Vinay Hiremath: ಕೈಯಲ್ಲಿ ₹8,368 ಕೋಟಿ ಇದ್ರೂ ಏನ್ ಮಾಡೋದು ಗೊತ್ತಾಗ್ತಿಲ್ಲ ಎಂದ ಯುವಕ
ಕೆಲವರು ಮೂರು ಹೊತ್ತು ತಿನ್ನಲು, ಅಗತ್ಯ ಖರ್ಚುಗಳಿಗೆ ಸಾಕಾಗುವಷ್ಟು ಕೈಯಲ್ಲಿ ಕಾಸಿದ್ದರೆ ಸಾಕಪ್ಪ! ನೆಮ್ಮದಿಯಾಗಿ ಈ ಬದುಕು ಸಾಗಿಸೋಣ ಎಂದುಕೊಳ್ತಾರೆ. ಇನ್ನೂ ಕೆಲವರು ಆಹಾ ನನ್ನ ಕೈಯಲ್ಲಿ ಒಂದು ಕೋಟಿ ರೂಪಾಯಿ ಇದ್ದಿದ್ರೆ ಹಾಗೆ, ಹೀಗೆ ಇರ್ತಿದ್ದೆ ಅಂತೆಲ್ಲ ಕನಸು ಕಾಣುತ್ತಿರ್ತಾರೆ. ಆದ್ರೆ ಬರೋಬ್ಬರಿ 8,368 ಕೋಟಿ ರೂಪಾಯಿ ಕೈಯಲ್ಲಿದ್ರೂ ಏನ್ ಮಾಡೋದು? ಅನ್ನೋರನ್ನ ನೋಡಿರಲು ಸಾಧ್ಯವೇ ಇಲ್ಲ.
ಯಾಕಂದ್ರೆ 8,368 ಕೋಟಿ ಇದ್ರೆ ಆ ಲೈಫ್ ಹೇಗಿರುತ್ತೆ ಅಂತಾ ಹುಬ್ಬೇರಿಸುವವರೇ ಜಾಸ್ತಿ. ಅಂತದ್ರಲ್ಲಿ ಸಾವಿರಾರು ಕೋಟಿ ರೂಪಾಯಿ ಇದ್ರೂ ಏನಪ್ಪಾ ಮಾಡೋದು ಅನ್ನೋ ಬೇಜಾರಲ್ಲೇ ಇದ್ದಾರಂತೆ ಭಾರತೀಯ ಮೂಲದ ಉದ್ಯಮಿ ವಿನಯ್ ಹಿರೇಮಠ್. ಹೌದೂ ಲೂಮ್ ಎನ್ನುವ ಸ್ಟಾರ್ಟಪ್‌ನ ಸಹ-ಸಂಸ್ಥಾಪಕರಾದ ವಿನಯ್ ಹಿರೇಮಠ್ ಅವರು ಸದ್ಯ ಕೋಟಿಯಿದ್ದರೂ ಬೇಸರದಲ್ಲಿರುವ ವ್ಯಕ್ತಿ.'

ವಿನಯ್ ಮಾಡಿರುವ ಒಂದು ಪೋಸ್ಟ್ ಸದ್ಯ ಎಲ್ಲರ ಗಮನ ಸೆಳೆದಿದೆ. 8,368 ಕೋಟಿ ಇದ್ದರೂ ಈ ರೀತಿ ಹೇಳಿಕೆ ಕೊಡ್ತಾರಲ್ಲ ಶಿವಾ..! ಎಂದು ಶಾಕ್ ಆಗಿದ್ದಾರೆ. ವಿನಯ್ ಅವರು 2023ರಲ್ಲಿ ತಮ್ಮ ಲೂಮ್ ಸ್ಟಾರ್ಟಪ್ ಅನ್ನು ಸುಮಾರು 975 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು ಭಾರತದ 8,368 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಇಷ್ಟು ಅಪಾರ ಪ್ರಮಾಣದ ಹಣ ಕೈಸೇರಿದರೂ ವಿನಯ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ವಿನಯ್ ಅವರು ನಾನೀಗ ತುಂಬಾ ಶ್ರೀಮಂತ. ಆದರೆ, ನನ್ನ ಜೀವನದಲ್ಲಿ ಏನು ಮಾಡುವುದೋ ಗೊತ್ತಿಲ್ಲ ಎಂಬ ಶೀರ್ಷಿಕೆಯಲ್ಲಿ ಅವರು ಬ್ಲಾಗ್ ಬರೆದುಕೊಂಡಿದ್ದಾರೆ. ನನ್ನ ಕಂಪನಿಯನ್ನು ಮಾರಾಟ ಮಾಡಿದ ನಂತರ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ ಏನೆಲ್ಲ ಏರುಪೇರಾಯಿತು ಎಂದು ಅವರು ವಿವರಿಸಿದ್ದಾರೆ.
ಈಗ 33ರ ಹರೆಯದ ಹಿರೇಮಠ ಅವರು ಹೊಸ ಉದ್ಯಮ ಆರಂಭಿಸುವ ಗುರಿಯೊಂದಿಗೆ ಹವಾಯಿಯಲ್ಲಿ ಭೌತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಮುಂದಿನ ಪ್ರಯತ್ನಗಳು ಲೂಮ್‌ನಷ್ಟು ಯಶಸ್ವಿಯಾಗಬೇಕಾಗಿಲ್ಲ ಎಂದು ಅವರು ಒಪ್ಪಿಕೊಂಡರೂ, ಅದು ಇನ್ನೂ ಪ್ರತಿಫಲದಾಯಕವಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ.

ನನ್ನ ಕಂಪನಿಯನ್ನು ಮಾರಾಟ ಮಾಡಿದ ನಂತರ ನಾನು ಮತ್ತೆ ಎಂದಿಗೂ ಕೆಲಸ ಮಾಡದಿರುವ ಸ್ಥಿತಿಯಲ್ಲಿ ನನ್ನನ್ನು ಕಂಡುಕೊಂಡಿದ್ದೇನೆ. ಈ ಅವಧಿಯಲ್ಲಿ ಎಲ್ಲವೂ ಒಂದು ಅನ್ವೇಷಣೆಯಂತೆ ಭಾಸವಾಗುತ್ತಿದೆ. ಆದರೆ ಸ್ಪೂರ್ತಿದಾಯಕ ರೀತಿಯಲ್ಲಿ ಯಾವುದೂ ಅಲ್ಲ. ನನಗೆ ಈಗ ಎಲ್ಲದರಲ್ಲೂ ಕೊನೆಯಿಲ್ಲದ ಸ್ವಾತಂತ್ರ್ಯವಿದೆ. ಆದರೂ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ಈ ಪೋಸ್ಟ್‌ನ ಉದ್ದೇಶವು ಬಡಾಯಿ ಕೊಚ್ಚಿಕೊಳ್ಳುವುದು ಅಥವಾ ಸಹಾನುಭೂತಿ ಗಳಿಸುವುದಲ್ಲ ಎಂದು ವಿನಯ್ ಹೇಳಿಕೊಂಡಿದ್ದಾರೆ.
ವಿನಯ್ ಅವರು ತಮ್ಮ ಪ್ರೇಯಸಿಯೊಂದಿಗೆ ಹೊಸತನ ಹುಡುಕುತ್ತಾ ಪ್ರಯಾಣಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಎರಡು ವರ್ಷಗಳ ಪ್ರೀತಿಯ ನಂತರ ಬ್ರೇಕ್‌ಅಪ್ ಆದ ಕಾರಣ ನಮ್ಮ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನನ್ನ ಎಕ್ಸ್ (ಮಾಜಿ ಪ್ರೇಯಸಿ) ಇದನ್ನು ಓದುತ್ತಿದ್ದರೆ, ಎಲ್ಲದಕ್ಕೂ ಧನ್ಯವಾದಗಳು. ಕ್ಷಮಿಸಿ, ನೀವು ನನಗೆ ಬೇಕಾದಂತೆ ಆಗಲು ಸಾಧ್ಯವಾಗಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ವಿನಯ್ ಹಿರೇಮಠ್ ಅವರು 1991ರಲ್ಲಿ ಜನಿಸಿದರು. ಸ್ಟಾರ್ಟ್‌ಅಪ್ ಬಗ್ಗೆ ಅವರಿಗಿದ್ದ ಉತ್ಸಾಹದೊಂದಿಗೆ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊಗೆ ತೆರಳಿದರು. ಕೊನೆಗೆ 2018ರಲ್ಲಿ ಫೋರ್ಬ್ಸ್‌ನ ಅಂಡರ್ 30 ಪಟ್ಟಿಯಲ್ಲೂ ವಿನಯ್ ಮಿಂಚಿದ್ದರು. ಸದ್ಯ 33 ವಯಸ್ಸಿನ ಹಿರೇಮಠ ಅವರು ಹೊಸ ಉದ್ಯಮ ಆರಂಭಿಸುವ ಗುರಿಯೊಂದಿಗೆ ಹವಾಯಿಯಲ್ಲಿ ಭೌತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಸ್ಟಾರ್ಟಪ್ ಲೂಮ್‌ಗಿಂತಲೂ ಪ್ರತಿಫಲದಾಯಕವಾದ ಕೆಲಸ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications