ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಅರಮನೆ ವಿಹಂಗಮ ನೋಟ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಇವತ್ತು ವಿಶ್ವವಿಖ್ಯಾತಿ ಪಡೆದಿದ್ದರೆ ಅದಕ್ಕೆ ಕಾರಣ ಇಲ್ಲಿರುವ ಭವ್ಯ ಅರಮನೆಗಳು, ಪಾರಂಪರಿಕ ಕಟ್ಟಡಗಳು ಎಂದರೆ ತಪ್ಪಾಗಲಾರದು.

ಮೈಸೂರಿಗೊಂದು ಸುತ್ತು ಹೊಡೆದಿದ್ದೇ ಆದರೆ ಜಗತ್ಪ್ರಸಿದ್ಧ ಅಂಬಾವಿಲಾಸ ಅರಮನೆಯಲ್ಲದೆ, ಇನ್ನೂ ಹತ್ತಾರು ಅರಮನೆಗಳು ನಮಗೆ ಕಾಣಸಿಗುತ್ತವೆ. ಇಲ್ಲಿರುವ ಅರಮನೆಗಳಲ್ಲದೆ, ಪಾರಂಪರಿಕ ಕಟ್ಟಡಗಳು ಕೂಡ ಅಂದಿನ ರಾಜವೈಭವದ ಪ್ರತೀಕಗಳಾಗಿದ್ದು, ಇತಿಹಾಸ ಸಾರುತ್ತಾ ನಿಂತಿವೆ. ಅರಮನೆಗಳ ಪೈಕಿ ಕೆಲವು ಅರಮನೆಗಳನ್ನು ಆಗಿನ ಕಾಲದ ರಾಜ ಮಹಾರಾಜರು ವಾಸಕ್ಕಾಗಿ ನಿರ್ಮಿಸಿದ್ದರೆ, ಇನ್ನು ಕೆಲವನ್ನು ವಿಶ್ರಾಂತಿ ಪಡೆಯಲು, ಮತ್ತೆ ಕೆಲವನ್ನು ತಮ್ಮ ಸಹೋದರಿಯರ ಮೇಲಿನ ಪ್ರೀತಿಗಾಗಿ ನಿರ್ಮಿಸಿದ್ದಾರೆ. ಆದರೆ ಆಗಿನ ಅರಮನೆಗಳು ಇಂದು ಅರಮನೆಯಾಗಿ ಉಳಿಯದೆ ಸರ್ಕಾರಿ ಕಛೇರಿ, ವಿಶ್ರಾಂತಿ ಗೃಹ, ಐಷರಾಮಿ ಹೋಟೆಲ್‌ಗಳಾಗಿ ಮಾರ್ಪಾಡಾಗಿರುವುದನ್ನು ನಾವು ಕಾಣಬಹುದು.

ಅಂಬಾವಿಲಾಸ ಅರಮನೆ ಕಥೆ:ಮೈಸೂರು ಅರಮನೆ ಎಂದಾಕ್ಷಣ ವಿದ್ಯುತ್ ದೀಪಗಳಿಂದ ಝಗಮಗಿಸುವ ಭವ್ಯ ಅಂಬಾವಿಲಾಸ ಅರಮನೆಯ ಚಿತ್ರಣ ಎಲ್ಲರ ಕಣ್ಮುಂದೆ ಹಾದುಹೋಗದಿರದು. ನುರಿತ ಶಿಲ್ಪಿಗಳಿಂದ ವಿಶಿಷ್ಟ ವಾಸ್ತುಶಿಲ್ಪ ಹಾಗೂ ವಿನ್ಯಾಸದಿಂದ ನಿರ್ಮಾಣವಾಗಿರುವ ಈ ಅರಮನೆಗೆ ಸಾಟಿಯೇ ಇಲ್ಲ ಎನ್ನಬಹುದು. ದಸರಾ ದಿನಗಳಲ್ಲಿ ವಿದ್ಯುತ್ ಅಲಂಕೃತ ದೀಪಗಳಿಂದ ಜಗಮಗಿಸುತ್ತಿದ್ದರೆ ದೇವಲೊಕವೇ ಇಳಿದು ಬಂದಿದೆಯೇನೋ ಎಂಬಂತೆ ಭಾಸವಾಗದಿರದು.

ಅಂಬಾವಿಲಾಸ ಅರಮನೆ ಹೊರತು ಇಂತಹ ವಿಶಿಷ್ಟ ಅರಮನೆಯನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಇಂತಹವೊಂದು ಅರಮನೆ ನಿರ್ಮಾಣ ಮಾಡಿದ ಕೀರ್ತಿ ಮೈಸೂರನ್ನಾಳಿದ ಮಹಾರಾಜರುಗಳಿಗೆ ಸೇರಬೇಕು.

ಹಳೆಯ ಅರಮನೆ 1800 ಮತ್ತು 1804 ರಲ್ಲಿ ಕಟ್ಟಲಾಗಿತ್ತು. ಈ ಅರಮನೆಯು ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದರಿಂದ 1897ರಲ್ಲಿ ಈ ಅರಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಯಿತು. ಆ ನಂತರ ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಇದರ ಜವಾಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿಇರ್‍ವಿನ್‌ರವರಿಗೆ ವಹಿಸಲಾಯಿತು.

ಅರಮನೆಯ ನಕಾಶೆ ರೂಪಿಸಿದ ಹೆನ್ರಿಇರ್‍ವಿನ್‌ರವರಿಗೆ ಆಗ ನೀಡಿದ ಶುಲ್ಕ 12 ಸಾವಿರವಂತೆ. ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು ಇದಕ್ಕಾಗಿ ಒಡೆಯರ್ ಮಾಡಿದ ಖರ್ಚು 2439 ರೂಪಾಯಿ 4 ಆಣೆ 8 ಕಾಸಂತೆ. ಜೊತೆಗೆ ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಅರಮನೆಯ ನಿರ್ಮಾಣದ ಸಂದರ್ಭ ಅನುಸರಿಸಲಾಯಿತು ಎನ್ನಲಾಗಿದೆ.

ನಂತರ 1897 ರಿಂದ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913 ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು.

ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ.

ಕೆಳಗಿನ ಉಪ್ಪರಿಗೆಗೆ ಬಂದರೆ ಅಂಗಳದ ಉತ್ತರ ಭಾಗದಲ್ಲಿ ಆಯುಧಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರಮಂಟಪವಿದೆ. ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ.

ಅರಮನೆಯ ದಕ್ಷಿಣ ಭಾಗದಲ್ಲಿ ರಾಣೀವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಇವು ಅಂಬಾವಿಲಾಸ ಸಭಾಭವನದವರೆಗೂ ವಿಸ್ತರಿಸಿವೆ. ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ. ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ.

ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪಗಳ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ, ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ.

ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ.

ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ. ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ.

ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ.

ವಿದ್ಯುತ್ ದೀಪಾಲಂಕಾರದಲ್ಲಿ ಅರಮನೆ: ಅರಮನೆಯ ಸುತ್ತಲೂ ಇರುವ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ ದಿಡ್ಡಿ ಬಾಗಿಲುಗಳು ಗೋಪುರ ಶಿಖರಗಳಿಂದ ಕೆತ್ತನೆಯ ಕಮಾನು ರಚನೆಗಳಿಂದ ಶೋಭಿಸುತ್ತಿದ್ದು ಅರಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಭಾಗದಲ್ಲಿರುವ ಉದ್ಯಾನವನ ಸುಂದರವಾಗಿದ್ದು ಅರಮನೆಗೆ ಶೋಭೆ ತಂದಿದೆ. ಅರಮನೆಗೆ ಸುಮಾರು 97ಸಾವಿರ ವಿದ್ಯುತ್ ಬಲ್ಬ್‌ಗಳಿಂದ ಅಲಂಕರಿಸಲಾಗಿದ್ದು, ಇದು ರಾತ್ರಿ ವೇಳೆಯಲ್ಲಿ ಒಮ್ಮೆಗೆ ಬೆಳಗುವಾಗ ಕಾಣುವ ಸುಂದರದೃಶ್ಯ ವರ್ಣಿಸಲಾರದ್ದು, ಸ್ವರ್ಗವೆಂದರೆ ಇದೇ ಇರಬಹುದೇನೋ ಎಂಬ ಕಲ್ಪನೆ ವೀಕ್ಷಕರಲ್ಲಿ ಮೂಡದಿರದು.

<strong>ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ</strong>ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X