ನನ್ನ ಹೆಂಡತಿ ಮಹಾ ಸುಳ್ಳಿ!
ಮೇಘಶ್ಯಾಮ್ ಆ ಪರಿ ಸಿಟ್ಟಿಗೆದ್ದಿದ್ದನ್ನು ಅವನ ಗೆಳೆಯನಾದ ಶೇಖರ್ ಯಾವತ್ತೂ ಕಂಡಿರಲಿಲ್ಲ. ಶೇಖರ್ ಮನೆಯಲ್ಲಿ ಬೋನಿನಲ್ಲಿ ಹಾಕಿದ ಕತ್ತೆಕಿರುಬದಂತೆ ಅತ್ತಿಂದಿತ್ತ ಓಡಾಡುತ್ತಿದ್ದ ಮೇಘಶ್ಯಾಮ್‌ನ ಕೋಪವಿಳಿಸಲು ಎಷ್ಟೇ ಪ್ರಯತ್ನ ನಡೆಸಿದರೂ ಆತ ತಣ್ಣಗಾಗಿರಲಿಲ್ಲ. ಬೇರೆ ದಾರಿ ಕಾಣದೆ ಅವನನ್ನು ಶೇಖರ್ ಬಾರಿಗೆ ಎಳೆದುಕೊಂಡು ಹೋದ. ಎರಡು ಗುಟುಕು ಗುಂಡು ಗಂಟಲಿಗಿಳಿಯುತ್ತಿದ್ದಂತೆ ತಣ್ಣಗಾದಂತೆ ಕಂಡ ಮೇಘಶ್ಯಾಮ್‌ನನ್ನು ಶೇಖರ್ ಕೇಳಿದ.
ಶೇಖರ್ : ಯಾಕಲೇ ಮೇಘು ಇಷ್ಟೊಂದು ಸಿಟ್ಟಿಗೆದ್ದಿದ್ದಿಯಾ, ಕಾರಣವೇನೆಂದು ನನಗಾದರೂ ಹೇಳಬಾರದಾ?
ಮೇಘಶ್ಯಾಮ್ : ನನ್ನ ಹೆಂಡತಿ ಸುಳ್ಳು ಹೇಳುತ್ತಿದ್ದಾಳೆ.
ಶೇಖರ್ : ಹ್ಯಾಗೆ ಹೇಳ್ತೀಯಾ, ನಿನಗೆ ಹೇಗೆ ಗೊತ್ತು?
ಮೇಘಶ್ಯಾಮ್ : ನಿನ್ನೆ ರಾತ್ರಿ ನನ್ನ ಹೆಂಡತಿ ಶ್ಯಾಮಲಾ ಮನೆಗೇ ಬಂದಿಲ್ಲ. ನಿನ್ನೆ ರಾತ್ರಿ ಸಿಕ್ಕಾಪಟ್ಟೆ ಮಳೆ ಬಂತಲ್ಲ. ಹಾಗಾಗಿ ಆಕೆಯ ತಂಗಿ ವಿಮಲಾ ಮನೆಯಲ್ಲೇ ಇಡೀ ರಾತ್ರಿ ಕಳೆದಳಂತೆ. ಇವತ್ತು ಬೆಳಿಗ್ಗೆ ಹೇಳಿದಳು.
ಶೇಖರ್ : ಅವಳೇ ನಿನ್ನ ಬಳಿ ಒಪ್ಕೊಂಡ ಮೇಲೆ ಸುಳ್ಳು ಹೇಗೆ ಹೇಳಿದಂತಾಯಿತು?
ಮೇಘಶ್ಯಾಮ್ : ಅಲ್ಲೇ ಇರೋದು ಶೇಖು, ಅಲ್ಲೇ ಇರೋದು.
ಶೇಖರ್ : ಏನು ಅಲ್ಲೇ ಇರೋದು ನಿನ್ನ ತಲೆ?
ಮೇಘಶ್ಯಾಮ್ : ಅದು ಸತ್ಯದ ತಲೆ ಮೇಲೆ ಹೊಡೆದಂಥ ಶುದ್ಧ ಸುಳ್ಳು ಕಣೋ ಶೇಖು. ಯಾಕಂದ್ರೆ ನಿನ್ನೆ ಇಡೀ ರಾತ್ರಿ ನಾನೇ ನನ್ನ ಹೆಂಡತಿಯ ತಂಗಿಯ ಜೊತೆ ಕಳೆದಿದ್ದೇನೆ!












Click it and Unblock the Notifications