ದೆಹಲಿಯಲ್ಲಿ ಮದ್ಯ ನೀತಿ ರಾದ್ಧಾಂತ: ಹೆಂಡಕ್ಕಾಗಿ ಉದ್ದುದ್ದ ಕ್ಯೂ!
ನವದೆಹಲಿ, ಜುಲೈ 31: ಕೋವಿಡ್ ಲಾಕ್‌ಡೌನ್ ಘೋಷಣೆ ಆಗುವ ಸಂದರ್ಭಗಳಲ್ಲಿ ಕೆಲ ದಿನಗಳ ಕಾಲ ಮದ್ಯದಂಗಡಿಗಳಲ್ಲಿ ಕಿಲೋಮೀಟರ್‌ಗಟ್ಟಲೇ ಜನರು ಕ್ಯೂ ನಿಂತ ದೃಶ್ಯಗಳು ನಿಮಗೆ ನೆನಪಿರಬಹುದು. ಈಗ ರಾಷ್ಟ್ರ ರಾಜಧಾನಿ ದೆಹಲಿಗೆ ಹೋದರೆ ಅಂಥದ್ದೇ ದೃಶ್ಯ ಕಾಣಸಿಗುತ್ತದೆ.
ದೆಹಲಿಯ ಬಹುತೇಕ ಮದ್ಯದಂಗಡಿಗಳಲ್ಲಿ ಎಣ್ಣೆ ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಇದ್ಯಾವುದೋ ಹಬ್ಬಹರಿದಿನದ ಬಂಪರ್ ಆಫರೋ ಅಥವಾ ಯಾವುದೋ ಹೊಸ ಲಾಕ್‌ಡೌನ್ ಘೋಷಿಸುತ್ತಾರೆಂದಲ್ಲ. ದೆಹಲಿ ಸರಕಾರ ತನ್ನ ಹೊಸ ಮದ್ಯ ನೀತಿಯನ್ನು ಕೈಬಿಟ್ಟು ಹಳೆಯ ನೀತಿಯನ್ನೇ ಜಾರಿಗೆ ತರುವುದಾಗಿ ಹೇಳಿದ್ದು ಜನರು ಹೆಂಡಕ್ಕಾಗಿ ಮುಗಿಬೀಳಲು ಕಾರಣವೆನ್ನಲಾಗಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಇತ್ತೀಚೆಗೆ ದೆಹಲಿ ಸರಕಾರದ ಹೊಸ ಮದ್ಯ ನೀತಿಯಲ್ಲಿ ಇವೆ ಎನ್ನಲಾದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಈ ಬೆಳವಣಿಗೆ ಆದ ಬೆನ್ನಲ್ಲೇ ಸರಕಾರ ಹೊಸ ಮದ್ಯ ನೀತಿಯನ್ನು ಕೈಬಿಟ್ಟಿತು.
ಆಗಸ್ಟ್ 1ರಿಂದಲೇ ಹಳೆಯ ಮದ್ಯ ನೀತಿ ಜಾರಿಗೆ ಬರಬೇಕು. ಆದರೆ, ಅದನ್ನು ಅಳವಡಿಸಲು ಸಮಯ ತಗುಲುವುದರಿಂದ ಹೊಸ ಮದ್ಯ ನೀತಿಯನ್ನು ಇನ್ನೂ ಒಂದು ತಿಂಗಳವರೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ. ಆಗಸ್ಟ್ 31ರವರೆಗೂ ಹೊಸ ಮದ್ಯ ನೀತಿಯೇ ಮುಂದುವರಿಯಲಿದೆ. ಅದಾಗಿ ಆರು ತಿಂಗಳ ಕಾಲ ಹಳೆಯ ಮದ್ಯ ನೀತಿ ಅಳವಡಿಕೆಯಲ್ಲಿರುತ್ತದೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ವಿಚಾರವನ್ನು ಶನಿವಾರ ತಿಳಿಸಿದ್ದಾರೆ.

ದೆಹಲಿಯ ಹಳೆಯ ಮದ್ಯ ನೀತಿ ಏನು?
ದೆಹಲಿಯ ಮೂಲ ಮದ್ಯ ನೀತಿ ಪ್ರಕಾರ, ಮದ್ಯ ಮಾರಾಟದಲ್ಲಿ ಯಾರೂ ಕೂಡ ರಿಯಾಯಿತಿ ಕೊಡುವಂತಿಲ್ಲ ಎಂದಿತ್ತು. ಮದ್ಯ ಮಾರಾಟದಲ್ಲಿ ಖಾಸಗಿಗಿಂತ ಸರಕಾರಿ ಮಳಿಗೆಗಳೇ ಹೆಚ್ಚಿದ್ದವು. ಕರ್ನಾಟಕದಲ್ಲಿ ಎಂಎಸ್‌ಐಎಲ್ ಇದ್ದಂತೆ ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸರಕಾರಿ ಸ್ವಾಮ್ಯದ ನಾಲ್ಕು ನಿಗಮಗಳಿವೆ. 2021ಕ್ಕೆ ಮುನ್ನ ದೆಹಲಿಯಲ್ಲಿ 864 ಮದ್ಯದಂಗಡಿಗಳಿದ್ದವು. ಅದರಲ್ಲಿ ಸರಕಾರಿ ಸಂಸ್ಥೆಗಳ ಮಳಿಗೆಗಳೇ 475 ಇದ್ದವು.
ದೆಹಲಿಯಲ್ಲಿ ಸಮರ್ಪಕವಾದ ಮದ್ಯ ನೀತಿ ಇರಲಿಲ್ಲ. ಸರಕಾರಿ ಸ್ವಾಮ್ಯದ ಲಿಕ್ಕರ್ ಶಾಪ್‌ಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳುತ್ತಾರೆ.

ಹೊಸ ಮದ್ಯ ನೀತಿ ಏನು?
ಆಮ್ ಆದ್ಮಿ ಸರಕಾರ 2021 ನವೆಂಬರ್‌ನಿಂದ ಹೊಸ ಮದ್ಯ ನೀತಿ ಜಾರಿಗೆ ತಂದಿತು. ಅದರಂತೆ ಮದ್ಯ ಮಾರಾಟಕ್ಕೆ ಖಾಸಗಿಯವರಿಗೆ ಹೆಚ್ಚಿನ ಅವಕಾಶ ನೀಡಲಾಯಿತು. ಯಾರು ಎಷ್ಟು ಬೇಕಾದರೂ ಡಿಸ್ಕೌಂಟ್ ಕೊಡುವ ಅವಕಾಶ ಮಾಡಿಕೊಡಲಾಯಿತು.
ಹೆಂಡವನ್ನು ಮನೆಗೆ ತಲುಪಿಸುವುದು, ಅಂದರೆ ಹೋಮ್ ಡೆಲಿವರಿಗೂ ಅವಕಾಶ ಕೊಡಲಾಯಿತು. ಮದ್ಯದಂಗಡಿಗಳು ರಾತ್ರಿ 3 ಗಂಟೆಯವರೆಗೂ ತೆರೆಯಬಹುದಾಗಿತ್ತು. ಇದರಿಂದ ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಖತ್ ಪುಷ್ಟಿ ಸಿಕ್ಕಿತು. ದೆಹಲಿ ಸರಕಾರದ ಬೊಕ್ಕಸವೂ ಭರ್ತಿಯಾಗತೊಡಗಿತು.
"ಭ್ರಷ್ಟಾಚಾರ ನಿಲ್ಲಿಸಲು ನಾವು ಹೊಸ ಮದ್ಯ ನೀತಿ ಜಾರಿಗೆ ತಂದೆವು. ಹಳೆಯ ಮದ್ಯ ನೀತಿ ಇದ್ದಾಗ 850 ಮದ್ಯದಂಗಡಿಗಳಿಂದ 6000 ಕೋಟಿ ರೂ ಆದಾಯ ಬರುತ್ತಿತ್ತು. ಆದರೆ, ಹೊಸ ನೀತಿ ಅಳವಡಿಕೆಯಾದಾಗ ಅಷ್ಟೇ ಸಂಖ್ಯೆಯ ಲಿಕ್ಕರ್ ಶಾಪ್‌ಗಳಿಂದ 9 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದುಬಂದಿದೆ" ಎಂದು ಮನೀಶ್ ಸಿಸೋಡಿಯಾ ತಮ್ಮ ಮದ್ಯ ನೀತಿಯನ್ನು ಸಮರ್ಥಿಸಿಕೊಂಡರು.
ಕೆಲ ವರದಿಗಳ ಪ್ರಕಾರ, ದೆಹಲಿ ಸರಕಾರಕ್ಕೆ ಮದ್ಯ ಮಾರಾಟದಿಂದ 13 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬರುತ್ತಿದೆ.

ಲೆಫ್ಟಿನೆಂಟ್ ಗವರ್ನರ್ ಆಕ್ಷೇಪವೇನು?
ಹೊಸ ಮದ್ಯ ನೀತಿಯ ಪ್ರಕ್ರಿಯೆಯಲ್ಲಿ ಲೋಪದೋಷಗಳಿಗೆ, ಅಕ್ರಮಗಳಾಗಿವೆ ಎಂದು ಸರಕಾರದ ಕಾರ್ಯದರ್ಶಿ ವರದಿ ನೀಡಿದ್ದರು. ಮದ್ಯ ಮಾರಾಟಕ್ಕೆ ಲೈಸೆನ್ಸ್ ನೀಡುವಾಗ ಬಹಳಷ್ಟು ಅವ್ಯವಹಾರ ನಡೆಸಲಾಗಿದೆ. ಪರವಾನಿಗೆ ಶುಲ್ಕದ ಮೇಲೆ 144.36 ಕೋಟಿ ರೂನಷ್ಟು ಮನ್ನಾ ಮಾಡಲಾಗಿದೆ. ಹಾಗೆಯೇ, ವಿದೇಶೀ ಮದ್ಯದ ಸರಕಿನ ಮೇಲೆ ವಿಧಿಸಲಾಗುತ್ತಿದ್ದ ಆಮದು ಸುಂಕವನ್ನು ತೆರವುಗೊಳಿಸಲಾಯಿತು. ಇದರಿಂದ ಸರಕಾರದ ಆದಾಯಕ್ಕೆ ನಷ್ಟವಾಗಿದೆ ಎಂದು ಕಾರ್ಯದರ್ಶಿಗಳು ತಮ್ಮ ವರದಿಯಲ್ಲಿ ಎತ್ತಿ ತೋರಿಸಿದ್ದರು.
ಅದರಂತೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ದೆಹಲಿ ಸರಕಾರದ ಹೊಸ ಮದ್ಯ ನೀತಿಯಲ್ಲಿನ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಶಿಫಾರಸು ಮಾಡಿದರು.

ಕ್ಯೂ ಯಾಕೆ?
ಆಮ್ ಆದ್ಮಿ ಸರಕಾರ ಹಳೆಯ ಮದ್ಯ ನೀತಿಯನ್ನೇ ಜಾರಿಗೆ ತರುವುದಾಗಿ ಹೇಳಿದ ಬಳಿಕ ದೆಹಲಿಯ ಮದ್ಯದಂಗಡಿಗಳಿಗೆ ಸಾಕಷ್ಟು ಗೊಂದಲ ಉಂಟಾಗಿದೆ. ಹೊಸ ಮದ್ಯ ನೀತಿ ರದ್ದಾದ ದಿನವೇ ಖಾಸಗಿ ಮದ್ಯದಂಗಡಿಗಳ ಪರವಾನಿಗೆಯೂ ಅಸಿಂಧುಗೊಂಡಂತಾಗುತ್ತದೆ. ಜುಲೈ 31ರೊಳಗೆ ತಮ್ಮ ಅಂಗಡಿಗಳಲ್ಲಿದ್ದ ದಾಸ್ತಾನನ್ನು ಖಾಲಿ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ, ಅಂಗಡಿಗಳು ಭಾರೀ ರಿಯಾಯಿತಿ ಘೋಷಿಸಿದರು. ಪರಿಣಾಮವಾಗಿ ಜನರು ಮದ್ಯದಂಗಡಿಗೆ ಮುಗಿಬಿದ್ದು ಹೆಂಡ ಖರೀದಿಸತೊಡಗಿದರು.
ಪರಿಣಾಮವಾಗಿ, ಮದ್ಯದಂಗಡಿಗಳಲ್ಲಿ ದಾಸ್ತಾನಾಗಿದ್ದ ಎಲ್ಲಾ ಸರಕುಗಳು ಬಹುತೇಕ ಖಾಲಿ ಆದವು. ಈಗ ಸರಕಾರ ಒಂದು ತಿಂಗಳವರೆಗೆ ಹೊಸ ಮದ್ಯ ನೀತಿಯನ್ನು ವಿಸ್ತರಿಸುವುದಾಗಿ ಹೇಳಿದೆ. ಆದರೆ, ಮದ್ಯದಂಗಡಿಗಳಲ್ಲಿ ಸರಕು ಸಿಗುತ್ತಿಲ್ಲ. ಜನರೂ ಉದ್ದುದ್ದ ಕ್ಯೂ ನಿಲ್ಲುವುದು ನಿಂತಿಲ್ಲ.
ಸಗಟು ಮದ್ಯದ ಸರಬರಾಜು ಆಗುತ್ತಿಲ್ಲ. ಖಾಸಗಿ ಮಳಿಗೆಗಳು ಆನ್‌ಲೈನ್ ಮಾರುಕಟ್ಟೆ ಮೂಲಕ ಮದ್ಯ ತರಿಸಿಕೊಳ್ಳಬೇಕಾಗಿದೆ. ಅಥವಾ ನೆರೆಯ ಗುರುಗ್ರಾಮ ಇತ್ಯಾದಿ ಕಡೆಯಿಂದ ಮದ್ಯದ ಸರಬರಾಜು ಪಡೆದುಕೊಳ್ಳಬೇಕು. ಹೀಗಾಗಿ, ದೆಹಲಿಯಲ್ಲಿ ಸದ್ಯಕ್ಕೆ ಮದ್ಯ ದುಬಾರಿ ಆಗತೊಡಗಿದೆ. ಒಂದು ತೆಗೆದುಕೊಂಡರೆ ಒಂದು ಉಚಿತ ಎಂಬ ರೀತಿಯಲ್ಲಿ ಮಾರಾಟವಾಗುತ್ತಿದ್ದ ಮದ್ಯಕ್ಕೆ ಈಗ ಹೊಸ ಬೇಡಿಕೆ ಶುರುವಾಗಿದೆ.

ಮುಂದೇನು?
ದೆಹಲಿ ಸರಕಾರ ಆಗಸ್ಟ್ 31ರವರೆಗೆ ಹೊಸ ಮದ್ಯ ನೀತಿಯನ್ನೇ ಮುಂದುವರಿಸುವುದಾಗಿ ಹೇಳಿದೆ. ಅದಾಗಿ 6 ತಿಂಗಳವರೆಗೂ, ಅಂದರೆ 2023 ಫೆಬ್ರವರಿ 28ರವರೆಗೂ ಹಳೆಯ ಮದ್ಯ ನೀತಿಯೇ ಜಾರಿಯಲ್ಲಿರುತ್ತದೆ. ಅಷ್ಟರೊಳಗೆ 2020-21ರ ಮದ್ಯ ನೀತಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲು ಆಮ್ ಆದ್ಮಿ ಸರಕಾರ ನಿರ್ಧರಿಸಿದೆ. ಮತ್ತೆ ಹೊಸದಾಗಿ ಲೈಸೆನ್ಸ್ ವಿತರಿಸುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications