರುವವರು 10ರಿಂದ 30 ನಿಮಿಷಗಳ ವರೆಗೆ ವಾಕಿಂಗ್ ಮಾಡಬಹುದು. ಇದಾದ ಮೇಲೆ ಕ್ರಮೇಣ ವಾಕಿಂಗ್ ಸಮಯವನ್ನು ನೀವು ಹೆಚ್ಚಿಸಿಕೊಳ್ಳಬಹುದಾಗಿದೆ. ಇನ್ನು 60 ವರ್ಷಕ್ಕಿಂತ ಮೇಲ್ಪಟ್ಟವರು ಊಟದ ನಂತರ ದಿನಕ್ಕೆ ಮೂರು ಬಾರಿ 15 ನಿಮಿಷಗಳ ಕಾಲ ನಡೆಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಬೆಳಗ್ಗೆ ವಾಕಿಂಗ್ ಮಾಡುವಷ್ಟೇ ಉತ್ತಮವಾಗಿದೆ.
ತೂಕ ಇಳಿಸಿಕೊಳ್ಳಲು 10 ಸಾವಿರ ಹೆಜ್ಜೆ: ದೇಹದ ತೂಕವನ್ನು ಇಳಿಸಿಕೊಳ್ಳಲು ದಿನಕ್ಕೆ 10 ಸಾವಿರ ಹೆಜ್ಜೆ ಎನ್ನುವ ಕಾನ್ಸೆಪ್ಟ್ ಇದೆ. ಆದರೆ, ಮೊದಲ ಬಾರಿ ವಾಕಿಂಗ್ ಮಾಡಲು ಶುರು ಮಾಡುವವರು. ಒಮ್ಮೆಗೆ 10 ಸಾವಿರ ಹೆಜ್ಜೆಗಳ ಲೆಕ್ಕದಲ್ಲಿ ವಾಕಿಂಗ್ ಮಾಡಿದರೆ ಕಷ್ಟವಾಗಲಿದೆ. ದೇಹದ ಸ್ನಾಯು ಹಾಗೂ ಕೈಕಾಲುಗಳು ನೋವು ಬರುವ ಸಾಧ್ಯತೆ ಇದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು. ಅದಕ್ಕಾಗಿ ವಾಕಿಂಗ್ ಮಾಡಬೇಕು ಅಂತ ನೀವು ಅಂದುಕೊಂಡರೂ ಒಮ್ಮೆಗೆ 10 ಸಾವಿರ ಹೆಜ್ಜೆಗಳ ಪ್ರಯತ್ನ ಮಾಡಬೇಡಿ. ವಾಕಿಂಗ್ ಪ್ರಾರಂಭಿಸಿದ ಎರಡನೇ ಅಥವಾ ಮೂರನೇ ವಾರದಲ್ಲಿ 10 ಸಾವಿರ ಹೆಜ್ಜೆ ಪ್ರಾರಂಭಿಸಬಹುದು. ಕಾಲು ನೋವಿದ್ದರೆ ಒಂದು ತಿಂಗಳ ನಂತರವೂ ಶುರು ಮಾಡಿಕೊಳ್ಳಬಹುದು.
ಹೆಚ್ಚು ದೇಹದ ತೂಕ ಇದ್ದರೆ ಕಾಲು ನೋವು, ಸ್ನಾಯು ಮತ್ತು ಕೀಲುಗಳ ಸಮಸ್ಯೆ ಹಾಗೂ ಒತ್ತಡ ಆಗುತ್ತೆ. ವಾಕಿಂಗ್ ಮಾಡುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ. ಹೊಸದಾಗಿ ವಾಕಿಂಗ್ ಶುರು ಮಾಡುವವರು ಪ್ರತಿದಿನ 30 ನಿಮಿಷಗಳ ವಾಕ್ ಮಾಡಿದರೆ ಸಾಕು. 70 ಕೆ.ಜಿ ತೂಕ ಇರುವವರು ಈ ರೀತಿ ವಾಕ್ ಮಾಡುವುದರಿಂದ 150 ಕ್ಯಾಲೋರಿಗಳನ್ನು ಬರ್ನ್ ಮಾಡಿಕೊಳ್ಳಬಹುದಾಗಿದೆ. ದೇಹದಲ್ಲಿ ಹೆಚ್ಚು ಕ್ಯಾಲೋರಿ ಬರ್ನ್ ಮಾಡಬೇಕು ಎಂದಿದ್ದರೆ ದಿನಕ್ಕೆ ಕನಿಷ್ಠ 45 ನಿಮಿಷ ಕಾಲ ವಾಕಿಂಗ್ ಮಾಡಬೇಕಾಗುತ್ತದೆ. ಇಷ್ಟು ಸಮಯ ವಾಕ್ ಮಾಡಿದರೆ, ದಿನಕ್ಕೆ 225ರಿಂದ 250 ಕ್ಯಾಲೋರಿಗಳನ್ನು ಬರ್ನ್ ಮಾಡಬಹುದಾಗಿದೆ.
ಹೆಚ್ಚು ವಾಕಿಂಗ್ ಮಾಡಿದಷ್ಟು ಹೆಚ್ಚು ಕ್ಯಾಲೋರಿಗಳು ಬರ್ನ್ ಆಗುತ್ತವೆ. ಆದರೆ ನಿಮ್ಮ ಸಾಮರ್ಥ್ಯ ಹಾಗೂ ಸಮಯಕ್ಕೆ ಅನುಗುಣವಾಗಿ ವಾಕಿಂಗ್ ಟೈಮ್ ಫಿಕ್ಸ್ ಮಾಡಿಕೊಳ್ಳಿ. ದಿನಕ್ಕೆ ಕನಿಷ್ಠ 20 ನಿಮಿಷವಾದರೂ ವಾಕಿಂಗ್ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ.












Click it and Unblock the Notifications