ಕಲಬುರಗಿ: 2013ರ ಚುನಾವಣೆಯಲ್ಲಿ ಗೆದ್ದವರು, ಬಿದ್ದವರು
ಬೆಂಗಳೂರು, ಮಾರ್ಚ್ 19: ಕರ್ನಾಟಕದ ಎರಡನೇ ಅತೀ ದೊಡ್ಡ ಜಿಲ್ಲೆ ಕಲಬುರಗಿ. ಇದನ್ನು ಹಿಂದೆ ಗುಲ್ಬರ್ಗಾ ಎಂದು ಕರೆಯಲಾಗುತ್ತಿತ್ತು. ಜಿಲ್ಲೆಯಲ್ಲಿ ವರ್ಷಪೂರ್ತಿ ಬಿರು ಬಿಸಿಲಿನದ್ದೇ ಅಬ್ಬರ. ಹೀಗಿದ್ದೂ ಏಷ್ಯಾದಲ್ಲೇ ಅತೀ ಹೆಚ್ಚಿನ ತೊಗರಿಯನ್ನು ಜಿಲ್ಲೆಯಲ್ಲಿ ಬೆಳೆಯುತ್ತಾರೆ. ಈ ಕಾರಣಕ್ಕೆ ಜಿಲ್ಲೆ 'ತೊಗರಿಯ ಕಣಜ' ಎಂದು ಪ್ರಖ್ಯಾತವಾಗಿದೆ.
ಇಲ್ಲಿನ ಬಹುಮನಿ ಕೋಟೆ, ಬಂಡೇ ನವಾಜ್ ದರ್ಗಾ, ಬುದ್ಧ ವಿಹಾರ, ಮರ್ಜಿ ಪೀರ್ ದರ್ಗಾ, ನಂದರ್ಗಾದ ರೇವಣ ಸಿದ್ದೇಶ್ವರ ದೇವಾಲಯ, 12ನೇ ಶತಮಾನದ ಹಝರತ್ ಚಿತಾ ಶಾ ವಾಲಿ, ಹಜ್ರತ್ ಪೀರ್ ಕ್ವಾದ್ರಿ ದರ್ಗಾ, ಮುಲ್ಲಾಮಾರಿ ಕೆಳದಂಡೆ ಜಲಾಶಯ, ಕುಂಚವರಂ ಅರಣ್ಯ ಪ್ರದೇಶ, ಚಂದ್ರಂಪಳ್ಳಿ ಜಲಾಶಯ, ಎತ್ತಿ ಪೋತಾ ಜಲಪಾತ, ರಾಷ್ಟ್ರಕೂಟರ ರಾಜಧಾನಿ ಮಳಖೇಡ, ಕೊತ್ತಲ್ ಬಸವೇಶ್ವರ ದೇವಸ್ಥಾನಗಳು ಪ್ರವಾಸೋದ್ಯಮದ ದೃಷ್ಟಿಯಿಂದ ಜನಪ್ರಿಯವಾಗಿವೆ.
ಜಿಲ್ಲೆಯಲ್ಲಿ ಜೀವನದಿಗಳಾದ ಕೃಷ್ಣಾ, ಭೀಮಾ ಮತ್ತು ಅಮರ್ಜಾ ನದಿಗಳು ಹರಿಯುತ್ತವೆ. ಈ ಜೀವಜಲದ ಜತೆ ಇಲ್ಲಿನ ಮಣ್ಣು ಕಪ್ಪು ಮಣ್ಣಾಗಿದ್ದು ಜೋಳ, ತೊಗರಿ, ನೆಲಗಡಲೆ, ಅಕ್ಕಿ, ಕಬ್ಬು, ಸೂರ್ಯಕಾಂತಿ, ಕುಸುಬೆ, ಹೆಸರು ಕಾಳು, ಉದ್ದು ಬೆಳೆಯುತ್ತಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪ್ರಮುಖ ಯೋಜನೆಯಾಗಿದೆ.
ಶಹಬಾದ್ ಕಲ್ಲಿಗೂ ಜಿಲ್ಲೆ ಜನಪ್ರಿಯವಾಗಿದೆ. ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳು, ಕಲ್ಲು ಕತ್ತರಿಸುವ ಮತ್ತು ಹೊಳಪು ನೀಡುವ ಸಣ್ಣ ಪ್ರಮಾಣದ ಉದ್ದಿಮೆಗಳು ಇಲ್ಲಿವೆ. ಜತೆಗೆ ಬಿರ್ಲಾ ಶಕ್ತಿ, ಅಲ್ಟ್ರಾಟೆಕ್, ಸೌತ್ ಇಂಡಿಯಾ ಸಿಮೆಂಟ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳೂ ಇವೆ.
ಹೀಗಿದ್ದೂ ಜಿಲ್ಲೆಯಲ್ಲಿ ವಿದ್ಯುತ್, ನೀರು, ಶಿಕ್ಷಣ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಇಲ್ಲಿನ ಜನರು ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ವೈಜನಾಥ್ ಪಾಟೀಲ್, ಹಿರಿಯ ರಾಜಕಾರಣಿ ದಿವಂಗತ ಖಮರುಲ್ ಇಸ್ಲಾಂ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಮುಖ್ಯಮಂತ್ರಿ ದಿವಂಗತ ಧರಂ ಸಿಂಗ್ ಇದೇ ಜಿಲ್ಲೆಗೆ ಸೇರಿದವರಾಗಿದ್ದಾರೆ.
10,951 ಚದರ ಕಿಲೋಮೀಟರ್ ವಿಸ್ತಾರ ಹೊಂದಿರುವ ಜಿಲ್ಲೆಯಲ್ಲಿ ಸದ್ಯ ಹೊಸ ತಾಲೂಕುಗಳು ಸೇರಿ ಒಟ್ಟು 11 ತಾಲೂಕುಗಳಿವೆ. ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಭಾಗ್, ಆಳಂದ, ಅಫಜಲ್ಪುರ, ಕಲಬುರಗಿ, ಚಿಂಚೋಳಿ, ಸೇಡಂ, ಚಿತ್ತಾಪುರ, ಜೇವರ್ಗಿ ಇಲ್ಲಿನ ತಾಲೂಕುಗಳಾಗಿವೆ. ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭೆ ಕ್ಷೇತ್ರಗಳಿವೆ. ಆಳಂದ, ಅಫಜಲ್ಪುರ, ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂ, ಚಿತ್ತಾಪುರ, ಜೇವರ್ಗಿ ಇಲ್ಲಿನ 9 ವಿಧಾನಸಭಾ ಕ್ಷೇತ್ರಗಳಾಗಿವೆ.
2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ 9 ಕ್ಷೇತ್ರಗಳಲ್ಲಿ ಏಳನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ತಲಾ ಒಂದು ಸ್ಥಾನಗಳು ಬಿಜೆಪಿ ಮತ್ತು ಕೆಜೆಪಿ ಪಾಲಾಗಿತ್ತು. 2013ರಲ್ಲಿ ಕಲಬುರಗಿ ಗೆದ್ದವರು ಯಾರು? ಪ್ರಬಲ ಸ್ಪರ್ಧೆ ನೀಡಿಯೂ ಎಡವಿ ಬಿದ್ದ ಅಭ್ಯರ್ಥಿಗಳು ಯಾರು? ಯಾರಿಗೆ ಎಷ್ಟು ಮತ? ಗೆಲುವಿನ ಅಂತರ ಎಷ್ಟು? ಮುಂತಾದ ವಿವರಗಳು ಇಲ್ಲಿವೆ...













Click it and Unblock the Notifications