ಅಂಗಡಿಯವಳ ಸೌಂದರ್ಯಕ್ಕೆ ಮರುಳಾದ ಸುಬ್ಬು!
ಬಟ್ಟೆ ಅಂಗಡಿಗೆ ಏನೋ ಕೊಳ್ಳಲೆಂದು ಬಂದ ಸುಬ್ಬು ಒಂದು ಕ್ಷಣ ಅವಾಕ್ಕಾಗಿ ನಿಂತುಬಿಟ್ಟ. ನಾಲ್ಕಾರು ಕ್ಷಣ ಬಾಯಿಯಿಂದ ಮಾತೇ ಹೊರಡಲಿಲ್ಲ. ಅಂಗಡಿ ಮಾಲಿಕನ ಹೆಂಡತಿಯ ಸೌಂದರ್ಯವನ್ನು ನೋಡಿ ಸುಬ್ಬು ದಂಗಾಗಿಬಿಟ್ಟಿದ್ದ. ಸೀರೆಯುಟ್ಟ ಆಕೆಯ ಮೈಮಾಟ, ಆಕೆಯ ಚೆಲುವು ಸುಬ್ಬುವನ್ನು ಕ್ಷಣಕಾಲ ಸ್ತಂಭೀಭೂತನನ್ನಾಗಿ ನಿಲ್ಲಿಸಿತ್ತು.
ಕಣ್ಣಂಚಿನಲ್ಲೇ ಸುಬ್ಬುವಿನ ಮನದಲ್ಲಿ ಏನು ನಡೆಯುತ್ತಿದೆ ಎಂದು ಕ್ಷಣದಲ್ಲೇ ಗ್ರಹಿಸಿದ ಆ ಸುಂದರಿ ವೈಯಾರದಿಂದ ತಾನಾಗಿಯೇ ಮುಂದೆ ಬಂದು "ತಮಗೆ ಏನು ಬೇಕು?" ಎಂದು ಕೋಗಿಲೆ ಕಂಠದಿಂದ ಉಲಿದಳು. ಕಲ್ಪನಾಲೋಕದಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದ ರಸಿಕ ಸುಬ್ಬು ವಾಸ್ತವಕ್ಕೆ ಜರ್ರನೆ ಜಾರಬಂಡೆಯಾಡುತ್ತ ಇಳಿದುಬಂದ.
"ಮ್ ಮ್ ಅದು, ನನ್ನ ಹೆಂಡತಿಗೆ ಕೈಗವಸು ಕೊಳ್ಳಬೇಕಾಗಿತ್ತು. ಆದರೆ, ಯಾವ ಸೈಜಿನದು ಬೇಕೆಂದು ಗೊತ್ತಿಲ್ಲ" ಎಂದು ಆಕೆಯತ್ತಲೇ ನೆಟ್ಟ ದೃಷ್ಟಿಯಿಂದ ಕೇಳಿದ ಸುಬ್ಬು.
"ಓಕೆ. ನಿಮ್ಮ ಹೆಂಡತಿ ನನ್ನಷ್ಟೇ ಇದ್ದಾರಾ? ನಾನು ಟ್ರೈ ಮಾಡಿ ನೋಡಿ ಕೊಡಲಾ?" ಎಂದು ಆಕೆ ಸುಬ್ಬುವನ್ನು ಕೇಳಿದಳು.
ಮೇಲಿಂದ ಕೆಳಗೆ ಅವಳನ್ನೇ ಅಳೆದುತೂಗಿ ನೋಡಿದ ಸುಬ್ಬು, "ಹೆಚ್ಚೂ ಕಡಿಮೆ ನಿಮ್ಮಷ್ಟೇ ಇದ್ದಾಳೆ. ಸ್ವಲ್ಪ ತೆಳ್ಳಗೆ ಇರಬಹುದೇನೋ. ಆದರೂ ಪರವಾಗಿಲ್ಲ. ಟ್ರೈ ಮಾಡಿ ಕೊಡಿ" ಎಂದು ಮುಗುಳ್ನಕ್ಕು ಹೇಳಿದ.
ನಾಲ್ಕಾರು ಸೈಜುಗಳನ್ನು ನೋಡಿ ಆಕೆ ತನ್ನ ಕೈಗಳಿಗೆ ಸರಿಹೊಂದುವಂತಹ ಕೈಗವಸುಗಳನ್ನು ಸುಬ್ಬುವಿಗೆ ಕೊಟ್ಟು, "ಮತ್ತೇನಾದರೂ ಬೇಕಿತ್ತಾ?" ಎಂದು ಮತ್ತೆ ಅದೇ ಮಧುರವಾದ ಕಂಠದಲ್ಲಿ ಕೇಳಿದಳು.
"ಮತ್ತೇನಾದ್ರೂ ಬೇಕಂತ ನೀವೇ ಕೇಳ್ತಿದ್ದೀರಾ. ತೊಗೊಳ್ದೆ ಇದ್ರೆ ಹೇಗೆ? ಆ, ಮ್... ಅವಳಿಗೆ ಸರಿಹೊಂದುವಂತಹ ಒಳಉಡುಪುಗಳನ್ನೂ ಕೊಟ್ಟುಬಿಡಿ, ಪ್ಲೀಸ್!" ಅಂತ ಮೆಲ್ಲಗೆ ಕೇಳಿದ.
ಆಕೆ, ಆ ಅಂತ ಬಾಯ್ತೆರೆದು ನಿಂತ ಹೊತ್ತಲ್ಲೇ ಸುಂದರಿಯ ಗಂಡ ಪಕ್ಕ ಬಂದು ನಿಂತಿದ್ದ, ಸುಬ್ಬು ದುಡ್ಡು ಕೊಟ್ಟು ಅಲ್ಲಿಂದ ಜಾರಿಕೊಂಡಿದ್ದ.












Click it and Unblock the Notifications