
ನಾಸಾದ ನೌಕೆ ಡಿಕ್ಕಿ ಹೊಡೆದಿದ್ದ ಆಕಾಶಕಾಯದ ಕಥೆ ಏನಾಯಿತು?
ಭೂಮಿಗೆ ಏಲಿಯನ್‌ಗಳ ದಾಳಿ ಆಗುತ್ತೋ ಇಲ್ಲವೋ ಆದರೆ, ಬ್ರಹ್ಮಾಂಡದಲ್ಲಿ ಸುತ್ತುತ್ತಿರುವ ಕ್ಷುದ್ರಗ್ರಹಗಂಥ ಆಕಾಶಕಾಯಗಳಿಂದ ಸದಾ ಅಪಾಯವಂತೂ ಇದ್ದೇ ಇದೆ. ದೊಡ್ಡ ಆಕಾಶಕಾಯವೊಂದೇನಾದರೂ ಭೂಮಿಗೆ ಅಪ್ಪಳಿಸಿದರೆ ಮನುಷ್ಯ ಕುಲವೇ ನಾಶವಾಗಿ ಹೋದೀತು. ಇದನ್ನು ತಪ್ಪಿಸಲು ಅಮೆರಿಕದ ನಾಸಾ ಇತ್ತೀಚೆಗೆ ಒಂದು ಪ್ರಯೋಗ ಮಾಡಿತ್ತು. ಅದೀಗ ಯಶಸ್ವಿಯೂ ಆಗಿದೆ.
ಭೂಮಿಯಿಂದ 1.1 ಕಿಮೀ ದೂರದಲ್ಲಿ ಸಾಗುತ್ತಿದ್ದ ಡೈಮಾರ್ಫೋಸ್ ಎಂಬ ಸಣ್ಣ ಆಕಾಶಕಾಯಕ್ಕೆ ನಾಸಾದ ಡಾರ್ಟ್ ನೌಕೆ ಡಿಕ್ಕಿ ಹೊಡೆದಿತ್ತು. ಅದರ ಪರಿಣಾಮ ಏನಾಗಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ಡಾರ್ಟ್ ನೌಕೆ ಅಪ್ಪಳಿಸಿದ ರಭಸಕ್ಕೆ ಡೈಮಾರ್ಫೋಸ್‌ನ ಕಕ್ಷೆ ತುಸು ಬದಲಾಗಿರುವುದು ದೃಢಪಟ್ಟಿದೆ. ನಾಸಾದ ಉದ್ದೇಶವೂ ಇದೇ ಆಗಿತ್ತು. ಅಲ್ಲಿಗೆ ನಾಸಾ ಪ್ರಯೋಗ ಯಶಸ್ವಿಯಾದಂತಾಗಿದೆ.
ಈ 5 ಘಟನೆ ನಡೆಯುತ್ತೆ, ನೆನಪಿಡಿ: 'ಟೈಮ್ ಟ್ರಾವೆಲರ್' ನುಡಿದ ಭವಿಷ್ಯ
ಡೈಮಾರ್ಫೋಸ್ ಸುಮಾರು 163 ಮೀಟರ್ ದಪ್ಪದಿದೆ. ನಾಸಾ ಕಳುಹಿಸಿದ್ದ ಡಾರ್ಟ್ ನೌಕೆ 19 ಮೀಟರ್ ಇತ್ತು. ಡೈಮಾರ್ಫೋಸ್‌ಗೆ ಡಿಕ್ಕಿ ಹೊಡೆದ ಬಳಿಕ ಡಾರ್ಟ್ ನೌಕೆ ಪುಡಿಪುಡಿಯಾಗಿ ಹೋಯಿತು. ಆದರೆ, ಅದು ಸಾಗುವ ಹಾದಿಯಲ್ಲಿ ಬದಲಾವಣೆ ಆಗಿದೆ.

ಹೇಗಿತ್ತು ಪ್ರಯೋಗ?
ಭೂಮಿಯಿಂದ 1.1 ಕೋಟಿ ಕಿಮೀ ದೂರದಲ್ಲಿರುವ 780 ಮೀಟರ್ ದಪ್ಪದ ಡೈಡಿಮೋಸ್ ಎಂಬ ಆಕಾಯಕಾಯದ ಸುತ್ತ 163 ಮೀಟರ್‌ನ ಡೈಮಾರ್ಫೋಸ್ ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುತ್ತದೆ. ನಾಸಾದ ಡಾರ್ಟ್ ನೌಕೆ ಡಿಕ್ಕಿ ಹೊಡೆಯುವ ಮುನ್ನ ಡೈಡಿಮೋಸ್‌ನ ಒಂದು ಪ್ರದಕ್ಷಿಣೆ ಬರಲು ಡೈಮಾರ್ಫೋಸ್‌ಗೆ 11 ನಿಮಿಷ 55 ನಿಮಿಷ ತಗುಲುತ್ತಿತ್ತು. ಈ ಸಣ್ಣ ಆಕಾಶಕಾಯದ ಪಥವನ್ನು ಬದಲಿಸಲೆಂದು ನಾಸಾ ಡಾರ್ಟ್ ನೌಕೆಯನ್ನು ಸಜ್ಜುಗೊಳಿಸಿತ್ತು.
ಡಬಲ್ ಆಸ್ಟಿರಾಯ್ಡ್ ರೀಡೈರೆಕ್ಷನ್ ಟೆಸ್ಟ್ (ಡಾರ್ಟ್) ನೌಕೆಯನ್ನು ಅಲ್ಲಿಗೆ ಕಳುಹಿಸಲಾಯಿತು. 19 ಮೀಟರ್ ದಪ್ಪದ ಈ ನೌಕೆ ಗಂಟೆಗೆ ಬರೋಬ್ಬರಿ 22 ಸಾವಿರ ಕಿಮೀ ವೇಗದಲ್ಲಿ ಹೋಗಿ ಡೈಮಾರ್ಫೋಸ್‌ಗೆ ಅಪ್ಪಳಿಸಿತು. ಅದರ ಪರಿಣಾಮವಾಗಿ ಡೈಡಿಮೋಸ್‌ಗೆ ಪ್ರದಕ್ಷಿಣೆ ಹಾಕುವ ಡೈಮಾರ್ಫೋಸ್‌ನ ಕಕ್ಷೆ ಬದಲಾವಣೆ ಆಗಿದೆ. ಒಂದು ಸುತ್ತಬರಲು 11 ಗಂಟೆ 55 ನಿಮಿಷ ತಗಲುತ್ತಿದ್ದುದು ಈಗ 11 ಗಂಟೆ 23 ನಿಮಿಷಕ್ಕೆ ಇಳಿದಿದೆ. ಅಂದರೆ 32 ನಿಮಿಷಗಳಷ್ಟು ವ್ಯತ್ಯಾಸ ನಿರ್ಮಾಣವಾಗಿದೆ. ಅಷ್ಟೇ ಅಲ್ಲ, ಅದರ ಕಕ್ಷೆಯಲ್ಲಿ ಕೆಲ ಮೀಟರ್‌ಗಳಷ್ಟು ವ್ಯತ್ಯಾಸವಾಗಿದೆ.
ಡಿಕ್ಕಿ ಹೊಡೆದ ಸ್ಥಳದಿಂದ 50 ಕಿಮೀ ದೂರದಲ್ಲಿ ಇಟಲಿಯ ಇನ್ನೊಂದು ನೌಕೆ ಇತ್ತು. ಅದು ಕಳುಹಿಸಿದ ಚಿತ್ರಗಳು ಮತ್ತು ಭೂಮಿಯಿಂದ ಹಬಲ್ ಸ್ಪೇಸ್ ಟೆಲಿಸ್ಕೋಪ್ ಸೆರೆಹಿಡಿದ ದೃಶ್ಯಗಳ ಸಹಾಯದಿಂದ ಡೈಡಿಮೋಸ್ ಮತ್ತು ಡೈಮಾರ್ಫೋಸ್ ಅನ್ನು ಗಮನಿಸಿ ಈ ಕಕ್ಷೆ ವ್ಯತ್ಯಯವನ್ನು ಖಚಿತಪಡಿಸಿಕೊಳ್ಳಲಾಗಿದೆ.

ಆಕಾಶಕಾಯಗಳಿಂದ ಗಂಡಾಂತರ
ಈ ಸುದ್ದಿಯ ಆರಂಭದಲ್ಲಿ ತಿಳಿಸಲಾದಂತೆ ಭೂಮಿಗೆ ಆಕಾಶಕಾಯಗಳಿಂದ ನಿರಂತರವಾಗಿ ಗಂಡಾಂತರ ಇದ್ದೇ ಇದೆ. ವರ್ಷದಲ್ಲಿ ನೂರಾರು ಆಕಾಶಕಾಯಗಳು ಭೂಮಿಗೆ ಅತಿ ಸಮೀಪ ಹಾದುಹೋಗುತ್ತಿರುತ್ತವೆ. ಇವುಗಳಲ್ಲಿ ಒಂದು ಅಪ್ಪಳಿಸಿದರೂ ಗಂಡಾಂತರವೇ. ಕೆಲವೇ ಮೀಟರ್ ದಪ್ಪದ ಆಕಾಶಕಾಯ ಬಿದ್ದರೆ ಒಂದು ಪ್ರಬಲ ಅಣು ಬಾಂಬ್ ಬಿದ್ದಷ್ಟು ಪರಿಣಾಮವಾಗುತ್ತದೆ. ತುಸು ದೊಡ್ಡ ಮಟ್ಟದ ಕ್ಷುದ್ರಗ್ರಹ ಬಡಿದರೆ ಹೇಗಿದ್ದೀತು ಕಲ್ಪಿಸಿಕೊಳ್ಳಬಹುದು. ಹಿಂದೆ ಭೂಮಿಯನ್ನಾಳುತ್ತಿದ್ದ ಡೈನಾಸರ್ ಎಂಬ ದೈತ್ಯ ಜೀವಿಗಳು ಸಂಪೂರ್ಣವಾಗಿ ಅಳಿದುಹೋಗಿದ್ದು ಇಂಥದ್ದೊಂದು ಕ್ಷುದ್ರ ಗ್ರಹ ಅಪ್ಪಳಿಸಿದ ಕಾರಣಕ್ಕೆಯೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ದೊಡ್ಡ ಕ್ಷುದ್ರ ಗ್ರಹ ಅಪ್ಪಳಿಸಿದರೆ ಅದರಿಂದ ತೀವ್ರತರದಲ್ಲಿ ಹವಾಮಾನ ಬದಲಾವಣೆ ಆಗುತ್ತದೆ. ಭೂಕಂಪನಗಳು ಆಗುತ್ತವೆ, ಸುನಾಮಿಗಳು ಸೃಷ್ಟಿಯಾಗಬಹುದು, ಅನೇಕ ಕಡೆ ಭೂಮಿ ಮುಳುಗಬಹುದು, ಹೀಗೆ ನಾನಾ ರೀತಿಯ ಪರಿಣಾಮಗಳು ಉಂಟಾಗಿ ಬಹುತೇಕ ಜೀವ ಸಂಕುಲ ಬಹಳ ಬೇಗ ಅವನತಿ ಹೊಂದಬಹುದು.

ನಾಸಾ ಪ್ರಯೋಗದ ಮಹತ್ವವೇನು?
ಆಕಾಶಕಾಯಗಳು ಭೂಮಿಯನ್ನು ಅಪ್ಪಳಿಸುವುದನ್ನು ತಪ್ಪಿಸುವುದು ಬಿಟ್ಟರೆ ಮನುಷ್ಯರಿಗೆ ಅನ್ಯಥಾ ದಾರಿ ಇಲ್ಲ. ಭೂಮಿಯತ್ತ ಬರುವ ಆಕಾಶಕಾಯವನ್ನು ಗುರುತಿಸಿ ಅದರ ಪಥವನ್ನು ಬದಲಿಸುವುದೊಂದೇ ದಾರಿ ಇರುವುದು. ನಾಸಾ ಈಗ ಪ್ರಯೋಗ ಮಾಡಿದ್ದು ಇದನ್ನೇ. ಪುಟ್ಟ ಆಕಾಶಕಾಯದ ಮೇಲೆ ನಾಸಾ ಮಾಡಿದ ಪ್ರಯೋಗ ಯಶಸ್ವಿಯೇನೋ ಆಗಿದೆ. ಆದರೆ, ದೊಡ್ಡ ಕ್ಷುದ್ರಗ್ರಹ ಬಂದರೆ ಹೇಗೆ? ಆದರೆ, ನಾಸಾದ ಡಾರ್ಟ್ ನೌಕೆಯ ಪ್ರಯೋಗ ಈಗ ಆರಂಭಿಕ ಹೆಜ್ಜೆ ಅಷ್ಟೇ ಎಂಬುದನ್ನು ಇಲ್ಲಿ ಗಮನಿಸಬೇಕು.
ಇಲ್ಲಿ ಸವಾಲುಗಳು ಬಹಳ ಇವೆ. ಎಲ್ಲಾ ಆಸ್ಟಿರಾಯ್ಡ್‌ಗಳು ಒಂದೇ ರೀತಿಯಲ್ಲಿರುವುದಿಲ್ಲ. ಅವುಗಳ ಮೇಲೆ ಡಿಕ್ಕಿ ಹೊಡೆದರೆ ಒಂದೇ ರೀತಿಯ ಪರಿಣಾಮ ಬೀರುತ್ತೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಭೂಮಿಯತ್ತ ಬರುವ ಆಸ್ಟಿರಾಯ್ಡ್ ಅನ್ನು ಬಹಳ ಮುಂಚೆಯೇ ಗುರುತಿಸಬೇಕು. ಇಲ್ಲದಿದ್ದರೆ ಭೂಮಿಗೆ ಸಮೀಪ ಬಂದಾಗ ಅದನ್ನು ದೂರ ಸರಿಸುವುದು ಬಹುತೇಕ ಅಸಾಧ್ಯ.

ಭೂಮಿಗೆ ರಕ್ಷಣಾ ಕವಚ?
ನಾಸಾಗೆ ಇದೆಲ್ಲದರ ಅರಿವು ಇದೆ. ಕೇವಲ ಅಮೆರಿಕದ ನಾಸಾ ಮಾತ್ರವಲ್ಲ, ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಇನ್ನಷ್ಟು ನೌಕೆಗಳು ಅಣಿಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಪ್ರಯೋಗಗಳು ಹೆಚ್ಚಾಗಿ ನಡೆಯಲಿವೆ. ಹತ್ತಾರು ವರ್ಷಗಳ ಬಳಿಕ ಒಂದು ದಿನ ಭೂಮಿಗೆ ಒಂದು ಪ್ರಬಲ ರಕ್ಷಣಾ ವ್ಯವಸ್ಥೆ ನಿರ್ಮಾಣಗೊಂಡರೆ ಅಚ್ಚರಿ ಇಲ್ಲ.
(ಒನ್ಇಂಡಿಯಾ ಸುದ್ದಿ)
World Space Week 2022- ಬಾಹ್ಯಾಕಾಶ ವಾರ ವಿಶೇಷತೆ ಏನು? ಯಾಕೆ ಆಚರಿಸಲಾಗುತ್ತದೆ?