Job Fair 2024: ಬೆಂಗಳೂರಲ್ಲಿ ಅಕ್ಟೋಬರ್ 20ಕ್ಕೆ ಬೃಹತ್ ಉದ್ಯೋಗ ಮೇಳ
ಬೆಂಗಳೂರಲ್ಲಿ ಮತ್ತೊಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಹಲವು ವಿಶೇಷತೆಗಳು ಇವೆ. ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ನಿರುದ್ಯೋಗಿಗಳಿಗೆ ಇದು ಸುವರ್ಣ ಅವಕಾಶ ಎಂದೇ ಹೇಳಲಾಗುತ್ತಿದೆ. ಉದ್ಯೋಗ ಮೇಳ ಎಲ್ಲಿ ಹಾಗೂ ಯಾವಾಗ ನಡೆಯಲಿದೆ ಎನ್ನುವುದು ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.
ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿವೆ. ಇದೇ 20ರಂದು (ಅಕ್ಟೋಬರ್ 20ರ ಶನಿವಾರ) ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಈ ಉದ್ಯೋಗ ಮೇಳದಲ್ಲಿ 100ಕ್ಕಿಂತಲೂ ಹೆಚ್ಚಿನ ಪ್ರತಿಷ್ಠಿತ ಬೃಹತ್, ಮಾಧ್ಯಮ ಹಾಗೂ ಸಣ್ಣ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿವೆ. ಈ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಎಲ್ಲಿ ಉದ್ಯೋಗ ಮೇಳ: ಬೆಂಗಳೂರು ನಗರ ಜಿಲ್ಲೆಯ ಕೆ.ಎಲ್.ಇ ಸಂಸ್ಥೆಯ ಎಸ್. ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ (ನಂ.1040, 28ನೇ ಕ್ರಾಸ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ ಬೆಂಗಳೂರು - 560010) ಈ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ವಾರಾಂತ್ಯವಾಗಿರುವುದರಿಂದ ಸಾವಿರಾರು ಜನ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಯಾರೆಲ್ಲ ಇದಕ್ಕೆ ಅರ್ಹರು: ಅಕ್ಟೋಬರ್ 20ರಂದು ಬೆಂಗಳೂರಿನ ಕೆ.ಎಲ್.ಇ ಸಂಸ್ಥೆಯ ಎಸ್. ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ವಿವಿಧ ವಿದ್ಯಾಹರ್ತೆ ಇರುವವರು ಭಾಗವಹಿಸಬಹುದಾಗಿದೆ. ಅದರಲ್ಲಿ ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಪದವಿ, ಸ್ನಾತಕೋತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಉದ್ಯೋಗ ಮೇಳಕ್ಕೆ ಅರ್ಜಿ ಸಲ್ಲಿಸುವುದು ಹೇಗೆ: ಈ ಉದ್ಯೋಗ ಮೇಳಕ್ಕೆ ಅತ್ಯಂತ ಸರಳವಾಗಿ ಅರ್ಜಿ ಸಲ್ಲಿಸಬಹುದಾಗಿದೆ. https://jobfair.calicut.nielit.in/ ಲಿಂಕ್‌ಗೆ ಭೇಟಿ ನೀಡುವ ಮೂಲಕ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳ ಬಯೋಡಾಟ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು ಎಂದು ಬೆಂಗಳೂರಿನ ಉಪಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಇಂದೇ ರಿಜಿಸ್ಟ್ರೇಷನ್ ಮಾಡಿಕೊಳ್ಳಿ: ಉದ್ಯೋಗಾಕಾಂಕ್ಷಿಗಳು ಇಂದೇ ನಿಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ. https://jobfair.calicut.nielit.in/ ಲಿಂಕ್‌ಗೆ ಭೇಟಿ ನೀಡಿದರೆ. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ಎನ್ನುವ ಎರಡು ಆಯ್ಕೆಗಳು ಬರುತ್ತವೆ. ಕಂಪನಿಗಳು ಹಾಗೂ ಉದ್ಯೋಗ ಹುಡುಕುತ್ತಿರುವವರು ಇಬ್ಬರೂ ಸಹ ಇಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ. ಲಿಂಕ್‌ನಲ್ಲಿ ರಿಜಿಸ್ಟರ್ ಅಕೌಂಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ವಿದ್ಯಾಭ್ಯಾಸ, ಜನ್ಮ ದಿನಾಂಕ ಸೇರಿದಂತೆ ವಿವಿಧ ವಿವರಗಳನ್ನು ಕೇಳಲಿದೆ. ಅವುಗಳನ್ನು ತುಂಬಿಸಿ ಸಬ್ಮಿಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ವಿವಿಧ ಇಲಾಖೆಗಳ ಸಹಯೋಗ: ಬೃಹತ್ ಉದ್ಯೋಗ ಮೇಳವನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಭಾರತ ಸರ್ಕಾರದ ಭಾಗವಾಗಿರುವ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಂಸ್ಥೆ ಮುಖ್ಯವಾಗಿ ಸಹಭಾಗಿತ್ವ ನೀಡುತ್ತಿದೆ. ಇದರೊಂದಿಗೆ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಷನಲ್ ಕೆರಿಯರ್ ಸರ್ವಿಸ್, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಕೈಜೋಡಿಸಿವೆ. ಅಲ್ಲದೇ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಕಾರವೂ ಇದೇ ಎಂದು ಹೇಳಲಾಗಿದೆ.












Click it and Unblock the Notifications