ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇನು ತೊಟ್ಟಿಕ್ಕುವಂಥ ಧ್ವನಿ, ಶ್ರೀದೇವಿ ಎಂಬ ಕೋಮಲ ಸೌಗಂಧಿಕಾ ಪುಷ್ಪ

By ಸ ರಘುನಾಥ, ಕೋಲಾರ
|
Google Oneindia Kannada News

ಆಕೆ ಶ್ರೀದೇವಿ. ಆಕೆಯು ನಟಿಸಿದ ಚಿತ್ರಗಳನ್ನು ನೋಡುತ್ತಿದ್ದವರಿಗೆ ವಯಸ್ಸಾಯಿತೇ ಹೊರತು ಶ್ರೀದೇವಿ ಭಾನುವಾರ ತೀರಿಕೊಂಡಾಗಲೇ ವಯಸ್ಸು ಗೊತ್ತಾದದ್ದು. ಆದರೆ ಅದು ಸಾಯುವ ವಯಸ್ಸಲ್ಲ. ಎರಡು- ಎರಡೂವರೆ ದಶಕಗಳ ಕಾಲ ನಾಯಕ ನಟಿಯಾಗಿ ಆಕೆ ಬೆಳ್ಳಿ ತೆರೆಯನ್ನು ಆಳಿದರು. ಆಕೆಯ ಕಾರಣಕ್ಕೆ ಅದೆಷ್ಟೋ ಹೆಣ್ಣುಮಕ್ಕಳ ಹೆಸರು 'ಶ್ರೀದೇವಿ' ಆಯಿತು. ಅತ್ಯುತ್ತಮ ನಟಿ- ಚೆಲುವೆ ಶ್ರೀದೇವಿಗೆ ಸ ರಘುನಾಥರ ನುಡಿ ನಮನ. -ಸಂಪಾದಕ

ಕವಿಗಳ ಸೌಂದರ್ಯ-ಶೃಂಗಾರದ ಪ್ರತಿಮೆ ಉಪಮೆಗಳನ್ನು ಸಂಕಲಿಸಿದರೆ ಅಲ್ಲಿ ಶ್ರೀದೇವಿಯನ್ನು ಹುಡುಕುವುದು ಕಷ್ಟವಾಗುವುದಿಲ್ಲ. ಇನ್ನೂ ಒಂದು ಮಾತನ್ನು ಸೇರಿಸುವುದಾದರೆ ಶ್ರೀದೇವಿಗೆ ಶ್ರೀದೇವಿಯೇ ಉಪಮೆ.

ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?

ಆಕೆ ನಟಿಸಿದ ಚಿತ್ರಗಳಲ್ಲಿನ ಸೌದರ್ಯಾತ್ಮಕ ದೃಶ್ಯಗಳನ್ನು ಯಾರಾದರೊಬ್ಬ ಹೃದಯದಲ್ಲಿ ಅರಳಿಸಿಕೊಂಡದ್ದೇ ಆದಲ್ಲಿ ಅವನು ರಸಕವಿಯಾಗಿ, ಅವನ ಲೇಖನಿ ಜ್ವಾಲಾಲೇಖನಿಯಾಗಿ ಅಪರಕಾಳಿದಾಸನಾಗಿ 'ಶ್ರೀದೇವಿ ವಿಲಾಸ ಅಥವಾ ಶ್ರೀದೇವಿ ಶೃಂಗಾರ ಸಿರಿದೇವಿ' ಎಂಬಂತಹ ಕಾವ್ಯ ರಚಿಸಿಯಾನು. ಅಂದರೆ ಶ್ರೀದೇವಿಯದು ಆರಾಧನಾ ಸೌಂದರ್ಯ ಶೃಂಗಾರ.

ಶ್ರೀದೇವಿಯನ್ನು ತೆರೆಯ ಮೇಲೆ ಕಂಡಾಗ ಕನ್ನಡದ ಪ್ರಸಿದ್ಧ ಮಧುರ ಗೀತೆಗಳಲ್ಲಿ ಒಂದಾದ 'ಹಾಲಲಿ ಮಿಂದವಳೋ, ದಂತದ ಮೈಯವಳೋ, ಹುಣ್ಣಿಮೆ ಹೆಣ್ಣಾದಳೋ' ಎಂಬ ಗೀತೆಯೊಂದಿಗೆ 'ಇಂದೇನು ಹುಣ್ಣಿಮೆಯೋ, ರತಿದೇವಿ ಮೆರವಣಿಗೆಯೋ' ಎಂಬ ಗೀತೆಯೂ ನೆನಪಾಗದಿರದು.

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ನಿಲ್ಲದ ಕಂಬನಿ

ಕಲ್ಪನಾ ಗೀತೆ ಜಿನುಗುವುದು

ಕಲ್ಪನಾ ಗೀತೆ ಜಿನುಗುವುದು

ಅವಳ ಕಣ್ಣುಗಳು ಅರಳಿ, ರೆಪ್ಪೆ ಬಡಿದರೆ ತೆಲುಗು ಚಿತ್ರವೊಂದರ 'ನಿನ್ನ ಕಣ್ಣ ಕಾಡಿಗೆಗೆ ಕತ್ತಲಲ್ಲಿ ಹಗಲು ಇರುಳಾಗಿ ಬದಲಾಗುವುದು' ಎಂಬ ಕವಿ ಕಲ್ಪನಾ ಗೀತೆ ಹೃದಯದಲಿ ಜಿನುಗುವುದು.

ಮೈಯಿಡೀ ಸೌಂದರ್ಯದ ನದಿಯಾಗಿ ಬಳುಕಿ ಬಾಗಿ ತೆರೆಯ ಮೇಲೆ ಹರಿಯುತ್ತಿದ್ದವಳು ಶ್ರೀದೇವಿ. ಇದಕ್ಕೆ ಇಂಬಾಗಿದ್ದುದ್ದು ನಾಟ್ಯಕ್ಕೆ ಒಗ್ಗಿದ್ದ ಮೈಮಾಟ, ಅದರ ಹಾವಭಾವ. ದೇವಲೋಕದ ಕಲ್ಪವೃಕ್ಕದ ಕೊಂಬೆಯಲ್ಲಿನ ಜೇನುಗೂಡಿನಿಂದ ಜೇನು ತೊಟ್ಟಿಕ್ಕುತ್ತಿದೆಯೇ ಅನ್ನಿಸುವಂತಹ ಕೊರಳ ಧ್ವನಿ ಮಾಧುರ್ಯ. ಜೊತೆಯಾದ ಸಹಜ ನಟನೆ ಅವಳ ಖ್ಯಾತಿಯ ಹೊಳಪುಗಳು.

ಶ್ರೀದೇವಿಯ ಚೆಲುವು ಸೊಬಗಿನಲ್ಲಿ ಯಶಸ್ಸು ಕಂಡ ಕೆ.ರಾಘವೇಂದ್ರರಾವ್

ಶ್ರೀದೇವಿಯ ಚೆಲುವು ಸೊಬಗಿನಲ್ಲಿ ಯಶಸ್ಸು ಕಂಡ ಕೆ.ರಾಘವೇಂದ್ರರಾವ್

ಅವಳು ಸಂಭಾಷೆಯಲ್ಲಿ ತುಂಬುತ್ತಿದ್ದ ಇಂಪು ಕೆಲವು ನಾಯಕ ನಟರ ಒರಟು, ಗೊಗ್ಗರು ಧ್ವನಿಗೆ ಹೊಂದುತ್ತಿರಲಿಲ್ಲ. ಅದು ಶ್ರುತಿ ಹಿಡಿಯದ ವಾದ್ಯವನ್ನು ನುಡಿಸುತ್ತಿರುವಂತೆ ಅನ್ನಿಸುತ್ತಿತ್ತು.

ಶ್ರೀದೇವಿಯ ಚೆಲುವು ಸೊಬಗಿನಲ್ಲಿ ಚಿತ್ರದ ಯಶಸ್ಸನ್ನು ಕಂಡವರಲ್ಲಿ ತೆಲುಗಿನ ಪ್ರಸಿದ್ಧ ನಿರ್ದೇಶಕ ಕೆ.ರಾಘವೇಂದ್ರರಾವ್ ಮತ್ತು ಹಿಂದಿ ಚಿತ್ರರಂಗದ ವ್ಯಾವಹಾರಿಕ ಚತುರ ನಟ ಜಿತೇಂದ್ರ ಮೊದಲ ಸಾಲಿನವರು. ಇದಕ್ಕೆ ಉದಾಹರಣೆ 'ಸಾಹಸ ವೀರುಡು ಅತಿಲೋಕ ಸುಂದರಿ', 'ಹಿಮ್ಮತ್ ವಾಲ' ಚಿತ್ರಗಳು.

ಪ್ರಣಯ ಸನ್ನಿವೇಶಗಳಲ್ಲಿನ ಸಂಭಾಷಣೆ ಇಂಪಿನ ಅಮಲನ್ನು ತುಂಬಿಕೊಂಡದ್ದು

ಪ್ರಣಯ ಸನ್ನಿವೇಶಗಳಲ್ಲಿನ ಸಂಭಾಷಣೆ ಇಂಪಿನ ಅಮಲನ್ನು ತುಂಬಿಕೊಂಡದ್ದು

ಶ್ರೀದೇವಿ ಪ್ರಭಾವಂತ ಬಾಲನಟಿ. ಎನ್.ಟಿ.ಆರ್.ರ 'ಬಡಿಪಂತುಲು', ರಾಜಕುಮಾರರ 'ಭಕ್ತಕುಂಬಾರ' ಥಟ್ಟನೆ ನೆನಪಾಗುವ ಚಿತ್ರಗಳು. ಈ ಚಿತ್ರಗಳಲ್ಲಿ ಆಕೆಯ ಸಂಭಾಷಣೆಗಳು ವೀಣೆ ನುಡಿಸಿದಂತೆ ಕೇಳಿಸುತ್ತವೆ. ಅವಳ ಸೌಂದರ್ಯದಂತೆಯೇ ಮಾತೂ ಇಂಪು. ಅದರಲ್ಲಿಯೂ ಪ್ರಣಯ ಸನ್ನಿವೇಶಗಳಲ್ಲಿನ ಸಂಭಾಷಣೆ ಇಂಪಿನ ಅಮಲನ್ನು ತುಂಬಿಕೊಂಡದ್ದು. ನಟಿಯೊಬ್ಬಳನ್ನು ಎತ್ತರದ ಶೃಂಗದಲ್ಲಿಟ್ಟು ಚಿತ್ರ ರಸಿಕರು ಆರಾಧಿಸಲು ಇತರೆ ಉಪಪರಿಕರಗಳ ಅಗತ್ಯವೇ ಇರದು.

ಭಾರತೀಯ ಸಾಂಪ್ರದಾಯಿಕ ಚೆಲುವೆ ಅನಿಸಿಕೊಂಡ ಜಯಪ್ರದಾ, ಮೋಹಕ ಬೆಡಗಿ ಮೀನಾಕ್ಷಿ ಶೇಷಾದ್ರಿ, ಮಾಧುರಿ ದೀಕ್ಷಿತ್ ಮುಂತಾದವರು ಸೌಂದರ್ಯದ ಹೊನಲುಗಳಾದರೆ, ಶ್ರೀದೇವಿ ಕಾಮನ ಕೈಯ ಕಬ್ಬಿನ ಜಲ್ಲೆ. ಅದೇ ಬಿಲ್ಲಾಗಿ ಬಾಗಿ ಬಿಟ್ಟ ಹೂಬಾಣ. ರಸಿಕರ ಕಂಗಳಿಗೆ ಕಾಮನಬಿಲ್ಲು ರೂಪಾಂತರಗೊಂಡ ರತಿ.

ಬೋನಿಕಪೂರ್ ಎಂಬ ಹಳೆಯ ಚಪ್ಪರ

ಬೋನಿಕಪೂರ್ ಎಂಬ ಹಳೆಯ ಚಪ್ಪರ

ಈ ಕಾಮನಬಿಲ್ಲು ತಮಿಳು ಚಿತ್ರರಂಗದಲ್ಲಿಯೂ ಮೂಡಿತು. ಆದರೆ ಇದರ ಏಳು ಬಣ್ಣಗಳನ್ನು ಚೆಂದಾಗಿ ಹರಡಿದ್ದು ತೆಲುಗು ಹಾಗೂ ಹಿಂದಿ ಚಿತ್ರಗಳ ಬೆಳ್ಳಿತೆರೆ ಮೇಲೆ. ಈ ಬೆಳ್ಳಿಬಳ್ಳಿ ಹಂಬಲಿಸಿದಂತೆ ಆಸರೆಯ ಚಪ್ಪರ ಸಿಗಲಿಲ್ಲ. ಕಡೆಗೆ ಬೋನಿಕಪೂರ್ ಎಂಬ ಹಳೆಯ ಚಪ್ಪರಕ್ಕೆ ಹಬ್ಬಿಕೊಂಡಳು. ಬೋನಿ ಕಡೆಯವರೆಗೂ ಅವಳಿಗೆ ಚಪ್ಪರವಾಗಿಯೇ ಉಳಿದ.

ಸಾವಿತ್ರಿ, ಮೀನಾಕುಮಾರಿ, ಕಲ್ಪನಾರ ಬದುಕನ್ನು ನೆನೆದರೆ ಕರುಳು ಹಿಂಡುತ್ತದೆ. ರೇಖಾಳಂತೂ ಒಂದು ದೀರ್ಘ ವಿಷಾದಗೀತೆ. ಇಂಥ ಅನೇಕರ ನಡುವೆ ಶ್ರೀದೇವಿ ಭಾಗ್ಯವತಿಯೇ.

ಇಂದಿರಾಗಾಂಧಿ ನೆನಪಾಗುತ್ತಾರೆ

ಇಂದಿರಾಗಾಂಧಿ ನೆನಪಾಗುತ್ತಾರೆ

ಶ್ರೀದೇವಿ ಕೋಮಲ ಸೌಗಂಧಿಕಾ ಪುಷ್ಪವಾದರೆ ಆಕೆ ಜೊತೆ ನಟಿಸಿದ ಕೆಲವು ನಟರು ಬಲಿತ ಕುಂಬಳಕಾಯಿಯಂತೆ, ಕೆಲವರು ಬಲಿತ ಪಡವಲಕಾಯಂತೆ ಕಾಣುವುದು ಸುಳ್ಳಲ್ಲ. ಇಂಥವರು ನಟರಾಗಿ ಜನಪ್ರಿಯರು, ಪ್ರತಿಭಾವಂತರೇ ಆದರೂ ಅವಳ ಚೆಲುವಿನ ಪ್ರಕಾಶದ ಎದುರು ಮಂಕು ಅನ್ನಿಸುತ್ತಿತ್ತು. ಇನ್ನೊಂದು ಮಗ್ಗುಲಿನಿಂದ ನೋಡಿದರೆ ಅವಳ ಚೆಲುವಿನ ಪ್ರಭೆಯಲ್ಲಿ ಇವರೂ ಸುಂದರರೇ ಅನ್ನಿಸುವುದು.

ಐವತ್ತು ದಾಟಿದರೂ (ಸೌಂದರ್ಯ ಕಾಯ್ದಕೊಳ್ಳುವ ಕಸರತ್ತಿನ ಸುದ್ದಿ ನಡುವೆಯೂ) ಹಾಯ್ ಅನ್ನಿಸುವ ಚೆಲುವೆಯಾಗುಳಿದ ರೇಖಾ, ಶ್ರೀದೇವಿ ಕಾಡುವ ನಿತ್ಯ ಚೆಲುವಿನ ದೇವಾಂಗನೆಯರು. ಇಲ್ಲಿ ಯಾವ ಪ್ರಯತ್ನವೂ ಇಲ್ಲದೆ ನನಗೆ ಇಂದಿರಾಗಾಂಧಿ ನೆನಪಾಗುತ್ತಾರೆ. ಆಕೆ ವಿಶೇಷ ಪ್ರಸಾದನಗಳಿಲ್ಲದೆ ಇಳಿವಯಸ್ಸಿನಲ್ಲಿಯೂ ಸಹಜ ಸುಂದರಿಯಾಗಿ ಉಳಿದವರು. ಈ ದೃಷ್ಟಿಯಲ್ಲಿ ಶ್ರೀದೇವಿಗೆ ಅಕ್ಕ.

English summary
Here is the tribute to great Indian actress Sridevi. She died on Sunday in Dubai due to cardiac arrest, at the age of 54. One India columnist Sa Raghunatha writes about her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X