ಹುಡುಗೀರನ್ನು ಇಂಪ್ರೆಸ್ ಮಾಡೋಕೆ ಬಂದ ರಸಿಕ ತಾತ!
ಒಂದು ದಿನ 70 ದಾಟಿದ ಹಿರಿಯನೊಬ್ಬ ಹನುಮಾನ್ ಮಲ್ಟಿ ಜಿಮ್‌ಗೆ ಠಾಕೋಠೀಕಾಗಿ ಬಂದ. ತಲೆಮೇಲೆ ಕೂದಲಿಲ್ಲದ್ದರಿಂದ ಟೋಪಿ, ಕಣ್ಣುಗಳು ವಯಸ್ಸು ಸೂಚಿಸುತ್ತಿದ್ದರಿಂದ ಕೂಲಿಂಗ್ ಗ್ಲಾಸು, ಟ್ರಾಕ್ ಪ್ಯಾಂಟು, ಫುಟ್ ಟೀಶರ್ಟು ಹಾಕಿಕೊಂಡು, ಉಫ್ ಎಂದರೆ ಹಾರಿಹೋಗುವಂತಿದ್ದ ತಾತ ಬಿಂದಾಸ್ ಆಗಿ ಜಿಮ್ಮೊಳಗೆ ಬಂದ.
ಅಲ್ಲಿನ ಟ್ರೇನರ್ ಆತನನ್ನು ಗಮನಿಸಿದರೂ ತಾನೇ ತನ್ನ ಬಳಿಗೆ ಬರಲಿ ಎಂದು ಸುಮ್ಮನಿದ್ದ. ಆದರೆ, ಈ ಚಿರಯುವಕ ನೋಟವೆಲ್ಲ ಅಲ್ಲಲ್ಲಿ ಫಿಟ್ನೆಸ್ ಟ್ರೇನಿಂಗ್ ಪಡೆಯುತ್ತಿದ್ದ ಹದಿಹರೆಯದ ಸುಂದರ ಯುವತಿಯರ ಮೇಲೆಯೇ ನೆಟ್ಟಿತ್ತು. ತಾತ ಬಲೇ ಚಪಲ ಚೆನ್ನಿಗರಾಯ ಎಂದು ಟ್ರೇನರ್ ಕೂಡಲೆ ಗಮನಿಸಿದ.
ಕೊನೆಗೆ, ಕೂಲಿಂಗ್ ಕ್ಲಾಸನ್ನು ಮೂಗಿನ ಮೇಲೆ ಸ್ವಲ್ಪವೇ ಇಳಿಸಿಕೊಂಡು ಹುಡುಗಿಯರನ್ನು ಸರ್ವೇ ಮಾಡುತ್ತಿದ್ದ ತಾತನ ಬಳಿ ಟ್ರೇನರೇ ಬಂದ. ರಸಿಕ, ಕಿಲಾಡಿ ತಾತನ ಮೈಯಲ್ಲಿ ಕೈಕಾಲು ಅಲ್ಲಾಡಿಸಲು ಶಕ್ತಿ ಇಲ್ಲದಿದ್ದರೂ ಹುಳಿ ಮುಪ್ಪಾಗಿಲ್ಲವೆಂದು ಟ್ರೇನರ್ ಗ್ರಹಿಸಿದ.
"ಸಾರ್, ಏನಾದರೂ ಸಹಾಯ ಮಾಡಬೇಕಾ?" ಅಂತ ಟ್ರೇನರ್ ಕೇಳಿದ.
ತನ್ನ ವಯಸ್ಸನ್ನು ತೋರಗೊಡದ ತಾತ, "ನಾನು ಹುಡುಗಿಯರನ್ನು ಇಂಪ್ರೆಸ್ ಮಾಡುವಂತೆ ಟ್ರೇನಿಂಗ್ ತೆಗೆದುಕೊಳ್ಳಬೇಕು. ಯಾವ ಮಷಿನ್ ಬಳಸಲಿ?"
"ಸಾರ್, ಜಿಮ್ ಕೆಳಗಡೆ ಎಟಿಎಮ್ ಇದೆ. ಅದನ್ನೇ ಬಳಸಿರಿ!" ತರಬೇತಿಗಾರನ ತುಂಟ ಉತ್ತರ ಕೇಳಿ ರಸಿಕ ತಾತ ಅಲ್ಲಿಂದ ಪರಾರಿ.












Click it and Unblock the Notifications