ಉತಮ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಟಾಟಾ ನೆಕ್ಸಾನ್ ಸಿಎನ್‌ಜಿ ಮಾದರಿ ಕಾರು-ಬಿಡುಗಡೆ ದಿನಾಂಕ ರಿವೀಲ್
Tata Nexon CNG Car: ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಏರ್ಪಟ್ಟಿದೆ. ಎಲ್ಲಾ ದ್ವಿಚಕ್ಷ, ಕಾರುಗಳ ತಯಾಕಾರ ಕಂಪನಿಗಳು ತಾವೇನು ಕಡಿಮೆ ಇಲ್ಲವೆಂಬಂತೆ ಕೈಗೆಟಕುವ ದರದಲ್ಲಿ, ಉತ್ತಮ ಸೌಲಭ್ಯಗಳುಳ್ಳ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಹಾಗೆಯೇ ಟಾಟಾ ಮೋಟಾರ್ಸ್ ಕಂಪನಿ ನೆಕ್ಸಾನ್ ಸಿಎನ್‌ಜಿ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದೆ. ಹಾಗಾದರೆ ಇದಕ್ಕೆ ಮಾರುಕಟ್ಟೆಯಲ್ಲಿ ರೆಸ್ಪಾನ್ಸ್ ಹೇಗಿದೆ ಹಾಗೂ ಇದರ ದರ, ವಿಶೇಷತೆಗಳನ್ನು ಇಲ್ಲಿ ತಿಳಿಯಿರಿ.
ಭಾರತದ ದೈತ್ಯ ಕಂಪನಿಗಳಲ್ಲೊಂದಾದ ಟಾಟಾ ಮೋಟಾರ್ಸ್ ಕಂಪನಿ ನೆಕ್ಸಾನ್ ಸಿಎನ್‌ಜಿ ಮಾದರಿಯ ಕಾರನ್ನು ಈಗಾಗಲೇ ಅನಾವರಣಗೊಳಿಸಿದ್ದು, ಇದು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸುಳಿವು ನೀಡಿದೆ. ಇದು ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನುವ ಸುಳಿವನ್ನು ಕಂಪನಿ ನೀಡಿದೆ.

ಟಾಟಾ ಮೋಟಾರ್ಸ್ ಹೊಸ ಕಾರುಗಳ ಮಾರಾಟದಲ್ಲಿ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡುತ್ತಲೇ ಇದ್ದು, ಇದೀಗ ನೆಕ್ಸಾನ್‌ನಲ್ಲಿ ಸಿಎನ್‌ಜಿ ಮಾದರಿಯ ಬಿಡುಗಡೆಗೆ ಮುಂದಾಗಿದೆ. ಈ ಹೊಸ ಕಾರು ಮಾದರಿಯು ಸಾಮಾನ್ಯ ಪೆಟ್ರೋಲ್ ಇಂಜಿನ್ ಅನ್ನು ಒಳಗೊಂಡಿರಲಿದೆ. ಈ ಪೆಟ್ರೋಲ್ ಆವೃತ್ತಿಯ ಮಧ್ಯಂತರ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಆಯ್ಕೆ ಪರಿಚಯಿಸಬಹುದಾಗಿದ್ದು, ಇದು ಡ್ಯುಯಲ್ ಸಿಲಿಂಡರ್ ಫೀಚರ್ಸ್ ಸೇರಿದಂತೆ ಟರ್ಬೊ ಪೆಟ್ರೋಲ್ ಮಾದರಿಯೊಂದಿಗೆ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕಾರು ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಲಭ್ಯವಾಗುವ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಕಂಪ್ಯಾಕ್ಟ್ ಎಸ್‌ಯುವಿ ಖರೀದಿದಾರರಿಗೆ ಆಯ್ಕೆಗಳನ್ನು ಹೆಚ್ಚಿಸಲಿದೆ. ಜೊತೆಗೆ ಇದು ಮೈಲೇಜ್ ವಿಚಾರಕ್ಕೆ ಬಂದರೆ ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ಮಾದರಿಗೆ ಪೈಪೋಟೀ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಟಾಟಾ ಮೋಟಾರ್ಸ್ ಕಂಪನಿಯು ಪ್ರಸ್ತುತ ಸುಧಾರಿತ ಐ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ತನ್ನ ಪ್ರಮುಖ ಕಾರುಗಳಲ್ಲಿ ಅತ್ಯುತ್ತಮ ಇಂಧನ ದಕ್ಷತೆ ಜೊತೆಗೆ ಪರ್ಫಾಮೆನ್ಸ್‌ನಲ್ಲಿ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ನೆಕ್ಸಾನ್ ಸಹ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಐ ಸಿಎನ್‌ಜಿ ಮೂಲಕ ಪ್ರತಿ ಕೆ.ಜಿ.ಗೆ ಗರಿಷ್ಠ 25 ಕಿಲೋ ಮೀಟರ್ ಮೈಲೇಜ್ ನೀಡಲಿದೆ ಎನ್ನುವ ಮಾಹಿತಿ ಇದೆ.
ಅಲ್ಲದೆ, ಟಾಟಾ ಹೊಸ ಸಿಎನ್‌ಜಿ ಕಾರುಗಳಲ್ಲಿ ಪರಿಚಯಿಸಲಾಗಿರುವ ಟ್ವಿನ್ ಸಿಲಿಂಡರ್ ಸಿಎನ್‌ಜಿ ಟ್ಯಾಂಕ್ ವೈಶಿಷ್ಟ್ಯತೆಯು ಗ್ರಾಹಕರನ್ನು ಆಯಸ್ಕಾಂತದಂತೆ ಸೆಳೆಯುತ್ತಲೇ ಇದೆ. ಇನ್ನು ಹೊಸ ವಿನ್ಯಾಸದೊಂದಿಗೆ ಹೆಚ್ಚಿನ ಜಾಗ ಇದ್ದು, ಸಾಮಾನ್ಯ ಕಾರುಗಳಂತೆ ಇದರಲ್ಲೂ ಸಹ ಹೆಚ್ಚಿನ ಲಗೇಜ್ ತೆಗೆದುಕೊಂಡುಹೋಗಬಹುದಾಗಿದೆ.
ಸಾಮಾನ್ಯವಾಗಿ ಸಿಎನ್‌ಜಿ ಕಾರುಗಳಲ್ಲಿ ಬೂಟ್ ಸ್ಪೇಸ್ ಜಾಗದಲ್ಲು ಸಿಎನ್‌ಜಿ ಟ್ಯಾಂಕ್ ಅಳವಡಿಸಿರುವುದರಿಂದ ಹೆಚ್ಚಿನ ಲಗೇಜ್ ಕೊಂಡಯ್ಯಲು ಆಗುವುದಿಲ್ಲ. ಈ ಬಗ್ಗೆ ಬಹುತೇಕ ಗ್ರಾಹಕರು ಅಸಮಾಧಾನ ಹೊರಹಾಕಿದ್ದರು. ಬಳಿಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಟಾಟಾ ಕಂಪನಿ ಸಿಂಗಲ್ ಸಿಲಿಂಡರ್ ಬದಲಾಗಿ ಟ್ವಿನ್ ಸಿಲಿಂಡರ್ ಟ್ಯಾಂಕ್ ಅನ್ನು ನೀಡಿದೆ. ಇದು ಲಗೇಜ್ ಸ್ಥಳದಲ್ಲಿ ಸಾಮಾನ್ಯ ಕಾರುಗಳಂತೆಯೇ ಹೆಚ್ಚಿನ ಸ್ಥಳಾವಕಾಶ ನೀಡಲಿದ್ದು, ಇದಕ್ಕೆ ಗ್ರಾಹಕರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿವೆ.
ಟ್ವಿನ್ ಸಿಲಿಂಡರ್ ಟ್ಯಾಂಕ್ ವಿನ್ಯಾಸ ವೈಶಿಷ್ಟ್ಯತೆಯನ್ನು ಈಗಾಗಲೇ ಟಿಗೋರ್, ಟಿಯಾಗೋ, ಪಂಚ್ ಮತ್ತು ಆಲ್ಟ್ರೊಜ್ ಸಿಎನ್‌ಜಿ ಮಾದರಿಗಳಲ್ಲಿ ಪರಿಚಯಿಸಲಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನೆಕ್ಸಾನ್‌ನಲ್ಲೂ ಹೊಸ ವೈಶಿಷ್ಟ್ಯತೆ ನೀಡಿದ್ದು, ಇದಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಲ್ಲದೆ ಈ ಕಾರು ಪೆಟ್ರೋಲ್ ಮಾದರಿಗಿಂತಲೂ 90,000ದಿಂದ 1.10 ಲಕ್ಷ ರೂಪಾಯಿ ಹೆಚ್ಚುವರಿ ದರ ಆಗುವ ಸಾಧ್ಯತೆಯಿದ್ದು, ಇದು ಈ ವರ್ಷದ ಕೊನೆಯಲ್ಲಿ ಅಥವಾ 2025ರ ಜನವರಿ ವೇಳೆಗೆ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications