ಇದೊಂದು ಹಾಳೆ ಸಾಕು ಗಿಡಗಳನ್ನು ಕೀಟಗಳಿಂದ ರಕ್ಷಿಸಲು, ಗಾರ್ಡನ್‌ನಲ್ಲಿನ ಗಿಡ ಸೊಂಪಾಗಿ ಬೆಳೆಯಲು
ಅಲ್ಯೂಮಿನಿಯಂ ಫಾಯಿಲ್ ಅನ್ನು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಸುತ್ತಾರೆ. ಆಹಾರಗಳನ್ನು ಪ್ಯಾಕ್ ಮಾಡಲು, ಮ್ಯಾರಿನೇಟ್ ಮಾಡಿಟ್ಟಿರುವ ಪದಾರ್ಥಗಳನ್ನು ಮುಚ್ಚಲು ಈ ಫಾಯಿಲ್‌ಗಳನ್ನು ಬಳಸಲಾಗುತ್ತದೆ. ಇದು ಬಿಟ್ಟರೆ ಮಕ್ಕಳ ಶಾಲೆಯ ಪ್ರಾಜೆಕ್ಟ್‌ಗಳಲ್ಲಿ ಇದರ ಉಪಯೋಗವಾಗುವುದನ್ನು ಕೂಡಾ ನಾವು ನೋಡುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಲ್ಯೂಮಿನಿಯಂ ಪಾಯಿಲ್‌ನ ಬಳಕೆ ತೋಟಗಾರಿಕೆಯಲ್ಲಿ ಆಗುತ್ತಿದೆ. ಮನೆ ಮುಂದೆ ಗಾರ್ಡನ್ ಮಾಡಿರುವವರು ಸಸಿಗಳ ರಕ್ಷಣೆಗೆ ಈ ಹಾಳೆಯನ್ನು ಬಳಸುತ್ತಾರೆ. ನಿಮ್ಮ ಕೈ ತೋಟ ಕೂಡಾ ಸಣ್ಣ ಸಣ್ಣ ಕೀಟಗಳ ಬಾಧೆಗೆ ಬಿದ್ದು ಹಾಳಾಗುತ್ತಿದ್ದರೆ ನೀವು ಕೂಡಾ ಈ ತಂತ್ರವನ್ನು ಬಳಸಬಹುದು.
ಆಲ್ಯೂಮಿನಿಯಂ ಫಾಯಿಲ್ ಬೆಳಕನ್ನು ಪ್ರತಿಬಿಂಬಿಸುತ್ತದೆ. ಮಳೆ, ಬಿಸಿಲು, ಚಳಿ ಹೀಗೆ ಯಾವ ಹವಾಮಾನವೇ ಇರಲಿ ಈ ಫಾಯಿಲ್ ಹಾಳಾಗುವುದಿಲ್ಲ. ಮಾತ್ರವಲ್ಲ ಇದನ್ನು ನಾವು ನಮಗೆ ಬೇಕಾದ ರೀತಿಯಲ್ಲಿ ಅಂದರೆ ಬೇಕಾದ ಆಕಾರದಲ್ಲಿ ಬಳಸಿಕೊಳ್ಳಬಹುದು. ಇದಕ್ಕಾಗಿ ನಾವು ಹೆಚ್ಚು ಕೆಲಸ ಮಾಡುವ ಅಗತ್ಯವೂ ಇಲ್ಲ. ಗಾರ್ಡನ್‌ನಲ್ಲಿರುವ ಸಸಿ ಕೀಟದ ಕಾರಣದಿಂದ ಮುದುಡುತ್ತಿದ್ದರೆ, ಸತ್ತು ಹೋಗುತ್ತಿದ್ದರೆ ಒಮ್ಮೆ ಈ ಶೀಟನ್ನು ಬಳಸಿ ನೋಡಿ. ಎಲ್ಲಾ ಕೀಟ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದನ್ನು ಗಿಡಗಳ ಕೆಳಗೆ, ಪಾಟ್‌ಗಳ ಸುತ್ತಲೂ ಬಳಸುವ ಮೂಲಕ ಕೀಟ ಬಾಧೆಯಿಂದ ಪರಿಹಾರ ಪಡೆಯಬಹುದು. ಇದು ಗಿಡಕ್ಕೆ ತಗಲುವ ಕೀಟಗಳನ್ನು ದೂರ ಮಾಡುವುದರಿಂದ ಹಿಡಿದು ಸಸ್ಯಗಳ ಸುತ್ತ ಬೆಳಕಿನ ಮಟ್ಟವನ್ನು ಸುಧಾರಿಸುವವರೆಗೆ ಸಹಾಯಕ್ಕೆ ಬರುತ್ತದೆ.

ತೋಟದಲ್ಲಿ ಅಲ್ಯೂಮಿನಿಯಂ ಫಾಯಿಲ್ ಬಳಸುವುದು ಹೇಗೆ ?:
1. ಗಿಡದ ಸುತ್ತಲೂ ನೆಲದ ಮೇಲೆ ವೃತ್ತಾಕಾರದಲ್ಲಿ ಅಲ್ಯೂಮಿನಿಯಂ ಫಾಯಿಲ್ ಹರಡಿ ಇಡಬಹುದು. ಹೀಗೆ ಮಾಡುವುದರಿಂದ ಗಿಡದ ಕೆಳ ಭಾಗದಲ್ಲಿರುವ ಎಲೆಗಳಿಗೂ ಸೂರ್ಯನ ಬೆಳಕು ಸಿಗುವಂತೆ ಮಾಡುತ್ತದೆ. ಯಾಕೆಂದರೆ ಈ ಫಾಯಿಲ್ ಮೇಲೆ ಸೂರ್ಯನ ಬೆಳಕು ಬಿದ್ದಾಗ ಅದು ಮೇಲಕ್ಕೆ ಪ್ರತಿಫಲಿಸುವಂತೆ ಮಾಡುತ್ತದೆ. ಹೀಗಾದಾಗ ಈ ಪ್ರತಿಫಲಿತ ಬೆಳಕು ದೊಡ್ಡ ದೊಡ್ಡ ಎಲೆಗಳಿಂದ ಮುಚ್ಚಿ ಹೋಗಿರುವ ಸಸ್ಯದ ಕೆಳಭಾಗದ ಎಲೆಗಳ ಮೇಲೆ ಬೀಳುವಂತೆ ಮಾಡುತ್ತದೆ.ಈ ಮೂಲಕ ಕೀಟಗಳು ಗಿಡದ ಕಡೆಗೆ ಬಾರದಂತೆ ತಡೆಯಬಹುದು. ಸೂರ್ಯನ ಬೆಳಕು ಸರಿಯಾಗಿ ಬೀಳುವ ಜಾಗದಲ್ಲಿ ಕೀಟಗಳು ಉಳಿಯುವುದಿಲ್ಲ.
2. ಬೆಳೆಗಳು ಮತ್ತು ಹಣ್ಣಿನ ಗಿಡಗಳ ಸುತ್ತಲೂ ಅಲ್ಯೂಮಿನಿಯಂ ಫಾಯಿಲ್ ನೇತುಹಾಕುವ ಕ್ರಮವನ್ನು ಕೂಡಾ ಅನುಸರಿಸಬಹುದು. ಹೀಗೆ ನೇತು ಹಾಕಿದ ಶೀಟ್‌ಗಳು ಗಾಳಿ ಬಂದಾಗ ಚಲಿಸುತ್ತಿರುತ್ತದೆ. ಈ ಶೀಟ್‌ಗಳ ಬೆಳಕು ಬಿದ್ದಾಗ ಅದು ಅತಿಯಾಗಿ ಹೊಳೆಯುವಂತೆ ಮಾಡುತ್ತದೆ. ಹೀಗಾದಾಗ ಹಕ್ಕಿಗಳು ಈ ಗಿಡಗಳ ಬಳಿ ಬರಲು ಹಿಂದೇಟು ಹಾಕಬಹುದು. ವಿಶೇಷವಾಗಿ ಹಣ್ಣುಗಳು, ತರಕಾರಿಗಳು ಬೆಳೆದಿರುವ ಸಸಿಗಳತ್ತ ಹಕ್ಕಿಗಳು ಬಂದು ಕೂರುವುದು, ಆ ಬೆಳೆಗಳನ್ನು ತಿನ್ನುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ಆಲ್ಯೂಮಿನಿಯಂ ಫಾಯಿಲ್‌ನಿಂದಾಗಿ ಹಕ್ಕಿಗಳು ಗಿಡದ ಬಳಿ ಬರುವುದಿಲ್ಲ.
3. ಕೀಟ ಆವರಿಸಿರುವ ಸಸ್ಯಗಳ ಸುತ್ತಲೂ ಅಲ್ಯೂಮಿನಿಯಂ ಫಾಯಿಲ್ ಇಡಬಹುದು. ಹೀಗೆ ಮಾಡುವ ಮೂಲಕ ಸಣ್ಣ ಕೀಟಗಳು ಗಿಡಗಳನ್ನು ಆವರಿಸಿಕೊಳ್ಳುವುದನ್ನು ತಡೆಯಬಹುದು. ಈ ಫಾಯಿಲ್‌ನ ಪ್ರತಿಫಲಿತ ಮೇಲ್ಮೈಗಳು ಬೆಳಕನ್ನು ಎಲ್ಲಾ ದಿಕ್ಕುಗಳಿಗೂ ಹರಡುವಂತೆ ಮಾಡುತ್ತದೆ. ಹೀಗಾದಾಗ ಗಿಡಹೇನುಗಳು ಮತ್ತು ಬಿಳಿ ನೊಣಗಳಂತಹ ಕೀಟಗಳು ಸ್ಸಯಗಳ ಮೇಲೆ ನೆಲೆಯಾಗುವುದು ಕಷ್ಟಕರವಾಗಬಹುದು. ಪರಿಣಾಮವಾಗಿ ದುರ್ಬಲ ಸಸ್ಯಗಳ ಸುತ್ತಲೂ ದೊಡ್ಡಮಟ್ಟದಲ್ಲಿ ಈ ಕೀಟಗಳು ಮುತ್ತಿಕೊಳ್ವುದನ್ನು ತಡೆಯಬಹುದು.
4. ಎಳೆಯ ಕಾಂಡಗಳನ್ನು ರಕ್ಷಿಸಲು ಕೊರಳಪಟ್ಟಿಯಂತೆ ಬಳಸುವುದು. ಎಳೆಯ ತರಕಾರಿಗಳು ನೆಲದ ಮಟ್ಟದಲ್ಲಿ ಹೆಚ್ಚು ದುರ್ಬಲವಾಗಿರುತ್ತವೆ. ಅಲ್ಲಿ ತೆವಳುವ ಕೀಟಗಳು ಕಾಂಡಗಳನ್ನು ಸುಲಭವಾಗಿ ತಲುಪಬಹುದು. ಸಸ್ಯದ ಬುಡದ ಸುತ್ತಲೂ ಅಲ್ಯೂಮಿನಿಯಂ ಫಾಯಿಲ್ ಅನ್ನು ಸುತ್ತಿ ಇಟ್ಟರೆ ಕೀಟಗಳಿಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ ಇದು ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಅಂದರೆ ಈ ಹಾಳೆ ಇರುವ ಕಾರಣದಿಂದ ಕೀಟಗಳು ಕಾಂಡದ ಮೇಲೆ ಹತ್ತಲು ಸಾಧ್ಯವಾಗುವುದಿಲ್ಲ.
5. ಗಿಡದ ಸುತ್ತಲೂ ಮಣ್ಣಿನ ಮೇಲೆ ಫಾಯಿಲ್ ಹರಡುವುದರಿಂದ ಮಣ್ಣಿನ ಮೇಲ್ಮೈ ಮೇಲೆ ಸೂರ್ಯನ ನೇರವಾದ ಕಿರಣಗಳು ಬೀಳದಂತೆ ನೋಡಿಕೊಳ್ಳಬಹುದು. ಇದು ಬೇಸಿಗೆ ಕಾಲದಲ್ಲಿ ತೇವಾಂಶ ಆವಿಯಾಗದಂತೆ ತಡೆಯುವುದು. ಬೇರುಗಳ ಸುತ್ತಲೂ ನೀರಿನ ಅಂಶ ಉಳಿಯುವಂತೆ ನೋಡಿಕೊಳ್ಳುತ್ತದೆ.
6. ಸಸ್ಯಗಳು ಸಾಮಾನ್ಯವಾಗಿ ಯಾವ ದಿಕ್ಕಿನಲ್ಲಿ ಬೆಳಕು ಇರುವುದೋ ಅದೇ ದಿಕ್ಕಿನತ್ತ ವಾಲಿ ಕೊಳ್ಳುತ್ತದೆ. ಹೀಗಾದಾಗ ಬೇರು ಗಿಡವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುವುದು. ಇದು ಗಿಡದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದು. ಸಸ್ಯಗಳ ಸುತ್ತಲೂ ಇರಿಸಲಾಗಿರುವ ಫಾಯಿಲ್ ಸಸ್ಯಗಳ ಸುತ್ತಲೂ ಲಭ್ಯವಿರುವ ಬೆಳಕನ್ನು ಮರುನಿರ್ದೇಶಿಸುತ್ತದೆ. ಹೀಗಾದಾಗ ಬೆಳಕು ಎಲ್ಲಾ ದಿಕ್ಕುಗಳಲ್ಲಿಯೂ ಹರಡಿದಂತೆ ಕಾಣುತ್ತದೆ. ಸಸ್ಯ ಬೆಳಕನ್ನು ಹುಡುಕುವ ಬದಲು ನೇರವಾಗಿ ಬೆಳೆಯುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications