ಎಸ್‌ಬಿಐ ಸೇರಿ ಹಲವು ಸರ್ಕಾರಿ ವಲಯದ ಬ್ಯಾಂಕುಗಳಲ್ಲಿ 50,000 ಹುದ್ದೆಗಳ ಭರ್ತಿಗೆ ನಿರ್ಧಾರ
Public Sector Banks Recruitment: ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲಿ ಉದ್ಯೋಗ ಬಯಸುವವರಿಗೆ ಭರ್ಜರಿ ಅವಕಾಶ ಕಲ್ಪಿಸಲಾಗಿದ್ದು, 50,000 ಹುದ್ದೆಗಳ ಭರ್ತಿಗೆ ಮುಂದಾಗಿವೆ. ಹಾಗಾದ್ರೆ ಯಾವ್ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸರ್ಕಾರಿ ವಲಯದ ಬ್ಯಾಂಕುಗಳು ಖಾಲಿ ಇರುವ 50,000 ಹುದ್ದೆಗಳ ಭರ್ತಿಗೆ ಮುಂದಾಗಿವೆ. ಈ ಪೈಕಿ 21,000 ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳಾಗಿದ್ದು, ಉಳಿದವುಗಳು ಗುಮಾಸ್ತ ಹಾಗೂ ಇತರ ಹುದ್ದೆಗಳು ಆಗಿವೆ.

ದೇಶದ ಸರ್ಕಾರಿ ಬ್ಯಾಂಕುಗಳ ಪೈಕಿ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ 20,000 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಇವುಗಳಲ್ಲಿ 505 ಪ್ರೊಬೇಷನರಿ ಅಧಿಕಾರಿಗಳು, 13,455 ಕಿರಿಯ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಎಸ್‌ಬಿಐ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಗುರಿಯನ್ನು ಎಸ್‌ಬಿಐ ಹೊಂದಿದೆ. 2025ರ ಮಾರ್ಚ್ ಅಂತ್ಯದವರೆಗೆ ಎಸ್‌ಬಿಐನಲ್ಲಿ ಒಟ್ಟು 2,36,226 ಸಿಬ್ಬಂದಿ ಇದ್ದಾರೆ. ಪ್ರತಿವರ್ಷ ಕೆಲಸ ತೊರೆಯುವ ಪ್ರಮಾಣ ಶೇಕಡ 2ಕ್ಕಿಂತ ಕಡಿಮೆಯಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 5,000 ಹುದ್ದೆಗಳು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 4,000 ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಅದೇ ರೀತಿ ವಿವಿಧ ಬ್ಯಾಂಕ್‌ಗಳು ಹೆಚ್ಚುತ್ತಿರುವ ಅಗತ್ಯತೆ ಪೂರೈಸಲು ಮತ್ತು ವಹಿವಾಟು ವಿಸ್ತರಣೆಗಾಗಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ.
541 ಹುದ್ದೆಗಳ ನೇಮಕಾತಿ: ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿಯಲ್ಲಿ ಒಟ್ಟು 541 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುವುದು. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಆಗಿದ್ದು, ಕೊನೇ ದಿನಾಂಕ ಜುಲೈ 14 ಆಗಿದೆ. ಆಸಕ್ತರು sbi.co.inಗೆ ಭೇಟಿ ನೀಡಿ ಮೂಲಕ ಅಥವಾ ನೇರವಾಗಿ ನೋಂದಣಿ ಪೋರ್ಟಲ್ ibpsonline.ibps.in/sbipomay25ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಹುದ್ದೆಗಳ ವಿವರ
* 500 ಹುದ್ದೆಗಳು ನಿಯಮಿತ ವರ್ಗದ ಹುದ್ದೆಗಳು
* 41 ಹುದ್ದೆಗಳು ಬ್ಯಾಕ್‌ಲಾಗ್ ಹುದ್ದೆಗಳಾಗಿವೆ.
* ಒಟ್ಟು 541 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ, ವಯೋಮಿತಿ ವಿವರ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಪಡೆದಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ವಯಸ್ಸು 21ರಿಂದ 30 ವರ್ಷಗಳ ಒಳಗೆ ಇರಬೇಕು. ಮೀಸಲಾತಿಯಲ್ಲಿ ಸಡಿಲಿಕೆ ಇದ್ದು, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಗಳ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ
* ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗದವರಿಗೆ 750 ರೂಪಾಯಿ
* ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
* ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ.












Click it and Unblock the Notifications