Diwali 2023: ದೀಪಾವಳಿಯಂದು ನೀವು ಮಾಡಲೇ ಬೇಕಾದ ಕೆಲಸಗಳಿವು..!
ಬೆಳಕಿನ ಹಬ್ಬ ದೀಪಾವಳಿ ಎಂದರೆ ಜನರಿಗೆ ಎಲ್ಲಿಲ್ಲದ ಸಂಭ್ರಮ. ಯಾವುದೇ ಹಬ್ಬವನ್ನು ಆಚರಿಸದವರು ಅಥವಾ ಸರಳವಾಗಿ ಆಚರಿಸುವವರು ಈ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಬಡವ ಬಲ್ಲಿದ ಎನ್ನುವ ಬೇಧವಿಲ್ಲದೇ ಈ ಹಬ್ಬದ ಆಚರಣೆಯು ಪ್ರತಿ ಮನೆಗೂ ಸಂತಸವನ್ನು ತರುತ್ತದೆ.
ದೀಪಾವಳಿ ಹಬ್ಬವನ್ನು ದೇಶದ ಹಲವೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವೆಡೆ 5 ದಿನಗಳ ಕಾಲ ಹಬ್ಬ ಆಚರಿಸಿದರೆ, ಇನ್ನೂ ಕೆಲವೆಡೆ 3 ದಿನಗಳು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆದು ಅಂದೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಹೊಸ ಬಟ್ಟೆ, ಸಿಹಿ ತಿಂಡಿ, ಪೂಜೆ, ಪಟಾಕಿ ಈ ಎಲ್ಲಾ ಸಂಭ್ರಮದ ಮಧ್ಯೆ ದೀಪಾವಳಿಯ ದಿನ ನೀವು ಮಾಡಲೇ ಬೇಕಾದ ಕೆಲವು ಸಲಹೆಗಳನ್ನು ನೀಡಲಾಗಿದೆ.
ಮುಂಜಾನೆ ಅಭ್ಯಂಗನ ಸ್ನಾನ
ದೀಪಾವಳಿ ಹಬ್ಬ ಆಚರಿಸುವ ದಿನಗಳಲ್ಲಿ ಬೆಳಗ್ಗೆ ಬೇಗ ಏಳಬೇಕು. ಬೇಗ ಎದ್ದು ತಣ್ಣೀರಿನಿಂದ ಅಭ್ಯಂಗನ ಸ್ನಾನ ಮಾಡಿ. ಕೆಲವು ಭಾಗಗಳಲ್ಲಿ ಎಣ್ಣೆ ಸ್ನಾನ ಎನ್ನುವ ಪದ್ಧತಿ ಇರುತ್ತದೆ. ಯುಗಾದಿಯಂತೆ ದೀಪಾವಳಿಯ ದಿನವು ಮನೆ ಮಂದಿ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ. ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಬೆರೆಸಿ ಸ್ನಾನ ಮಾಡುವುದು ಉತ್ತಮ. ದೀಪಾವಳಿ ಆಚರಣೆಯ ಸೋಗಿನಲ್ಲಿ ಚರ್ಮದ ಆರೋಗ್ಯಕ್ಕೆ ಹಿತವಾದ ಬೇವಿನ ನೀರಿನ ಸ್ನಾನ ಮಾಡಬಹುದು.
ಶುಭ್ರ ಅಥವಾ ಹೊಸ ಬಟ್ಟೆ ಧರಿಸಿ
ನೀವು ಧರಿಸುವ ಬಟ್ಟೆ ನಿಮ್ಮ ಅಂದಿನ ಆ ಕ್ಷಣದ ಮನಸ್ಥಿತಿಯನ್ನು ಅಳೆಯುತ್ತದೆ. ಮನೆ ಸ್ವಚ್ಛತೆ ಸ್ನಾನ ಮಾಡಿದ ಬಳಿಕ ಶುಭ್ರ ಅಥವಾ ಹೊಸ ಬಟ್ಟೆಯನ್ನು ಧರಿಸಿ. ಇದರಿಂದ ನಿಮ್ಮಲ್ಲಿ ಹಬ್ಬದ ಮನೋಭಾವ ಮೂಡುತ್ತದೆ. ಹಬ್ಬದ ಸಂಭ್ರಮ ನಿಮ್ಮಲ್ಲಿ ಹೆಚ್ಚಾಗುತ್ತದೆ. ದಿನ ನಿತ್ಯದ ಬಳಕೆ ಬಟ್ಟೆಗಳಿಗಿಂತ ಹಬ್ಬದ ದಿನಗಳಲ್ಲಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಹಬ್ಬದ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ

ಗುರು-ಹಿರಿಯರ ಆರ್ಶೀವಾದ ಪಡೆಯಿರಿ
ಹಬ್ಬದ ದಿನಗಳಲ್ಲಿ ವಿಶೇಷ ದಿನಗಳಲ್ಲಿ ಗುರು-ಹಿರಿಯರ ಆರ್ಶೀವಾದ ಪಡೆಯಬೇಕು. ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ, ಮೊದಲು ಅವರ ಆರ್ಶೀವಾದ ಪಡೆಯಿರಿ. ನಿಮಗೆ ಅವರ ಮೇಲಿನ ಗೌರವವನ್ನು ತೋರಿಸಿ. ಬಳಿಕ ಅಪ್ಪ-ಅಮ್ಮನ ಆಶೀರ್ವಾದ ಪಡೆದು ಹಬ್ಬದ ಆಚರಣೆಯನ್ನು ಆರಂಭಿಸಿ. ಹಿರಿಯರ ಆರ್ಶೀವಾದ ಇದ್ದರೆ ಎಲ್ಲಾ ಕೆಲಸಗಳು ಕೂಡ ನಿವಿಘ್ನವಾಗಿ ನಡೆಯುತ್ತದೆ ಎನ್ನುವ ನಂಬಿಕೆ ಇದೆ.
ದೇವಾಲಯಗಳಿಗೆ ಭೇಟಿ ನೀಡಿ
ದೀಪಾವಳಿಯ ದಿನದಂದು ನಿಮ್ಮ ಇಷ್ಟದ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ. ಇನ್ನು ಹಬ್ಬದ ದಿನ ಮನೆ ದೇವರ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಂಪ್ರದಾಯಗಳು ಹಲೆವಡೆ ಇದೆ. ಕುಟುಂಬಸ್ಥರೊಂದಿಗೆ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಶಾಂತಿ ದೊರೆಯುತ್ತದೆ.
ಮನೆಯಲ್ಲಿ ಪೂಜೆ ಮಾಡಿ
ದೀಪಾವಳಿಯ ಹಬ್ಬದಂದು ಬಹುತೇಕರ ಮನೆಯಲ್ಲಿ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ವರ ಮಹಾಲಕ್ಷ್ಮೀ ದಿನದಂದು ಲಕ್ಷ್ಮೀ ಪೂಜೆ ಮಾಡದವರು ಸಹ ದೀಪಾವಳಿಯಂದೇ ಮನೆಯಲ್ಲಿ ಲಕ್ಷ್ಮೀ ಕೂರಿಸಿ ವಿಶೇಷ ಪೂಜೆ ಮಾಡುತ್ತಾರೆ. ಒಂದು ಮಣೆಯ ಮೇಲೆ ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಕಳಶವನ್ನು ಕೂರಿಸಿ ಅಲಂಕರಿಸಿ. ಸೀರೆ, ಬಳೆ, ಆಭರಣಗಳನ್ನು ತೊಡಿಸಿದ ಬಳಿಕ ಹೂವಿನಿಂದ ಅಲಂಕರಿಸಿ. ಬಳಿಕ ಮನೆಯಲ್ಲಿರುವ ಧನ-ಕನಕಗಳನ್ನು ದೇವರ ಮುಂದೆ ಇರಿಸಿ. ಜೊತೆಗೆ ಒಂದಿಷ್ಟು ಸಿಹಿ-ತಿಂಗಳನ್ನು ದೇವ ಮುಂದೆ ಇರಿಸಿ. ಆರತಿ ಮಾಡಿ ಪೂಜೆಯ ವಿಧಿವಿಧಾನಗಳನ್ನು ಪೂರೈಸಿ.
ದೀಪಗಳನ್ನು ಬೆಳಗಿಸಿ
ದೀಪಾವಳಿಯ ಬಹುಮುಖ್ಯವಾದ ಅಂಗ ಅಂದರೆ ದೀಪಗಳನ್ನು ಬೆಳಗಿಸುವುದು. ಮನೆ, ದೇವಾಲಯ, ತುಳಸಿ ಕಟ್ಟೆಗಳ ಮೇಲೆ ದೀಪಗಳನ್ನು ಬೆಳಗಿಸಿ. ದೀಪಗಳಿಂದಲೇ ಮನೆಯನ್ನು ಅಲಂಕರಿಸಿ. ಮಣ್ಣಿನ ಹಣತೆಗೆ ದೀಪದ ಎಣ್ಣೆ ಹಾಕಿ ಹತ್ತಿಯ ಬತ್ತಿಯಿಂದ ದೀಪಗಳನ್ನು ಹಚ್ಚಿ. ಆ ಘಮ ಮನೆಯೆಲ್ಲಾ ಹಬ್ಬಲಿ. ಪರಿಸರಕ್ಕೆ ಹಾನಿಯಾದ ಪಟಾಕಿಗಳನ್ನು ಸಿಡಿಸುವ ಬದಲು ದೀಪಗಳಿಂದಲೇ ದೀಪಾವಳಿಯನ್ನು ಆಚರಿಸಿ.












Click it and Unblock the Notifications