ನಮ್ಮತ್ತೆ ಬೇಗ ಸಾಯಬೇಕು ಎಂದು ದೇವರಿಗೆ ₹20 ಹರಕೆ ಕಾಣಿಕೆ ಕೊಟ್ಟ ಸೊಸೆ
ಹಿಂದಿನಿಂದಲೂ ಕುಟುಂಬದಲ್ಲಿ ಅತ್ತೆ-ಸೊಸೆ ನಡುವೆ ಜಗಳಗಳು ನಡೆದುಕೊಂಡೇ ಬಂದಿವೆ. ಈ ಕಾಲದಲ್ಲಿ ಅತ್ತೆ-ಸೊಸೆ ನಡುವೆ ಕಲಹಗಳು ಪ್ರತಿನಿತ್ಯವೂ ನಡೆಯುತ್ತಲೇ ಇರುತ್ತವೆ. ಇನ್ನು ಅತ್ತೆ-ಸೊಸೆ ಕಲಹ ಎಂದಾಕ್ಷಣ ಎಲ್ಲರ ಮನೇಲಿ ನಡೀತಿರೋದೆ ಎಂದು ಸುಮ್ಮನೆ ಮುಂದಕ್ಕೆ ಹೋಗುವವರೇ ಹೆಚ್ಚು. ಇದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿರುವ ಸಾಕ್ಷಿ ಇವೆ.
ಬಹುತೇಕ ಅತ್ತೆಯಂದಿರು ನನ್ನ ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದೇ ಬಯಸುತ್ತಾರೆ. ಕುಟುಂಬದಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಬರುವುದು ಸಾಮಾನ್ಯ. ಆದ್ರೆ ಈಗಿನ ಮಾಡ್ರನ್ ಸೊಸೆಯೊಬ್ಬರು ತನ್ನ ಅತ್ತೆ ಬೇಗ ಸಾಯಬೇಕು ಎಂದು ದೇವರಲ್ಲಿ ಪ್ರಾರ್ಥಿಸಿ ಹರಕೆ ಕಟ್ಟುವ ಹಂತಕ್ಕೆ ತಲುಪಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರು ತಮ್ಮ ಕುಟುಂಬ ಚೆನ್ನಾಗಿರಲಿ. ಗಂಡ-ಮಕ್ಕಳು ಕ್ಷೇಮವಾಗಿರಲಿ, ನಮ್ಮ ಕುಟುಂಬದ ಆಯಸ್ಸು ಗಟ್ಟಿಯಾಗಲಿ ಎಂದೆಲ್ಲ ದೇವರ ಮುಂದೆ ನಿಂತು ಕೇಳಿಕೊಳ್ಳುವುದನ್ನು ನೋಡಿರುತ್ತೀವಿ. ಆದರೆ. ಸೊಸೆಯೊಬ್ಬರು ತನ್ನ ಅತ್ತೆ ಮೇಲೆ ಅದೇನು ಕೋಪ ಇತ್ತೋ ಏನೋ ಗೊತ್ತಿಲ್ಲ, ತಾಯಿ ಬೇಗ ನನ್ನ ಅತ್ತೆ ಸಾಯಬೇಕು ಎಂದು ಹರಕೆ ಹೊತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
20 ರೂಪಾಯಿ ನೋಟಿನ ಮೇಲೆ ಸೊಸೆಯೊಬ್ಬರು ಈ ರೀತಿ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹುಂಡಿಯಲ್ಲಿ ಕಾಣಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಈ ವಿಚಿತ್ರ ಸಂಗತಿ ನಡೆದಿರುವುದು ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಎನ್ನಲಾಗಿದೆ.
ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾದ ನೋಟಿನಲ್ಲಿ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆದಿರುವುದನ್ನು ಕಂಡು ದೇವಸ್ಥಾನದವರು ಶಾಕ್ ಆಗಿದ್ದಾರೆ. ದೇವಿಯ ಹುಂಡಿಯಲ್ಲಿನ ಹಣ ಎಣಿಕೆ ಮಾಡುವಾಗ ಈ ನೋಟು ಪತ್ತೆಯಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ನೋಟಿನ ಫೋಟೋ ವೈರಲ್ ಆಗಿದೆ.
ಕೆಲ ತಿಂಗಳ ಹಿಂದೆ ಈ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬರು 20 ರೂಪಾಯಿ ನೋಟಿನ ಮೇಲೆ ಈ ರೀತಿ ಅತ್ತೆಯ ಸಾವನ್ನು ಬಯಸಿ, ಹರಕೆ ಕಾಣಿಕೆ ಹಾಕಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಒಂದು ಹೆಣ್ಣಿನ ಸ್ಥಾನದಲ್ಲಿದ್ದು ತನ್ನ ಅತ್ತೆ ಮೇಲೆ ಅದೆಷ್ಟೇ ಕೋಪವಿದ್ದರೂ ಸಾವನ್ನು ಬಯಸುವಷ್ಟು ಕ್ರೂರಿಯಾಗಬಾರದು ಕೆಲವರು ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಫೋಟೋ ಹಂಚಿಕೊಂಡಿರುವ ಹಲವರು ಈ ಶತಮಾನದ ಮಾದರಿ ಹೆಣ್ಣೇ ಇಂತಹ ಹರಕೆ ಹೊತ್ತಿರಲು ಸಾಧ್ಯ. ದೇವರ ಮೇಲಿನ ಭಕ್ತಿಗಿಂತ, ಅತ್ತೆ ಮೇಲಿನ ದ್ವೇಷಕ್ಕೆ ಇದೊಂದು ಉತ್ತಮ ನಿದರ್ಶನ ಎಂದೆಲ್ಲ ಟೀಕಿಸಿದ್ದಾರೆ. ಸಾಮಾನ್ಯವಾಗಿ ದೇವರ ಬಳಿ ಎಲ್ಲರೂ ಒಳ್ಳೆಯದನ್ನೇ ಬೇಡಿಕೊಳ್ಳುತ್ತಾರೆ. ಈ ರೀತಿ ಸಾವು ಬಯಸುವವರು ಮಾಂತ್ರಿಕರ ಬಳಿ ಹೋಗ್ತಾರೆ. ಆದ್ರೆ, ಈ ಮಹಿಳೆ ದೇವರ ಬಳಿಗೇ ಬಂದು ತನ್ನ ಅತ್ತೆಯ ಸಾವು ಬಯಸಿ ಹರಕೆ ಕಟ್ಟಿದ್ದಾರೆ ಅಂದ್ರೆ, ಅವರನ್ನೊಮ್ಮೆ ನೋಡಲೇಬೇಕು ಎಂದು ಕಾಮೆಂಟ್‌ಗಳನ್ನ ಮಾಡಿದ್ದಾರೆ.












Click it and Unblock the Notifications