ಬಡ್ಡಿ ಮಕ್ಳು ಗೋರಿ ಮೇಲೆ ಹೆಸ್ರು ತಪ್ಪಾಗಿ ಬರ್ದಾವ್ರೆ
ಗುಂಡ ಮತ್ತು ತಿಮ್ಮ ಲೇಟ್ ನೈಟ್ ಪಾರ್ಟಿಗೆ ಹೋಗಿದ್ದರು. ಮನೇಲಿ ಹೆಂಡತಿ ಕೈಯಲ್ಲಿ ಬೈಸ್ಕೊಬೇಕೆಂದು ಬೇಗ ಬೇಗನೇ ಮನೆ ಕಡೆ ಹೊರಟರು. ಇಬ್ಬರ ಮನೆ ತುಂಬಾ ದೂರ ಇದ್ದಿದ್ದರಿಂದ ಅಡ್ಡದಾರಿಯಲ್ಲಿ ಹೋಗಲು ನಿರ್ಧರಿಸಿದರು.
ದಟ್ಟ ಅಮಾವಾಸ್ಯೆಯ ಕತ್ತಲಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಂತೆ ಟಪ್ ಟಪ್ ಎಂದು ಬಡಿಯುತ್ತಿರುವ ಸದ್ದು ಕೇಳಿಸಿತು. ಇಬ್ಬರೂ ಹೆದರಿ ಒಂದು ಕ್ಷಣ ಅಲ್ಲೇ ನಿಂತರು. ಆದರೆ ಟಪ್ ಟಪ್ ಎನ್ನುವ ಸದ್ದು ಬಡಿಯುತ್ತಲೇ ಇತ್ತು.
ಇಬ್ಬರಿಗೂ ಕೈಕಾಲು ನಡುಗಲು ಆರಂಭಿಸಿತು. ಎಷ್ಟು ಹೊತ್ತಾದರೂ ಆ ಶಬ್ದ ನಿಲ್ಲಲೇ ಇಲ್ಲ. ಕೊನೆಗೂ ಇಬ್ಬರೂ ಒಬ್ಬರನ್ನೊಬ್ಬರ ಮುಖ ನೋಡಿಕೊಂಡು. ನಡೀ.. ಆಗಿದ್ದಾಗಲಿ ಮನೆ ದೇವರನ್ನು ನೆನೆಸಿಕೊಂಡು ಹೊರಡೋಣ ಎಂದು ನಿರ್ಧರಿಸಿದರು.
ಆಂಜನೇಯ..ಆಂಜನೇಯ.. ಎಂದು ಸ್ಮರಿಸಿಕೊಂಡು ಹೆಜ್ಜೆ ಹಾಕುತ್ತಾ ಇರಬೇಕಾದರೆ...
ದೂರದಲ್ಲಿ ಒಬ್ಬ ವ್ಯಕ್ತಿ ಕಲ್ಲಿನ ಮೇಲೆ ಕೂತು ಏನನ್ನೂ ಕೆತ್ತುತ್ತಾ ಕೂತಿದ್ದ. ಇಬ್ಬರೂ ಅವನ ಬಳಿ ಬಂದರು.
ಗುಂಡ: ಅಯ್ಯೋ. ನಮ್ಮ ಜೀವಾನೇ ಬಾಯಿಗೆ ಬಂದಿತ್ತು. ಅಷ್ಟು ಹೆದರಿಕೊಂಡು ಬಿಟ್ಟಿದ್ವಿ. ಅದ್ಸರಿ ಈ ಹೊತ್ತಲ್ಲಿ ನೀವೇನು ಮಾಡ್ತಾ ಇದ್ದೀರಾ? ಏನು ಕುಟ್ಟುತ್ತಾ ಕೂತಿದ್ದೀರಾ?
ಆ ವ್ಯಕ್ತಿ ಗಂಭೀರವಾಗಿ ಅವರತ್ತ ನೋಡಿ " ಬಡ್ಡಿ ಮಕ್ಕಳು ನನ್ ಗೋರಿ ಮೇಲೆ ನನ್ನ ಹೆಸರನ್ನು ತಪ್ಪಾಗಿ ಬರೆದು ಬಿಟ್ಟಾವ್ರೆ. ಸರಿ ಮಾಡ್ತಾ ಇದ್ದೀನಿ" ಎಂದ.
ಗುಂಡ ಮತ್ತು ತಿಮ್ಮ ಮುಖಮುಖ ನೋಡಿಕೊಂಡು ಎದ್ನೋ ಬಿದ್ನೋ ಅನ್ಕೊಂಡು ಅಲ್ಲಿಂದ ಕಾಲ್ಕಿತ್ತರು.












Click it and Unblock the Notifications