'ಕೆಲಸ ಇಲ್ಲ ಅಂದ್ರೆ ಜೀವನ ಮುಗಿದಿಲ್ಲ': ಲಂಡನ್‌ನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ಮಹಿಳೆಯ Video Viral
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಎಂಬುದು ಕೇವಲ ಆರ್ಥಿಕ ಭದ್ರತೆಯಲ್ಲ, ಅದು ವ್ಯಕ್ತಿಯ ಅಸ್ಮಿತೆಯೂ ಆಗಿಬಿಟ್ಟಿದೆ. ಹೀಗಿರುವಾಗ, ದಿಢೀರನೆ ಕೆಲಸ ಕಳೆದುಕೊಂಡರೆ ಎದುರಾಗುವ ಆತಂಕ, ಭವಿಷ್ಯದ ಅನಿಶ್ಚಿತತೆ ಮತ್ತು ಮಾನಸಿಕ ತೊಳಲಾಟವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಇಂತಹದ್ದೇ ಒಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು, ತಾವು ಕೆಲಸ ಕಳೆದುಕೊಂಡ ನಂತರದ ದಿನಗಳನ್ನು ಹೇಗೆ ನಿಭಾಯಿಸುತ್ತಿದ್ದೇನೆ ಎಂಬುದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅನೇಕರ ಮನಮಿಡಿದಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ನೀರಜಾ ಎಂಬ ಆ ಮಹಿಳೆ, ಈ ವರ್ಷದ ಜನವರಿಯಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಅಂದಿನಿಂದ ಹೊಸ ಉದ್ಯೋಗಕ್ಕಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿರುವ ಅವರು, ಈ ಹಾದಿಯಲ್ಲಿ ಎದುರಾಗುವ ಮಾನಸಿಕ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿರುವ (Job market) ಪ್ರತಿಯೊಬ್ಬರಿಗೂ ಗೊತ್ತು, ಈ ಹಂತ ಎಷ್ಟು ಕಠಿಣ ಎಂದು. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಕಂಪನಿಗಳಿಂದ ಬರುವ ರಿಜೆಕ್ಷನ್ ಇಮೇಲ್‌ಗಳನ್ನು ನೋಡಿ ಬೇಸರವಾಗುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆಯೇ ನಮಗೆ ಅನುಮಾನ ಶುರುವಾಗುತ್ತದೆ. ನಮಗೊಂದು ಕೆಲಸವಿಲ್ಲ ಎಂಬ ಒಂದೇ ಕಾರಣಕ್ಕೆ, ನಮ್ಮ ದೈನಂದಿನ ಸಣ್ಣಪುಟ್ಟ ಖುಷಿಗಳನ್ನು ನಾವೇ ಕಸಿದುಕೊಳ್ಳುತ್ತೇವೆ. ಕೆಲಸವಿರುವುದೊಂದೇ ನಮ್ಮನ್ನು ವ್ಯಾಖ್ಯಾನಿಸುವ ಏಕೈಕ ಮಾನದಂಡ ಎಂಬಂತೆ ವರ್ತಿಸುತ್ತೇವೆ" ಎಂದು ನೀರಜಾ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಮೂರು ವಿಭಿನ್ನ ದೇಶಗಳಿಗೆ ಸ್ಥಳಾಂತರಗೊಂಡಿರುವ ನೀರಜಾಗೆ, ಕೆಲಸ ಕಳೆದುಕೊಳ್ಳುವುದು ಇದೇ ಮೊದಲೇನಲ್ಲ. "ಪ್ರತಿ ಬಾರಿ ಹೊಸ ದೇಶಕ್ಕೆ ಹೋದಾಗಲೂ, ನಾನು ಮೊದಲಿನಿಂದಲೇ ಎಲ್ಲವನ್ನೂ ಪ್ರಾರಂಭಿಸಬೇಕಾಗುತ್ತದೆ. ಮಕ್ಕಳ ಆರೈಕೆ, ನರ್ಸರಿ ಫೀಸ್, ಮನೆ ಸಾಲ ಇತ್ಯಾದಿ ಆರ್ಥಿಕ ಜವಾಬ್ದಾರಿಗಳು ಈ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತವೆ" ಎಂದು ಅವರು ವಿವರಿಸಿದ್ದಾರೆ.
ಆದರೆ, "ಈ ಬಾರಿ ನಾನು ಹತಾಶಳಾಗದಿರಲು ನಿರ್ಧರಿಸಿದ್ದೇನೆ. ಏಕೆಂದರೆ, ನಾನು ದುಃಖದಲ್ಲಿ ಮುಳುಗಿದ್ದರೂ ಅಥವಾ ಇಲ್ಲದಿದ್ದರೂ, ಅದು ನನಗೆ ಕೆಲಸ ಸಿಗುವ ಪ್ರಕ್ರಿಯೆಯ ಮೇಲೆ ಯಾವುದೇ ಧನಾತ್ಮಕ ಪರಿಣಾಮ ಬೀರುವುದಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಕೇವಲ ದುಃಖ ಪಡುವುದರಿಂದ ಕೆಲಸ ಸಿಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅದರ ಬದಲಾಗಿ, ನೀರಜಾ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ. "ಹೊಸ ಉದ್ಯೋಗ ಹುಡುಕಲು ಎಷ್ಟು ಸಮಯ ಮೀಸಲಿಡುತ್ತಿದ್ದೇನೆ, ಹೊಸ ಕೌಶಲ್ಯಗಳನ್ನು (Upskilling) ಕಲಿಯಲು ಎಷ್ಟು ಒತ್ತು ನೀಡುತ್ತಿದ್ದೇನೆ, ಪ್ರತಿದಿನ ವ್ಯಾಯಾಮ ಮಾಡಲು ಹಾಗೂ ನನಗೆ ಖುಷಿ ಕೊಡುವ ಕೆಲಸಗಳನ್ನು ಮಾಡಲು ಎಷ್ಟು ಸಮಯ ಕೊಡುತ್ತಿದ್ದೇನೆ ಎಂಬುದರ ಬಗ್ಗೆ ಮಾತ್ರ ನಾನು ಈಗ ಯೋಚಿಸುತ್ತಿದ್ದೇನೆ. ಕೆಲಸ ಇರಲಿ, ಇಲ್ಲದಿರಲಿ ಅದು ನನ್ನ ಜೀವನದ ಒಂದು ತಾತ್ಕಾಲಿಕ ಹಂತವಷ್ಟೇ. ಅದು ನನ್ನ ಅಸ್ಮಿತೆಯನ್ನು ನಿರ್ಧರಿಸುವುದಿಲ್ಲ. ಈ ಕಷ್ಟದ ಹಂತವನ್ನು ಕಂಡು ಕಂಗೆಡಬೇಡಿ. ಪ್ರತಿದಿನ ಸಣ್ಣಪುಟ್ಟ ಗೆಲುವುಗಳನ್ನು ಸಂಭ್ರಮಿಸಿ. ಹೊಸ ವಿಷಯಗಳನ್ನು ಕಲಿಯಿರಿ, ನಾವೆಲ್ಲರೂ ಈ ಕಷ್ಟವನ್ನು ದಾಟುತ್ತೇವೆ" ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ನೀರಜಾ ಅವರ ಈ ಪ್ರಾಮಾಣಿಕತೆ ಮತ್ತು ದೃಢತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯೋಗ ಕಳೆದುಕೊಂಡು ಖಿನ್ನತೆಗೆ ಜಾರುವ ಅನೇಕರಿಗೆ ಅವರ ಮಾತುಗಳು ಹೊಸ ಸ್ಫೂರ್ತಿ ನೀಡಿವೆ.












Click it and Unblock the Notifications