• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ವರದಿ: ಕೊರೊನಾ ಆರ್ಭಟದಲ್ಲಿ ಕಳೆಗುಂದಿದ ಸಂಕ್ರಾಂತಿ ಹಬ್ಬ

|
Google Oneindia Kannada News

ರೈತರ ಪಾಲಿಗೆ ಸುಗ್ಗಿಯಾಗಿ, ಸಾಮಾನ್ಯರಿಗೆ ಸಡಗರ ಸಂಭ್ರಮದ ಹಬ್ಬವಾಗಿ ಒಂದಷ್ಟು ಸಂಪ್ರದಾಯಗಳ ಮಿಳಿತದೊಂದಿಗೆ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬ ಕೊರೊನಾದ ಆರ್ಭಟಕ್ಕೆ ಸಿಲುಕಿ ಹೊಳಪು ಕಳೆದುಕೊಂಡಿದೆ. ಕಳೆದ ಎರಡು ವರ್ಷಗಳಿಂದ ಸಡಗರ ಸಂಭ್ರಮವಿಲ್ಲದೆ ಬರೀ ಸರಳ, ಸಂಪ್ರದಾಯಕ್ಕೆ ಸೀಮಿತವಾಗಿ ಹೋಗಿದೆ.

ಎಲ್ಲ ಹಬ್ಬಗಳ ಹಿಂದೆಯೂ ಒಂದೊಂದು ರೀತಿಯ ವೈಶಿಷ್ಟ್ಯವಿದೆ. ಸಾಮಾನ್ಯವಾಗಿ ನಾವು ಆಚರಿಸುವ ಎಲ್ಲ ಹಬ್ಬಗಳು ಕೃಷಿಯನ್ನು ಅವಲಂಬಿಸಿ ಹುಟ್ಟಿಕೊಂಡವುಗಳಾಗಿವೆ. ಅದರಲ್ಲೂ ಸಂಕ್ರಾಂತಿಯಂತು ಧಾನ್ಯಲಕ್ಷ್ಮಿ ಮನೆಗೆ ತುಂಬಿದ ಸಂಭ್ರಮದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಕಾಲ ಬದಲಾದಂತೆ ಸಂಪ್ರದಾಯದತ್ತವಾಗಿ ಬಂದ ಹಬ್ಬಗಳ ಆಚರಣೆಯಲ್ಲಿ ಬದಲಾವಣೆಗಳಾಗಿವೆ. ಸದಾ ಹಣವನ್ನು ನೋಡುವವರು ತಾವು ಮಾಡಿದ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಖರ್ಚುಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರಿಂದ ತಮಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ.

 ಹಬ್ಬದಂದು ಗಗನಕ್ಕೇರುವ ವಸ್ತುಗಳ ಬೆಲೆ

ಹಬ್ಬದಂದು ಗಗನಕ್ಕೇರುವ ವಸ್ತುಗಳ ಬೆಲೆ

ಇನ್ನೊಂದೆಡೆ ಆಯಾಯ ಹಬ್ಬದಲ್ಲಿ ಏನೇನು ವಿಶೇಷವೋ ಅಂತಹ ವಸ್ತುಗಳನ್ನು ಹಳ್ಳಿಗಳಿಂದ ಪಟ್ಟಣಕ್ಕೆ ತಂದು ಮಾರಾಟ ಮಾಡಿ ಹಣ ಮಾಡಿಕೊಳ್ಳುವುದು ಈಗ ಮಾಮೂಲಿಯಾಗಿದೆ. ಇತರೆ ದಿನಗಳಲ್ಲಿ ಬೇಡಿಕೆಯಿಲ್ಲದ ಪದಾರ್ಥಗಳಿಗೆ ಹಬ್ಬದ ಸಮಯದಲ್ಲಿ ಭಾರೀ ಬೇಡಿಕೆ ಬಂದು ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತವೆ. ವರ್ಷಕ್ಕೊಮ್ಮೆ ಹಬ್ಬ ಹಾಗಾಗಿ ನಖರಾ ಮಾಡುವುದೇಕೆ ಎಂಬ ಆಲೋಚನೆಯಿಂದ ಹೇಳಿದ ಬೆಲೆ ನೀಡಿ ಜನ ಕೊಂಡೊಯ್ಯುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಹಬ್ಬದ ದಿನ ಬಂತೆಂದರೆ ತರಕಾರಿ, ಹೂವು ಇನ್ನಿತರ ಪದಾರ್ಥಗಳ ಬೆಲೆ ಗಗನಕ್ಕೇರುವುದು ಮಾಮೂಲಿಯಾಗಿದೆ. ಜನ ಕೂಡ ಈ ಪರಿಸ್ಥಿತಿಗೆ ಮಾನಸಿಕವಾಗಿ ತಯಾರಾಗಿದ್ದಾನೆ.

ಅದೆಲ್ಲವನ್ನು ಆಚೆಗಿಟ್ಟು ಈ ಬಾರಿಯ ಸಂಕ್ರಾಂತಿಯನ್ನು ನೋಡುವುದಾದರೆ ಜನರಲ್ಲಿ ಸಂಭ್ರಮ ಕಾಣಿಸುತ್ತಿಲ್ಲ. ಕಾರಣ ಕೊರೊನಾದ ಸಂಕಷ್ಟದಲ್ಲಿ ಸಿಲುಕಿ ಹಲವು ನೋವುಗಳನ್ನು ಎದುರಿಸಿರುವ ಜನರು ಸದ್ಯ ಸರಳವಾಗಿ ಆಚರಿಸುವ ಚಿಂತನೆ ಮಾಡುತ್ತಿದ್ದಾರೆ. ಆದರೂ ನಗರಗಳಲ್ಲಿ ಹಬ್ಬದ ಖರೀದಿ ಭರಾಟೆ ಸಾಗಿರುವುದನ್ನು ತಳ್ಳಿಹಾಕುವಂತಿಲ್ಲ.

 ಎಳ್ಳು- ಬೆಲ್ಲ ತಿಂದು ಒಳ್ಳೆಯ ಮಾತಾಡು

ಎಳ್ಳು- ಬೆಲ್ಲ ತಿಂದು ಒಳ್ಳೆಯ ಮಾತಾಡು

ಇನ್ನು ಸಂಕ್ರಾಂತಿ ಆಚರಣೆ ಬಗ್ಗೆ ಹೇಳುವುದಾದರೆ "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು' ಎನ್ನುವುದು ಹಬ್ಬದ ಸಂದರ್ಭದಲ್ಲಿ ಕೇಳಿ ಬರುವ ಮಾತು. ಹೀಗಾಗಿ ಮನೆ, ಮನೆಗೆ ಎಳ್ಳುಬೆಲ್ಲ ಬೀರುವುದು ಸಂಪ್ರದಾಯವಾಗಿ ಮುಂದುವರೆದುಕೊಂಡು ಬಂದಿದೆ.

ಆಚರಣೆ ಬಗ್ಗೆ ಹೇಳುವುದಾದರೆ ಸಂಕ್ರಾಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳಗಳಲ್ಲಿ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ'ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬರುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ- ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ 22ಕ್ಕೆ ಆದರೂ, ಹಿಂದಿನಂತೆಯೇ ಜನವರಿ 14ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.

 ಉತ್ತರಾಯಣ ಪರ್ವ ಕಾಲ ಕಾದಿದ್ದ ಭೀಷ್ಮ

ಉತ್ತರಾಯಣ ಪರ್ವ ಕಾಲ ಕಾದಿದ್ದ ಭೀಷ್ಮ

ಇಚ್ಛಾಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬುದು ಮಹಾಭಾರತದಲ್ಲಿ ಬರುವ ಕಥೆಯಾಗಿದೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್' ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಕಾಲ ನಡೆಯುತ್ತದೆ. ಈ ಸಂದರ್ಭ ಹೊಸಬಟ್ಟೆ ತೊಡುವುದು, ಸಮೃದ್ಧಿಯ ಸಂಕೇತವಾಗಿ ಹಾಲು- ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸುವುದು, ಗೋಪೂಜೆ, ಗೂಳಿಯನ್ನು ಪಳಗಿಸುವ ಆಟವೂ ನಡೆಯುತ್ತದೆ.

ಹಲವೆಡೆ ವರ್ಷಪೂರ್ತಿ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯವೂ ಇದೆ. ಜಲ್ಲಿಕಟ್ಟು ಸ್ಪರ್ಧೆಯೂ ನಡೆಯುತ್ತದೆ. ಕೇರಳದಲ್ಲಿ ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರಜ್ಯೋತಿ ಕಾಣಿಸುತ್ತದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿದೆ.

 ಕಾಲಕ್ಕೆ ತಕ್ಕಂತೆ ಹಬ್ಬಗಳಲ್ಲಿ ಬದಲಾವಣೆ

ಕಾಲಕ್ಕೆ ತಕ್ಕಂತೆ ಹಬ್ಬಗಳಲ್ಲಿ ಬದಲಾವಣೆ

ದೇಶದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಹಾಗೂ ಎಳ್ಳಿನ ಉಂಡೆಗಳನ್ನು ಹಂಚುವ ಸಂಪ್ರದಾಯವೂ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಒಂದಷ್ಟು ಭಿನ್ನತೆ ಕಂಡುಬಂದರೂ ಅದರ ಹಿಂದಿನ ಸಾರ ಒಂದೇ ಆಗಿದೆ.

ಬದಲಾದ ಕಾಲದಲ್ಲಿ ಜನರು ಆರ್ಥಿಕವಾಗಿ ಸದೃಢರಾಗುತ್ತಿರುವುದರಿಂದ ತಮ್ಮ ಹಬ್ಬಗಳಲ್ಲಿ ಸಂಪ್ರದಾಯಕ್ಕಿಂತ ಹೆಚ್ಚಾಗಿ ಸಡಗರ ಸಂಭ್ರಮ ಮತ್ತು ಅದ್ಧೂರಿತನಕ್ಕೆ ಮತ್ತು ಮೋಜು ಮಸ್ತಿಗೆ ಒತ್ತು ನೀಡುತ್ತಿರುವುದರಿಂದ ಹಬ್ಬಗಳು ಒಂದಷ್ಟು ಬದಲಾವಣೆಯನ್ನು ಕಾಣುತ್ತಿವೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಜಗದ ನಿಯಮವಾಗಿರುವುದರಿಂದ ನಾವೆಲ್ಲರೂ ಅದಕ್ಕೆ ತಲೆಬಾಗುವುದು ಅನಿವಾರ್ಯವಾಗಿದೆ. ಅದು ಏನೇ ಇರಲಿ ಸಂಕ್ರಾಂತಿ ಹಬ್ಬ ಎಲ್ಲರಿಗೂ ಒಳಿತು ಮಾಡಲಿ ಎಂಬುದಷ್ಟೇ ಆಶಯವಾಗಿದೆ.

English summary
Makara Sankranti 2022: Due to Coronavirus Cases increases, the last two years have not been a happiness in sankranti festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X