ಕಾಂಗ್ರೆಸ್ ಆಫರ್ ರಿಜೆಕ್ಟ್ ಮಾಡಿ ಚಾಣಕ್ಯ ಪ್ರಶಾಂತ್ ಕಿಶೋರ್ ರಿಯಾಕ್ಟ್
ನವದೆಹಲಿ, ಏಪ್ರಿಲ್ 26: ಕಾಂಗ್ರೆಸ್ ಪಕ್ಷದ ಆಫರ್ ತಿರಸ್ಕರಿಸಿದ ಬಳಿಕ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮೌನ ಮುರಿದಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹಲವಾರು ದಿನಗಳಿಂದ ಹಬ್ಬಿತ್ತು. ಆದರೆ ಪಕ್ಷ ನೀಡಿದ್ದ ಆಹ್ವಾನವನ್ನು ಅವರು ತಿರಸ್ಕಾರ ಮಾಡಿ, ಅದಕ್ಕೆ ಕಾರಣವನ್ನು ತಿಳಿಸಿದ್ದಾರೆ. 'ನನಗಿಂತ ಪಕ್ಷಕ್ಕೆ ನಾಯಕತ್ವ ಬೇಕು...' ಎಂದಿದ್ದಾರೆ. ಜೊತೆಗೆ 'ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು' ಸರಿಪಡಿಸಬೇಕಾಗಿದೆ ಎಂದು ಸೂಚಿಸಿದ್ದಾರೆ.
ಎಐಸಿಸಿ ವಕ್ತಾರ ರಂದೀಪ್ ಸುರ್ಜೇವಾಲ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಪಕ್ಷ ಸೇರುವಂತೆ ನೀಡಿದ್ದ ಆಹ್ವಾನವನ್ನು ಪ್ರಶಾಂತ ಕಿಶೋರ್ ತಿರಸ್ಕಾರ ಮಾಡಿದ್ದಾರೆ. ಅವರು ಪಕ್ಷ ಸಂಘಟನೆಗೆ ನೀಡಿರುವ ಸಲಹೆಗಳನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಭಾನುವಾರದಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಹಾಗೂ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐ-ಪಿಎಸಿ) ಯೊಂದಿಗೆ ಒಪ್ಪಂದಕ್ಕೆ ಪ್ರಶಾಂತ್ ಕಿಶೋರ್ ಕಾರಣರಾಗಿದ್ದರು. ಆದರೆ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರಶಾಂತ್ ಕಿಶೋರ್ ಯಾವುದೇ ಸುಳಿವು ಕೊಟ್ಟಿರಲಿಲ್ಲ.
ಅಲ್ಲದೆ, ಐಪ್ಯಾಕ್ ಜೊತೆ ಟಿಆರ್ ಎಸ್ ಒಪ್ಪಂದದ ಬಗ್ಗೆ ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್, "ಪಿಕೆ (ಕಿಶೋರ್ ಜನಪ್ರಿಯವಾಗಿ ತಿಳಿದಿರುವಂತೆ) ಸಂಸ್ಥಾಪಕರಾಗಿದ್ದಾರೆ ಆದರೆ ಅದನ್ನು ಯಾರು ನಡೆಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. PK ನಮ್ಮನ್ನು I-PAC ಗೆ ಪರಿಚಯಿಸಿದ್ದು, ಆ ಸಂಸ್ಥೆಯವರು ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ'' ಎಂದು ಹೇಳಿದ್ದು ಹಲವರ ಹುಬ್ಬೇರಿಸಿತ್ತು.
"ಇಎಜಿ (ಎಂಪವರ್ಡ್ ಆಕ್ಷನ್ ಗ್ರೂಪ್) ನ ಭಾಗವಾಗಿ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಾಂಗ್ರೆಸ್ನ ಉದಾರ ಪ್ರಸ್ತಾಪವನ್ನು ನಾನು ನಿರಾಕರಿಸಿದೆ" ಎಂದು ಅವರು ಟ್ವಿಟ್ಟರ್ ನಲ್ಲಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಬರೆದಿದ್ದಾರೆ. "ನನ್ನ ವಿನಮ್ರ ಅಭಿಪ್ರಾಯದಲ್ಲಿ, ನನಗಿಂತ ಹೆಚ್ಚಾಗಿ, ಪರಿವರ್ತನಾ ಸುಧಾರಣೆಗಳ ಮೂಲಕ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಸರಿಪಡಿಸಲು ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ" ಎಂದು ಹೇಳಿದರು.

ಕೈ ಪಡೆಯಲ್ಲೇ ಅಪಸ್ವರ:
ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸೋನಿಯಾ ಗಾಂಧಿ ಅವರು ಉನ್ನತ ಮಟ್ಟದ ಸಮಿತಿಯ ಜೊತೆ ಚರ್ಚಿಸಿ ತಮ್ಮ ಅಭಿಪ್ರಾಯ, ಸಲಹೆ, ವರದಿ ನೀಡಲು ಸೂಚಿಸಿದ್ದರು. ಈ ಪೈಕಿ ಪ್ರಿಯಾಂಕಾ ಗಾಂಧಿ ಮತ್ತು ಅಂಬಿಕಾ ಸೋನಿ ಅವರು ಪಿಕೆಗೆ ಮುಕ್ತ ಹಸ್ತ ಕೊಡಲು ಒಪ್ಪಿದ್ದರು. ಆದರೆ, ಹಿರಿಯರಾದ ದಿಗ್ವಿಜಯ್ ಸಿಂಗ್, ರಣದೀಪ್ ಸುರ್ಜೆವಾಲ, ಜೈರಾಮ್ ರಮೇಶ್, ಮುಕುಲ್ ವಾಸ್ನಿಕ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಬೇರೆ ಪಕ್ಷಗಳ ಜೊತೆ ಒಡನಾಟ:
ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಜೊತೆಗಿನ ಇತ್ತೀಚಿನ ಒಪ್ಪಂದವಲ್ಲದೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಆಂಧ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೂ ಪ್ರಶಾಂತ್ ಕಿಶೋರ್ ಸಲಹೆಗಾರರಾಗಿದ್ದಾರೆ. ಈಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕೆಂದು ಹೇಳುತ್ತಿರುವ ಹೊತ್ತಲ್ಲೇ ಅವರು ಬೇರೊಂದು ಪಕ್ಷದ ಜೊತೆ ಕೆಲಸ ಮಾಡುತ್ತಿರುವುದು ಕೈ ವರಿಷ್ಠರಿಗೆ ಇರಿಸುಮುರುಸು ತಂದಿದೆ ಎಂದು ಹೇಳಲಾಗುತ್ತಿದೆ. ಚುನಾವಣಾ ಪೂರ್ವ ಹಾಗೂ ನಂತರದ ಮೈತ್ರಿ ಸಾಧಿಸಲು ಕಾಂಗ್ರೆಸ್ ಸರಿಯಾದ ಯೋಜನೆ ಹಾಕಿಕೊಂಡಿಲ್ಲ, ಪಕ್ಷದ ಆಂತರಿಕ ವ್ಯವಸ್ಥೆ ಭದ್ರಗೊಳಿಸುವುದೇ ದೊಡ್ಡ ವಿಷಯವಾಗಿದೆ.

30 ಕೋಟಿಯಷ್ಟು ಮತಗಳು ಕಾಂಗ್ರೆಸ್‌ಗೆ ಬೀಳಬೇಕು
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಶೇ. 45ರಷ್ಟು ಮತಗಳನ್ನು ಗಳಿಸಬೇಕು. ಅಂದರೆ 30 ಕೋಟಿಯಷ್ಟು ಮತಗಳು ಕಾಂಗ್ರೆಸ್‌ಗೆ ಬೀಳಬೇಕು. ಇಷ್ಟು ವೋಟುಗಳನ್ನ ಕಾಂಗ್ರೆಸ್‌ಗೆ ನೀಡಬಲ್ಲ ಎಂಟು ಜನವರ್ಗಗಳನ್ನ ಪಿಕೆ ಗುರುತಿಸಿದ್ದಾರೆ. ಮಹಿಳೆಯರು, ರೈತರು, ಯುವಸಮುದಾಯ, ಎಸ್‌ಸಿ ಸಮುದಾಯ, ಎಸ್‌ಟಿ ಸಮುದಾಯ, ಕೃಷಿಭೂಮಿ ಇಲ್ಲದ ಕಾರ್ಮಿಕರು, ಮಧ್ಯಮವರ್ಗದವರು ಮತ್ತು ನಗರ ಪ್ರದೇಶದ ಬಡವರು ಈ ಜನರ ಮತ ಕಾಂಗ್ರೆಸ್ ಗೆಲುವಿಗೆ ದಾರಿ ಮಾಡಿಕೊಡಬಹುದು ಎಂಬುದು ಅವರ ಎಣಿಕೆ.

ಕ್ರಿಮಿನಲ್ ಹಿನ್ನೆಲೆಯವರಿಗೆ ಟಿಕೆಟ್
ಗಂಭೀರ ಅಪರಾಧ ಕೃತ್ಯಗಳಲ್ಲಿ ಆರೋಪ ಎದುರಿಸುತ್ತಿರುವ ಜನರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಲಿ ಅಥವಾ ಪಕ್ಷ ಹುದ್ದೆಯನ್ನಾಗಲೀ ನೀಡದಂತಹ ಕಟ್ಟುನಿಟ್ಟಿನ ನೀತಿ ಹೊಂದಿರಬೇಕು ಎಂಬುದು ಪಿಕೆ ಸಲಹೆ. ಹಾಗೆಯೇ, ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಾಲಿಸಿ ಇರಬೇಕು. ಪಕ್ಷದ ವಿವಿಧ ಹುದ್ದೆಗಳನ್ನ ಒಬ್ಬ ವ್ಯಕ್ತಿಯೇ ನಿರ್ವಹಿಸಬಾರದು. ಹುದ್ದೆಗಳಿಗೆ ಆಯ್ಕೆ ಪಾರದರ್ಶಿಕವಾಗಿರಬೇಕು ಎಂದು ಹೇಳಿದ್ದಾರೆ ಪಿಕೆ. ಇದೆಲ್ಲವೂ ಕಾಂಗ್ರೆಸ್ ಹಿರಿತಲೆಗಳಿಗೆ ಅಪಥ್ಯವಾಗಿದ್ದರಿಂದ ಪಿಕೆ ಕೈ ಪಕ್ಷ ಸೇರಲು ಸಾಧ್ಯವಾಗಿಲ್ಲ.











Click it and Unblock the Notifications