ಪೋಲಿ ಪೋಲಿ ಮಾತನಾಡುವ ಮುದ್ದಿನ ಗಿಳಿ
ಸನ್ನಿಗೆ ಗಿಳಿಗಳೆಂದರೆ ತುಂಬಾ ಪ್ರೀತಿ. ಪ್ರತಿದಿನ ಮರದ ಮೇಲೆ ಹಾರಾಡುವ, ಅಲ್ಲಲ್ಲಿ ಸರಸವಾಡುವ ಗಿಳಿಗಳನ್ನು ನೋಡುತ್ತಿದ್ದಳು. ಆಕೆಗೂ ಒಂದು ಮುದ್ದಾದ, ಕೆಂಪು ಕೊಕ್ಕಿನ ಗಿಳಿ ಸಾಕಬೇಕೆಂಬ ಆಸೆಯಾಯಿತು. ಸರಿ, ಬಗೆಬಗೆಯ ಹಕ್ಕಿಗಳಿರುವ ಅಂಗಡಿಗೆ ಸನ್ನಿ ಬಂದಳು.
ಎಲ್ಲಾ ಹಕ್ಕಿಗಳ ಬೆಲೆ ತುಂಬಾ ಜಾಸ್ತಿಯಾಗಿದ್ದರೆ, ಒಂದು ಪಂಜರದಲ್ಲಿ ಅತ್ತಿತ್ತ ಬಂದವರನ್ನೆಲ್ಲಾ ನೋಡುತ್ತಿದ್ದ ಗಿಳಿಯ ಬೆಲೆ ಮಾತ್ರ ತೀರ ಕಡಿಮೆಯಾಗಿತ್ತು. ಪಂಜರದ ಮೇಲೆ 25 ರು. ಎಂದು ಬರೆಯಲಾಗಿತ್ತು. ವಾವ್, ಇದನ್ನೇ ಕೊಂಡರಾಯಿತು ಎಂದು ಸನ್ನಿ ನಿರ್ಧರಿಸಿದಳು. ಆದರೂ, ಅವಳಿಗೆ ಕಡಿಮೆ ಮೊತ್ತ ಇದ್ದದ್ದಕ್ಕೆ ಆಶ್ಚರ್ಯ. ಅಂಗಡಿಯವನನ್ನು ಕೇಳಿದಳು ಸನ್ನಿ...
"ರೀ ಇವ್ರೆ, ಉಳಿದೆಲ್ಲ ಹಕ್ಕಿಗಳ ಬೆಲೆ ತುಟ್ಟಿಯಾಗಿದ್ದರೆ, ಈ ಕೆಂಪು ತುಟಿಯ, ಹಸಿರು ಬಣ್ಣದ, ಮುದ್ದಾದ ರೆಕ್ಕೆಗಳಿರುವ ಗಿಳಿಯ ಬೆಲೆ ಇಷ್ಟು ಕಡಿಮೆಯೇಕೆ?"
"ಮೇಡಂ, ಅದು ಏನಂದ್ರೆ, ಈ ಗಿಳಿಯನ್ನು ವೇಶ್ಯೆಯರ ಮನೆಯಲ್ಲಿ ಸಾಕಲಾಗಿತ್ತು. ಅದು ಆಗಾಗ ಪೋಲಿ ಮಾತುಗಳನ್ನು ಆಡುವುದರಿಂದ ಯಾರೂ ಕೊಳ್ಳುತ್ತಿಲ್ಲ. ಹಾಗಾಗಿ ಕಡಿಮೆ ಬೆಲೆ" ಅಂದ ಅಂಗಡಿಯಾತ.
ಪೋಲಿ ಮಾತಾಡಿದರೇನಂತೆ, ವೇಶ್ಯಾಗೃಹದಲ್ಲಿ ಆಡುತ್ತಿದ್ದೀತು ಅಂತ ಅಂದುಕೊಂಡು 25 ರು. ತೆತ್ತು ಹಸಿರು ಬಣ್ಣದ, ಕೆಂಪು ಚುಂಚಿನ ಗಿಳಿಯನ್ನು ಮನೆಗೆ ತಂದು ಮುಂಚಿಮನೆಯಲ್ಲಿ ತೂಗು ಹಾಕಿದಳು. ತೂಗು ಹಾಕುತ್ತಿದ್ದಂತೆ ತನ್ನ ವೃತ್ತಿಪರ ಮಾತುಗಳನ್ನು ಗಿಳಿ ಆರಂಭಿಸಿತು.
"ಹೊಸ ಮನೆ, ಹೊಸ ಮೇಡಂ" ಅಂತ ಮುದ್ದಿನ ಗಿಳಿ ಉಲಿಯುತ್ತಿದ್ದಂತೆ ಸನ್ನಿಗೆ ಸಂತೋಷವೋ ಸಂತೋಷ. ಇದರಲ್ಲೇನು ಪೋಲಿ ಬಂತು ಅಂತ ಅಂದುಕೊಂಡು ತನ್ನ ಕೆಲಸದಲ್ಲಿ ನಿರತಳಾದಳು.
ಸ್ವಲ್ಪ ಹೊತ್ತಿನಲ್ಲಿ ಪ್ರಾಯಕ್ಕೆ ಬಂದ ಆಕೆಯ ಇಬ್ಬರು ಹೆಣ್ಣುಮಕ್ಕಳು ಕಾಲೇಜಿನಿಂದ ತಿರುಗಿ ಬಂದರು. ಅವರಿಗೂ ಗಿಳಿಯನ್ನು ನೋಡಿ ಬಲು ಸಂತೋಷ. ಅಷ್ಟರಲ್ಲಿ ಮತ್ತೆ ಮಾತನಾಡಲು ಗಿಳಿ ಆರಂಭಿಸಿತು, "ಹೊಸ ಮನೆ, ಹೊಸ ಮೇಡಂ, ಹೊಸ ಹುಡುಗಿಯರು" ಅಂತ ಮುದ್ದುಮುದ್ದಾಗಿ ಮಾತನಾಡಲು ಪ್ರಾರಂಭಿಸಿತು.
ಸ್ವಲ್ಪ ಹೊತ್ತಿನಲ್ಲಿ ಸನ್ನಿಯ ಗಂಡ ಕಚೇರಿಯಿಂದ ಮನೆಗೆ ಬಂದನಲ್ಲ, ಗಿಳಿ ತನ್ನ ರೆಕ್ಕೆಗಳನ್ನು ಪಟಪಟನೆ ಬಡಿದು, ನಲಿದಾಡಿ, ಒಂದು ಕ್ಷಣ ಆತನನ್ನು ನೋಡಿ, ಖಚಿತಪಡಿಸಿಕೊಂಡು "ಹಾಯ್, ಸುಬ್ಬು" ಎಂದು ಉಲಿಯಿತು.












Click it and Unblock the Notifications