Maha Kumbh Mela 2025: ಮಹಾ ಕುಂಭಮೇಳದ ಮೊನಾಲಿಸಾ ಮನೆ ಸೇರಲು ಕಾರಣ ಏನು?
ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಮ್ಯಾಜಿಕ್ ಸ್ಟಿಕ್ ಇದ್ದ ಹಾಗೆ. ಸಾಮಾಜಿಕ ಜಾಲತಾಣ ಎಂತವರನ್ನೂ ಕೂಡ ರಾತ್ರಿ ಬೆಳಗಾಗುವಷ್ಟರಲ್ಲಿ ಜೀರೋದಿಂದ ಹೀರೋ ಮಾಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊನೆಗೆ ಹೀರೋದಿಂದ ಜೀರೋ ಮಾಡುತ್ತದೆ. ಇದಕ್ಕೆ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಅದೇ ಸಾಲಿಗೆ ಮಹಾ ಕುಂಭ ಮೇಳದ ಸುಂದರ ಕಣ್ಣಿನ ಹುಡುಗಿ ಮೊನಾಲಿಸಾ ಕೂಡ ಸೇರಿದ್ದಾಳೆ.
ಮೊನಾಲಿಸಾ ಮಧ್ಯಪ್ರದೇಶದ ಇಂದೋರ್‌ನ ಬಡ ಕುಟುಂಬದ ಹೆಣ್ಣು ಮಗಳು. ತಂದೆ-ತಾಯಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮೊನಾಲಿಸಾ ಹಾಗೂ ಆಕೆಯ ತಂಗಿ ಕೂಡ ಹಗಲು ರಾತ್ರಿ ಎನ್ನದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಹೂವು, ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದರು. ತಾವಾಯಿತು ತಮ್ಮ ಹೊಟ್ಟೆಪಾಡಾಯಿತು ಎಂದುಕೊಂಡಿದ್ದ ಕುಂಟುಂಬಕ್ಕೆ ಇದೀಗ ಸಂಕಷ್ಟ ಎದುರಾಗಿದೆ.

ಉತ್ತರ ಪ್ರದೇಶದ ಮಹಾ ಕುಂಭ ಮೇಳ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹಿಂದೂ ಧರ್ಮದ ಅತಿ ದೊಡ್ಡ ಉತ್ಸವ. ಸುಮಾರು ಒಂದೂವರೆ ತಿಂಗಳು ನಡೆಯುವ ಈ ಬೃಹತ್ ಜಾತ್ರೆಯಲ್ಲಿ ನೆಲವತ್ತು ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ವ್ಯಾಪಾರ ವಹಿವಾಟು ಕೂಡ ಬಲು ಜೋರು. ಇದೇ ಲೆಕ್ಕಾಚಾರದ ಮೇಲೆಯೇ ಮಧ್ಯಪ್ರದೇಶದ ಇಂದೋರ್‌ನ ಮೊನಾಲಿಸಾ ಕುಟುಂಬ ಕೂಡ ಇಲ್ಲಿಗೆ ಬಂದಿತ್ತು.
ಮಹಾ ಕುಂಭ ಮೇಳ ಆರಂಭವಾಗ ಮೊದಲೆರಡು ದಿನಗಳು ವ್ಯಾಪಾರ ಮಾಡಿಕೊಂಡಿದ್ದ ಮೊನಾಲಿಸಾ ಅದ್ಯಾವಾಗ ಒಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದಳೋ ಗೊತ್ತಿಲ್ಲ. ಅಂದಿನಿಂದ ಇಂದಿನವರೆಗೂ ಸಾಮಾಜಿಕ ಜಾಲತಾಣದಲ್ಲಿ ಆಕೆಯದ್ದೇ ಹವಾ. ಮುಗ್ಧ ನಗು, ಆಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದಳು. ನೂರಾರು ಜನ ಆಕೆಯನ್ನು ಹುಡುಕಿ ಬಂದು ಮಾತನಾಡಿಸಿ ವಿಡಿಯೋ ಮಾಡಿಕೊಳ್ಳಲು ಆರಂಭಿಸಿದರು. ಇದೇ ಈಗ ಆಕೆಗೆ ಮುಳ್ಳಾಗಿದ್ದು, ಸದ್ಯ ಆಕೆ ಹೊಟ್ಟೆಪಾಡಿಗಾಗಿ ಬಂದ ಈ ಊರನ್ನೇ ತೊರೆಯುವಂತಾಗಿದೆ.

ಹೌದು, ಯಾವಾಗ ಮೊನಾಲಿಸಾ ವಿಡಿಯೋಗಳು ವೈರಲ್ ಆದವೋ ಅಂದಿನಿಂದ ಆಕೆಗೆ ವ್ಯಾಪಾರ ಮಾಡಲು ಸಹ ಸಾಧ್ಯವಾಗಲಿಲ್ಲ. ಬಂದವರೆಲ್ಲಾ ಫೋಟೋ ವಿಡಿಯೋ ಅಂತಾ ಆಕೆಯ ಹಿಂದೆ ಬಿದ್ದರು. ಇದರಿಂದ ಬೇಸತ್ತ ಆಕೆಯ ತಂದೆ ನೀನು ಇಲ್ಲಿ ಇರುವುದೇ ಬೇಡ ಎಂದು ಆಕೆಯನ್ನು ಮಹಾ ಕುಂಭ ಮೇಳದಿಂದ ಕರೆದುಕೊಂಡು ಊರಿಗೆ ಹೋಗಿದ್ದಾರೆ. ವ್ಯಾಪಾರವೂ ಇಲ್ಲದೇ ಕಂಗೆಟ್ಟ ಕುಟುಂಬ ಈಗ ಮೊನಾಲಿಸಾಳನ್ನು ತಮ್ಮ ಊರಿಗೆ ವಾಪಸ್ ಕಳುಹಿಸಿದ್ದಾರೆ. ಈ ವಿಚಾರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.












Click it and Unblock the Notifications