Maha Kumbh Mela 2025: ಮಹಾ ಕುಂಭಮೇಳದಲ್ಲಿ ಭಕ್ತಸಾಗರ; 60 ಲಕ್ಷ ಜನರಿಂದ ಪವಿತ್ರ ಸ್ನಾನ
ಭಾರತದಲ್ಲಿ ಇಂದು ಅತಿ ದೊಡ್ಡ ಧಾರ್ಮಿಕ ಉತ್ಸವದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಹರ..ಹರ ಮಹಾದೇವ ಝೇಂಕಾರ, ಕಣ್ಣು ಹಾಯಿಸಿದಷ್ಟು ಭಕ್ತ ಸಾಗರ, ಸಾಧು ಸಂತರು, ನಾಗ ಸಾಧುಗಳು, ಜಪ-ತಪ, ಮಹಾದೇವನ ವರ್ಣನೆ, ತಾಂಡವ ನೃತ್ಯ, ಜೊತೆಗೆ ಲಕ್ಷಾಂತರ ಭಕ್ತರಿಂದ ಪವಿತ್ರಾ ಸ್ನಾನ ಈ ಎಲ್ಲಾ ದೃಶ್ಯಗಳಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಸಾಕ್ಷಿಯಾಗಿದೆ.
ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಇಂದು(ಜನವರಿ 13) ಸೋಮವಾರ ಚಾಲನೆ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ನಡೆಯುತ್ತಿರುವ ಅಪರೂಪದ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.

ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳದ ಮೊದಲ ದಿನವಾದ ಇಂದು ಬೆಳಗ್ಗೆ ಸುಮಾರು 60 ಲಕ್ಷಕ್ಕೂ ಅಧಿಕ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಈಗಾಗಲೇ ಭಕ್ತರಿಂದ ತುಂಬಿ ತುಳುಕುತ್ತಿರುವ ಮಹಾ ಕುಂಭಮೇಳಕ್ಕೆ ಈ ಬಾರಿ ಒಟ್ಟು ನೆಲವತ್ತು ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಬೃಹತ್ ಸಂಖ್ಯೆಯ ಭಕ್ತರ ಆಗಮನದ ನಿರೀಕ್ಷೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶದಿಂದಲೂ ನೂರಾರು ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. 'ಈ ಅದ್ಭುತ ಕ್ಷಣದಲ್ಲಿ ಭಾಗಿಯಾಗಿರುವುದಕ್ಕೆ ನಾವು ತುಂಬಾ ಅದೃಷ್ಟವಂತರು. ಇದರಿಂದ ನಮ್ಮ ಮನಸ್ಸು ಆಧ್ಯಾತ್ಮದ ಕಡೆಗೆ ಒಲವು ತೋರುತ್ತಿದೆ' ಎಂದಿರುವ ವಿದೇಶಿಗರು, ಈ ಬಾರಿ ಮಹಾ ಕುಂಭಮೇಳದಲ್ಲಿ ಸ್ವಚ್ಛತೆಗೆ ನೀಡಿರುವ ಆದ್ಯತೆಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಕ್ತರಿಗಾಗಿ 1.5 ಲಕ್ಷ ಟೆಂಟ್ ನಿರ್ಮಾಣ
7,000 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳದಲ್ಲಿ 40 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ 10,000 ಹೆಕ್ಟೇರ್‌ಗಳ ವಿಶಾಲವಾದ ಪ್ರದೇಶದಲ್ಲಿ ಭಕ್ತರಿಗಾಗಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ. ಕುಂಭ ಮೇಳದ ಸ್ನಾನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಿಸಲಾಗಿದೆ.

ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಜೊತೆಗೆ 25,000 ಕಸದ ಬುಟ್ಟಿಗಳನ್ನು ಎಲ್ಲಡೆ ಇರಿಸಲಾಗಿದೆ. ಅಲ್ಲದೇ ಬುಟ್ಟಿಯಲ್ಲಿ ತುಂಬಿದ ಕಸ ವಿಲೇವಾರಿಗೆ 160 ತ್ಯಾಜ್ಯ ನಿರ್ವಹಣಾ ವಾಹನಗಳನ್ನು ಸಹ ನಿಯೋಜಿಸಲಾಗಿದೆ. ಈ ಮೂಲಕ ಈ ಬಾರಿಯ ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯತ್ತ ಹೆಚ್ಚಿನ ಗಮನಹರಿಸಲಾಗಿದೆ.












Click it and Unblock the Notifications