Studio Ghibli: ಘಿಬ್ಲಿ ಅವತಾರದಲ್ಲಿ ಮೋದಿ-ದೇವೇಗೌಡ್ರು, ಏನಿದು ವೈರಲ್ ಟ್ರೆಂಡ್?
ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಟ್ರೆಂಡ್ ಸೆಟ್ಟೇರಿದೆ. ಘಿಬ್ಲಿ ಸ್ಟುಡಿಯೋ (Studio Ghibli) ಎಂಬ ಹೆಸರು ಎಲ್ಲೆಡೆ ಕೇಳಿಬರುತ್ತಿದೆ. ಈಗೆಲ್ಲ ಕೃತಕ ಬುದ್ಧಿಮತ್ತೆಯ (ಎಐ) ಕಾಲ ಆಗಿರುವುದರಿಂದ ದಿನಕ್ಕೊಂದು ಹೊಸ ಟೆಕ್ನಾಲಜಿ ಜನರ ಮುಂದೆ ಬರುತ್ತಿದೆ. ಇದೀಗ ಘಿಬ್ಲಿ ಟ್ರೆಂಡಾಗಿದ್ದು, ಕ್ಷಣ ಮಾತ್ರದಲ್ಲಿ ನಮ್ಮ ಫೋಟೋ ಅನ್ನು ಆನಿಮೇಟ್ ಮಾಡುವ ಮೂಲಕ ಅಚ್ಚರಿ ಮೂಡಿಸುತ್ತಿದೆ. ಎಲ್ಲೆಡೆ ಈಗ ಘಿಬ್ಲಿ ಫೋಟೋಗಳು ಟ್ರೆಂಡಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಕೂಡ ಇದನ್ನು ಫಾಲೋ ಮಾಡಿದ್ದಾರೆ. ತಮ್ಮ ಘಿಬ್ಲಿ ಅವತಾರದ ಫೋಟೋಗಳನ್ನ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವೈರಲ್ ಆಗಿರುವ ಸ್ಟುಡಿಯೋ ಘಿಬ್ಲಿಯ ತಂತ್ರಜ್ಞಾನದ AIನಿಂದ ರಚಿಸಲಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಮೋದಿ ಅವರ ಅಧಿಕಾರದಲ್ಲಿ ನಡೆದ ಮಹತ್ವದ ಕ್ಷಣಗಳನ್ನು ಈ ಐಕಾನಿಕ್ ಜಪಾನೀಸ್ ಅನಿಮೇಷನ್ ಶೈಲಿಯ ಫೋಟೋಗಳ ಸಂಗ್ರಹವನ್ನು ಶೇರ್ ಮಾಡಿಕೊಂಡಿದೆ. ಕೇಂದ್ರ ಸರ್ಕಾರವು ತನ್ನ ಎಕ್ಸ್ ಖಾತೆಯಲ್ಲಿ ಚಿತ್ರಗಳ ಸಂಗ್ರಹವನ್ನು ಪೋಸ್ಟ್ ಮಾಡಿದೆ. ಸ್ಟುಡಿಯೋ ಘಿಬ್ಲಿ ಟಚ್‌ನಲ್ಲಿ ಹೊಸ ಭಾರತವನ್ನು ಅನುಭವಿಸಿ ಎಂದು ಬರೆದುಕೊಂಡಿದೆ.

ಈ ಕಲಾಕೃತಿಗಳು ಪ್ರಧಾನಿ ಮೋದಿಯವರ ರಾಜಕೀಯ ಜೀವನದ ಸ್ಮರಣೀಯ ದೃಶ್ಯಗಳನ್ನು ಒಳಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರಂತಹ ವಿಶ್ವ ನಾಯಕರೊಂದಿಗಿನ ಸಭೆಗಳಲ್ಲಿ ಮೋದಿ ಅವರ ಉಪಸ್ಥಿತಿಯ ಕೃತಕ ಬುದ್ಧಿಮತ್ತೆಯ ಫೋಟೋಗಳು ಸದ್ಯ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಮೋದಿ ಅವರು ಭಾರತೀಯ ಸೇನೆಯ ಸಮವಸ್ತ್ರದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವುದು, 2023ರಲ್ಲಿ ಹೊಸ ಸಂಸತ್ತಿನಲ್ಲಿ ಇರಿಸಲಾದ ಐತಿಹಾಸಿಕ 'ಸೆಂಗೋಲ್' ರಾಜದಂಡದ ಮುಂದೆ ನಿಂತಿರುವುದು, ಕೆಂಪುಕೋಟೆ ಬಳಿ ಭಾಷಣ ಮಾಡುವುದು ಸೇರಿದಂತೆ ಹಲವು ಫೋಟೋಗಳನ್ನು ಹಂಚಿಕೊಂಡಿದೆ.
ಭಾರತೀಯ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಈ ಟ್ರೆಂಡ್‌ಗೆ ಜೊತೆಯಾಗಿ, ತಮ್ಮ ಘಿಬ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್, ಶಶಿ ತರೂರ್, ಸಚಿನ್ ತೆಂಡೂಲ್ಕರ್, ಅಖಿಲೇಶ್ ಯಾದವ್, ತೆಲಂಗಾಣ ಮಾಜಿ ಸಿಎಂ ಕೆಟಿಆರ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವರು ತಮ್ಮ ಘಿಬ್ಲಿ ಫೋಟೋಗಳನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಜೆಡಿಎಸ್ ಪಕ್ಷ ಕೂಡ ಈ ಘಿಬ್ಲಿ ಟ್ರೆಂಡ್ ಅನ್ನು ಮೆಚ್ಚಿಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರ ಪ್ರಮಾಣವಚನದ ಘಿಬ್ಲಿ ಅವತಾರದ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ. ಘಿಬ್ಲಿ ಟ್ರೆಂಡ್‌ಗೆ ನಾವೂ ಸೇರುತ್ತಿದ್ದೇವೆ ಎಂದು ಜೆಡಿಎಸ್ ಹೇಳಿದೆ.
ನಿಮ್ಮ ಘಿಬ್ಲಿ ಫೋಟೋ ರಚಿಸುವುದು ಹೇಗೆ?
ಇದನ್ನು ChatGPT ತಂತ್ರಜ್ಞಾನದ ಮೂಲಕವೂ ಸುಲಭವಾಗಿ ರಚಿಸಬಹುದು. ನಿಮ್ಮ ಫೋಟೋ ಅಪ್ಲೋಡ್ ಮಾಡುವ ಮೂಲಕ ಅಲ್ಲಿ ಸ್ಟುಡಿಯೋ ಘಿಬ್ಲಿ ಫೋಟೋ ನೀಡುವಂತೆ ಟೈಪ್ ಮಾಡಿದರೆ ಕ್ಷಣ ಮಾತ್ರದಲ್ಲೇ ನಿಮ್ಮ ಘಿಬ್ಲಿ ಫೋಟೊ ರಚನೆಯಾಗಲಿದೆ. ಇಂಟರ್‌ನೆಟ್‌ನಲ್ಲಿ ಇದು ಸುಲಭವಾಗಿ ಲಭ್ಯವಾಗುತ್ತಿದೆ. AI ಎಐ ಟೂಲ್‌ಗಳನ್ನು ಬಳಸಿಕೊಂಡು ತಮ್ಮ ಕಲ್ಪನೆಗೆ ತಕ್ಕಂತೆ ಫೋಟೋಗಳಿಗೆ ಜೀವ ನೀಡಬಹುದಾಗಿದೆ.












Click it and Unblock the Notifications