ಹೀಗೆ ಮಾಡೋದ್ರಿಂದ ಯಾರಿಗೂ ಪ್ರಯೋಜನವಿಲ್ಲ!
ಮದುವೆಯಾಗಿ ಹಾಗೂಹೀಗೂ ಹತ್ತು ವರ್ಷ ಪೂರೈಸಿದ್ದ ದಂಪತಿಗಳು ಊರೊಂದರಲ್ಲಿ ಹೊಸನೆಲೆ ಕಂಡುಕೊಂಡಿದ್ದರು. ಹಳೆ ಊರಿನಲ್ಲಿ ಬಹುತೇಕ ವಸ್ತುಗಳನ್ನು ಮಾರಿ ಬಂದಿದ್ದರಿಂದ ಹೆಚ್ಚೂಕಡಿಮೆ ಎಲ್ಲ ವಸ್ತುಗಳನ್ನು ಹೊಸದಾಗಿ ಕೊಂಡುಕೊಳ್ಳಬೇಕಿತ್ತು.
ಅವರಿದ್ದ ಮನೆಯ ಪಕ್ಕದಲ್ಲಿ ಇಪ್ಪತ್ತೊಂದು ದಾಟಿದ್ದ ಮತ್ತು ಇಪ್ಪತ್ತೆರಡರ ಅಂಚಿನಲ್ಲಿದ್ದ ಸುಂದರಾತಿಸುಂದರ ಯುವತಿಯೊಬ್ಬಳು ಏಕಾಂಗಿಯಾಗಿ ವಾಸವಿದ್ದಳು. ಅದು ಮೊದಲ ದಿನವೇ ಗಂಡನ ಕಣ್ಣಿಗೆ ಬಿದ್ದಿತ್ತು. ಆಕೆಯನ್ನು ಹೆಂಡತಿ ಗಮನಿಸಿದ್ದರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಆದರೆ, ರಸಿಕ ಗಂಡನ ಮನಕ್ಕೆ ಲಗಾಮು ಬೀಳಬೇಕಲ್ಲ? ಸುಂದರಿಯನ್ನು ಕಂಡು ಆತನ ಮನಸು ಹುಚ್ಚುಕುದುರೆಯಂತಾಗಿತ್ತು. ಹೊಸದಾಗಿ ಬಂದಿದ್ದರಿಂದ ಅದು ಬೇಕು, ಇದು ಬೇಕು ಎಂಬ ನೆಪಗಳನ್ನೊಡ್ಡಿ ಹೆಂಡತಿಗಿಂತ ಮೊದಲೇ ಸುಂದರಿ ಮನೆಗೆ ಹೋಗಿ ವಸ್ತುಗಳನ್ನು ಪಡೆದುಬರುತ್ತಿದ್ದ.
ಇದಕ್ಕೂ ಹೆಂಡತಿ ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಬರಬರುತ್ತ ಆತ ಸುಂದರಿ ಮನೆಯಿಂದ ಮರಳುವುದು ತಡವಾಗುತ್ತಿದ್ದಂತೆ ಆಕೆಯ ಸಿಟ್ಟು ನೆತ್ತಿಗೆ ಏರತೊಡಗಿತು. ನೇರವಾಗಿ ಜಗಳ ತೆಗೆಯಬಾರದೆಂದು ಮತ್ತು ರೆಡ್ ಹ್ಯಾಂಡಾಗಿ ಗಂಡನನ್ನು ಹಿಡಿಯಬೇಕೆಂದು ಸಮಯಕ್ಕೆ ಕಾಯುತ್ತಿದ್ದಳು.
ಎರಡೂ ಮನೆಗಳ ಗೋಡೆ ಒಂದೇ ಆಗಿದ್ದರಿಂದ ಗೋಡೆಗೆ ಕಿವಿಯಾನಿಸಿ ತಡವಾಗಿ ಬರುತ್ತಿದ್ದ ಗಂಡ ಮತ್ತು ಸುಂದರಿ ನಡುವೆ ಏನು ಮಾತುಕತೆ ನಡೆಯುತ್ತಿದೆ ಅಥವಾ ಮತ್ತೇನಾದರೂ ಶಬ್ದ ಬರುತ್ತದೆ ಎಂದು ತಿಳಿಯಲು ಪ್ರಯತ್ನಿಸಿದಳು. ಗಂಡ ರಂಗೋಲಿ ಕೆಳಗೆ ನುಸುಳುವಂಥವನು.
ಕಚೇರಿಯ ಕೆಲಸದ ಕಡೆಗೂ ಹೆಚ್ಚಿನ ಗಮನ ಕೊಡದೆ ಸುಂದರಿ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಗಂಡ ಆರಂಭಿಸಿದ ಮೇಲೆ, ಒಂದು ದಿನ ನೇರವಾಗಿ ಸುಂದರಿ ಮನೆಯನ್ನು ಧಬಧಬನೆ ಬಡಿದುಬಿಟ್ಟಳು. ಎಷ್ಟೊತ್ತಾದರೂ ಇಬ್ಬರಲ್ಲಿ ಒಬ್ಬರೂ ಬರಲಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಮತ್ತೆ ಬಾಗಿಲನ್ನು ಇನ್ನೂ ಜೋರಾಗಿ ಬಡಿದಳು.
ಅಸ್ತವ್ಯಸ್ತವಾಗಿ ಬಟ್ಟೆ ತೊಟ್ಟಿದ್ದ ಸುಂದರಿ ಬಾಗಿಲು ತೆರೆದು, ಅದಕ್ಕೆ ವೈಯಾರದಿಂದ ಆನಿಕೊಂಡು, "ಸ್ವೀಟಿ ಡಾರ್ಲಿಂಗ್, ಸುಮ್ಮನೆ ಯಾಕೆ ಈ ಪರಿ ಬಾಗಿಲು ಬಡಿಯುತ್ತೀಯಾ? ಹಾಗೆ ಮಾಡುವುದರಿಂದ ನಿನಗಂತೂ ಯಾವುದೇ ಪ್ರಯೋಜನವಾಗುವುದಿಲ್ಲ ಮತ್ತು ನಮಗೂ ಸಹಾಯವಾಗುವುದಿಲ್ಲ" ಎಂದು ಹೇಳಿ ಆಕೆಯ ಮೂಗು ಜಜ್ಜಿಹೋಗುವಂತೆ ರಪ್ಪನೆ ಬಾಗಿಲು ಬಡಿದಳು ಸುಂದರಿ. [ವಯಸ್ಕರ ಜೋಕ್ಸ್]












Click it and Unblock the Notifications