ಕೊನೆಗೂ ಬೆಂಗಳೂರಿಗೆ ಎಂಟ್ರಿ ಕೊಟ್ಟ ವಿಶ್ವದ ಮೊದಲ ಸಿಎನ್‌ಜಿ ಬೈಕ್- ಖರೀದಿಗೆ ಮುಗಿಬಿದ್ದ ಗ್ರಾಹಕರು
World's First CNG Bike: ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿಗಳ ಕ್ರಾಂತಿಯೇ ಆಗುತ್ತಿದೆ. ಹಾಗೆಯೇ ದ್ವಿಚಕ್ರ ವಾಹನ ವಿಭಾಗದಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಬೈಕ್ಎಂದರೆ ಅದು ಬಜಾಜ್ ಪ್ಲಾಟಿನಂ. ಇದೀಗ ಇದೇ ಬಜಾಜ್ ಕಂಪನಿಯ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಕೊನೆಗೂ ಬೆಂಗಳೂರಿಗೆ ಲಗ್ಗೆಯಿಟ್ಟಿದೆ. ಹಾಗಾದರೆ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಎಂಬ ಹೆಗ್ಗಳಿಕೆ ಪಾತ್ರ ಆಗಿರುವ ಬಜಾಜ್ ಫ್ರೀಡಂ 125 ಬೈಕ್ ಅನ್ನು ಪರಿಚಯಿಸಲಾಗಿದೆ ಇದೀಗ ಈ ಹೊಸ ಬೈಕ್ ಮಾದರಿ ಬೆಂಗಳೂರಿಗೂ ಎಂಟ್ರಿ ಕೊಟ್ಟಿದೆ. ಇದು ನೋಡುಗರಿಗೆ ಅತ್ಯಾಕರ್ಷಕವಾಗಿದ್ದು, ಅಲ್ಲದೆ, ಅತ್ಯಾಧುನಿಕ ಸೌಲಭ್ಯಗಳು ಹಾಗೂ ಕೈಗೆಟಕುವ ದರದಲ್ಲಿ ಬಿಡುಗಡೆ ಮಾಡಿರುವುದರಿಂದ ಗ್ರಾಹಕರು ನಾ ಮುಂದು ತಾ ಮುಂದು ಎನ್ನುವ ರೀತಿಯಲ್ಲಿ ಖರೀದಿಸಲು ಮುಗಿಬೀಳುತ್ತಿದ್ದಾರೆ.

ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಮಾದರಿಯು ಡಿಸ್ಕ್ ಎಲ್ಇಡಿ, ಡ್ರಮ್ ಎಲ್ಇಡಿ ಮತ್ತು ಡ್ರಮ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬೆಂಗಳೂರಿಲ್ಲಿ ಇದರ ಆನ್ ರೋಡ್ ಪ್ರಕಾರ ಆರಂಭಿಕ ಬೆಲೆ 1.18 ಲಕ್ಷ ರೂಪಾಯಿ, ಟಾಪ್ ಎಂಡ್ ವೆರಿಯೆಂಟ್‌ಗೆ 1.43 ಲಕ್ಷ ರೂಪಾಯಿ ಬೆಲೆ ಹೊಂದಿದೆ.
ಪೆಟ್ರೋಲ್ ಮತ್ತು ಸಿಎನ್‌ಜಿ ಎರಡೂ ಮಾದರಿಯಲ್ಲೂ ಚಾಲನೆಗೊಳ್ಳುವ ಹೊಸ ಬೈಕ್ ಮಾದರಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇದರಲ್ಲಿ 125ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಜೋಡಣೆ ಮಾಡಲಾಗಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ 9.5 ಹಾರ್ಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.
ಈ ಮೂಲಕ ಇದು ಪ್ರತಿ ಕೆಜಿ ಸಿಎನ್‌ಜಿಗೆ ಬರೋಬ್ಬರಿ 100 ಕಿಲೋ ಮೀಟರ್ ಮೈಲೇಜ್ ನೀಡುತ್ತೆ. ಈ ಬೈಕ್‌ನಲ್ಲಿ ಒಟ್ಟು 2 ಕೆಜಿ ಸಾಮರ್ಥ್ಯದ ಸಿಎನ್‌ಜಿ ಟ್ಯಾಂಕ್ ನೀಡಲಾಗಿದ್ದು, ಒಂದು ಬಾರಿ ಟ್ಯಾಂಕ್ ಭರ್ತಿಯಾದರೆ 200 ಕಿಲೋ ಮೀಟರ್ ಮೈಲೇಜ್ ನೀಡಲಿದೆ.
ಸಿಎನ್‌ಜಿ ಟ್ಯಾಂಕ್ ಜೊತೆಗೆ ಹೊಸ ಬೈಕ್‌ನಲ್ಲಿ 2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಕೂಡ ಜೋಡಣೆ ಮಾಡಲಾಗಿದ್ದು, ಕೇವಲ ಒಂದು ಲೀಟರ್ ಪೆಟ್ರೋಲ್‌ಗೆ ಸುಮಾರು 130 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್‌ಜಿ ಮತ್ತು ಪೆಟ್ರೋಲ್ ಟ್ಯಾಂಕ್ ಅನ್ನು ಭರ್ತಿ ಮಾಡಿದರೆ ಒಟ್ಟಾರೆಯಾಗಿ 330 ಕಿಲೋ ಮೀಟರ್ ಮೈಲೇಕ್ ನೀಡಲಿದೆ ಎಂದು ಕಂಪನಿ ಮೂಲಗಳಿಂದ ತಿಳಿದುಬಂದಿದೆ.
ಬಜಾಜ್ ಕಂಪನಿಯ ಅಧಿಕಾರಿಗಳು ಹಂಚಿಕೊಂಡ ಮಾಹಿತಿಗಳ ಪ್ರಕಾರ ಹೊಸ ಬೈಕ್ ಅನ್ನು ಸಿಎನ್‌ಜಿ ಸಹಾಯದೊಂದಿಗೆ 1 ಕಿಲೋ ಮೀಟರ್ ದೂರವನ್ನು 1 ರೂಪಾಯಿಗಿಂತಲೂ ಕಡಿಮೆ ವೆಚ್ಚದಲ್ಲಿ ಚಲಿಸಬಹುದಾಗಿದ್ದರೆ, ಸಂಪೂರ್ಣವಾಗಿ ಪೆಟ್ರೋಲ್ ಮೂಲಕ 1 ಕಿ.ಮೀ ಕ್ರಮಿಸಲು 2.25 ವೆಚ್ಚ ಆಗಲಿದೆ ಎನ್ನುತ್ತಾರೆ. ಆದ್ದರಿಂದ ಸಿಎನ್‌ಜಿ ಆಯ್ಕೆಯು ಗ್ರಾಹಕರಿಗೆ ಹಣ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಮತ್ತೊಂದೆಡೆ ಪರಿಸರಕ್ಕಾಗುವ ಹಾನಿಯನ್ನು ತಡೆಗಟ್ಟಲಿದೆ.
ಈ ಬೈಕ್‌ನ ಆಸನದ ಕೆಳಭಾಗದಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ಟೆಲ್ಲಿಸ್ ಫ್ರೇಮ್ ಚಾರ್ಸಿ ಮಧ್ಯದಲ್ಲಿ ಸುರಕ್ಷಿತವಾಗಿ ಜೋಡಣೆ ಮಾಡಿದ್ದು, ಸಿಎನ್‌ಜಿ ಟ್ಯಾಂಕ್ ಆಸನ ಕೆಳಭಾಗದಲ್ಲಿ ಇರುವುದರಿಂದ ಬೈಕ್‌ನ ಆಸನದ ಉದ್ದಳತೆಯು ಸಾಮಾನ್ಯ ಬೈಕ್ ಮಾದರಿಗಿಂತಲೂ ಶೇಕಡ 20ರಷ್ಟು ಹೆಚ್ಚಳ ಆಗಿದೆ. ಹಾಗೆಯೇ ಸಿಎನ್‌ಜಿ ಟ್ಯಾಂಕ್ ಸುರಕ್ಷತೆ ಖಾತ್ರಿಪಡಿಸಲು ಬರೋಬ್ಬರಿ 11 ರೀತಿಯ ಅಪಘಾತ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಎಲ್ಲಾ ಪರೀಕ್ಷೆಗಳಲ್ಲೂ ಸಿಎನ್‌ಜಿ ಟ್ಯಾಂಕ್‌ಗೆ ಯಾವುದೇ ರೀತಿಯ ಹಾನಿಯಾಗದೆ ಬಾಡಿ ಫ್ರೇಮ್ ಅಲವಡಿಕೆ ಮಾಡಲಾಗಿದೆ.
ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಲೈಟಿಂಗ್ಸ್, ಎಲ್‌ಸಿಡಿ ಸ್ಕ್ರೀನ್‌ನೊಂದಿಗೆ ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಹೊಸ ಬೈಕ್ 7 ಬಣ್ಣಗಳಲ್ಲಿ ಲಭ್ಯವಿದೆ. ಇದುವರೆಗೆ ಸುಮಾರು 60 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಬೈಕ್ ಖರೀದಿಗಾಗಿ ಬುಕಿಂಗ್ ದಾಖಲಿಸಿದ್ದಾರೆ ಎಂದು ಕಂಪನಿ ಮೂಗಳಿಂದ ತಿಳಿದುಬಂದಿದೆ.












Click it and Unblock the Notifications