ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಸಾಧ್ಯಾಸಾಧ್ಯತೆ
ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ಮೈತ್ರಿ ಮೂಲಕ ಆಡಳಿತ ನಡೆಸುತ್ತಿರುವ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ಸರಕಾರ ಈಗ ಗರಗರ ಸುತ್ತುವಂತಾಗಿದೆ. ಸಾಂಪ್ರದಾಯಿಕ ಮಿತ್ರ ಮತ್ತು ತಾತ್ವಿಕವಾಗಿ ಸಹೋದರ ಪಕ್ಷವಾಗಿರುವ ಬಿಜೆಪಿಯ ಸಖ್ಯ ಬಿಟ್ಟು ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿದ ಶಿವಸೇನಾಗೆ ಈಗ ಬಂಡಾಯದ ಬಿಸಿ ತಾಕಿದೆ.
ಶಿವಸೇನಾ ಪಕ್ಷದ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿರುವ ಏಕನಾಥ್ ಶಿಂದೆ ದಿಢೀರನೇ ಬಂಡಾಯದ ಬಾವುಟ ಹಾರಿಸಿ ಸಂಚಲನ ಸೃಷ್ಟಿಸಿದ್ದಾರೆ. ತನ್ನ ಜೊತೆ ಹಲವು ಶಾಸಕರನ್ನು ಕರೆದುಕೊಂಡು ನೆರೆಯ ಗುಜರಾತ್ ರಾಜ್ಯದ ಸೂರತ್ ನಗರದ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರು. ಬಳಿಕ ನಿನ್ನೆ ಬುಧವಾರ ಅಸ್ಸಾಮ್‌ನ ಗುವಾಹಟಿಗೆ ಈ ಭಿನ್ನಮತೀಯ ಶಾಸಕರು ತೆರಳಿದ್ದಾರೆ.
ಶಾಸಕರು Yes ಎಂದರೆ 'ಮಹಾ' ವಿಕಾಸ ಅಘಾಡಿಗೆ ಶಿವಸೇನೆ ಟಾಟಾ.. ಬಾಯ್ ಬಾಯ್!
ಏಕನಾಥ್ ಶಿಂದೆ ಬಳಿ 17 ಶಾಸಕರು ಇದ್ದರೆಂದು ಆರಂಭದಲ್ಲಿ ಹೇಳಲಾಗುತ್ತಿತ್ತು. ನಂತರ ಅವರ ಜೊತೆ 27 ಶಾಸಕರು ಇದ್ದಾರೆಂಬ ಮಾಹಿತಿ ಬಂತು. ಏಕನಾಥ್ ಶಿಂದೆ ಹೇಳಿಕೊಂಡ ಪ್ರಕಾರ ಅವರ ಬಳಿ 46 ಶಾಸಕರು ಇದ್ದಾರಂತೆ. ಇವರಲ್ಲಿ ಶಿವಸೇನಾದವರೇ 40 ಮಂದಿ ಇದ್ದಾರೆನ್ನಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ ಪಕ್ಷದ ಶಾಸಕರ ಒಟ್ಟು ಸಂಖ್ಯೆ 55. ಇವರಲ್ಲಿ ಬರೋಬ್ಬರಿ 40 ಶಾಸಕರು ಏಕನಾಥ್ ಶಿಂದೆ ಬಣದಲ್ಲಿರುವುದು ಹೌದಾದರೆ ಶಿಂದೆ ದೋಣಿ ದಡ ಸೇರುವುದರಲ್ಲಿ ಅನುಮಾನ ಇಲ್ಲ.
ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ, ನಾವು ಶಿವಸೇನಾ ಮತ್ತೆ ಕಟ್ಟುತ್ತೇವೆ: ರಾವತ್

ಸಿಎಂ ಸಭೆಯಲ್ಲಿ ಬೆರಳೆಣಿಕೆ ಶಾಸಕರು
ಇಂದು ಗುರುವಾರ ಸಿಎಂ ಉದ್ಧವ್ ಠಾಕ್ರೆ ತಮ್ಮ ನಿವಾಸದಲ್ಲಿ ಕರೆಯಲಾದ ತಮ್ಮ ಪಕ್ಷದ ಶಾಸಕರ ಸಭೆಗೆ ಹಾಜರಾದವರ ಸಂಖ್ಯೆ ಕೇವಲ 11 ಮಾತ್ರ. ತಮ್ಮ ಬಳಿ 27ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಹೇಳುವ ಉದ್ಧವ್ ಠಾಕ್ರೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆಯಲ್ಲಿರುವ ಇತರ ಶಾಸಕರು ಬಂದು ಸೇರಿಕೊಳ್ಳಲಿದ್ದಾರೆ ಎನ್ನುತ್ತಾರೆ.
ಇಲ್ಲಿ ಮೇಲ್ನೋಟಕ್ಕೆ ಉದ್ಧವ್ ಠಾಕ್ರೆ ಜೊತೆಗಿರುವ ಶಾಸಕರು ಬೆರಳೆಣಿಕೆಯಷ್ಟೇ ಕಾಣುತ್ತಾರೆ. ಏಕನಾಥ್ ಶಿಂದೆ ಬಲ ಹೆಚ್ಚಿದಂತೆ ಕಾಣುತ್ತಿರುವುದು ಹೌದು. ಬಲಾಬಲ ಏನೇ ಇದ್ದರೂ ಪಕ್ಷದೊಳಗೆ ಭಿನ್ನಮತ ಎದ್ದರೆ ಮೊದಲು ಪರಿಗಣಿಸಲಾಗುವ ಅಂಶ ಎಂದರೆ ಪಕ್ಷಾಂತರ ನಿಷೇಧದ ಕಾನೂನು. ಏಕನಾಥ್ ಶಿಂದೆ ಮತ್ತವರ ತಂಡದ ನೆತ್ತಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಕತ್ತಿ ಬೀಳುತ್ತದಾ ಎಂಬುದು ಪ್ರಶ್ನೆ.

ಪಕ್ಷಾಂತರ ನಿಷೇಧ ಕಾಯ್ದೆ ಏನು ಹೇಳುತ್ತೆ?
ರಾಜಕೀಯದಲ್ಲಿ ಶಿಸ್ತು ತರಲೆಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಚುನಾವಣೆಯ ಬಳಿಕ ಒಬ್ಬ ಜನಪ್ರತಿನಿಧಿ ಪಕ್ಷನಿಷ್ಠೆ ತೊರೆದು ಸ್ವಯಂ ಆಗಿ ಬೇರೆ ಪಕ್ಷಗಳಿಗೆ ಸೇರಿಕೊಂಡರೆ ಅದು ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಇದು ಪಕ್ಷೇತರನಾದ ಜನಪ್ರತಿನಿಧಿಗೂ ಅನ್ವಯವಾಗುತ್ತದೆ.
ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾದಲ್ಲಿ ಆ ಜನಪ್ರತಿನಿಧಿಯ ಸ್ಥಾನ ಅಸಿಂಧುಗೊಳ್ಳುತ್ತದೆ. ಶಾಸಕನಾದರೆ ಆತ ಶಾಸಕ ಸ್ಥಾನ ಕಳೆದುಕೊಂಡು ಅನರ್ಹ ಶಾಸಕನೆನಿಸುತ್ತಾನೆ.

ಕಾಯ್ದೆ ಅನ್ವಯ ಆಗದಿರಲು ಹೇಗಿರಬೇಕು?
ಒಂದು ಪಕ್ಷದ ಒಟ್ಟಾರೆ ಶಾಸಕರ ಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಶಾಸಕರು ಬಂಡಾಯ ಎದ್ದು ಬೇರೆ ಬಣ ಮಾಡಿಕೊಂಡರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ. ಹೀಗೆ ಭಿನ್ನಮತೀಯರ ಈ ಗುಂಪು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಹುದು. ಅಥವಾ ತಮ್ಮದೇ ಹೊಸ ರಾಜಕೀಯ ಪಕ್ಷ ಮಾಡಿಕೊಳ್ಳಬಹುದು.
ಅಥವಾ ಪಕ್ಷದಿಂದಲೇ ಉಚ್ಛಾಟನೆಯಾಗಿ ಒಬ್ಬ ಶಾಸಕ ಬೇರೆ ಪಕ್ಷ ಸೇರಿಕೊಂಡರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲ್ಲ.

ಮಹಾರಾಷ್ಟ್ರದಲ್ಲಿ ಹೇಗಿದೆ ಸ್ಥಿತಿ?
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಬಣಕ್ಕೆ ಒಳ್ಳೆಯ ಸಂಖ್ಯೆ ಇದೆ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ. ಶಿವಸೇನಾ ಪಕ್ಷದ ಒಟ್ಟು ಶಾಸಕರ ಸಂಖ್ಯೆ 55 ಇದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗದೇ ಇರಬೇಕಾದರೆ ಶಿಂದೆ ಬಳಿ 37 ಶಾಸಕರಾದರೂ ಇರಬೇಕು. ಶಿಂದೆ ತಮ್ಮ ಬಳಿ 40ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ನಿಜವೇ ಆದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇವರ ಮೇಲೆ ಜಾರಿ ಮಾಡಲು ಆಗುವುದಿಲ್ಲ.

ಸ್ಪೀಕರ್‌ಗೆ ಅಧಿಕಾರ
ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಹಾಗೂ ಶಾಸಕರಿಗೆ ಶಿಕ್ಷೆ ವಿಧಿಸುವುದು ಈ ಅಧಿಕಾರ ವಿಧಾಸನಭಾ ಅಧ್ಯಕ್ಷ ಅಥವಾ ಸ್ಪೀಕರ್‌ಗೆ ಇರುತ್ತದೆ. ಇಲ್ಲಿ ಕೋರ್ಟ್ ಕೂಡ ಮಧ್ಯ ಪ್ರವೇಶಿಸಲು ಸಂವಿಧಾನದಲ್ಲಿ ಅನುಮತಿ ಇದೆ.
ವಿಧಾನಸಭೆಯಲ್ಲಿ ಯಾವುದೇ ಸದಸ್ಯ ಕೂಡ ಸ್ಪೀಕರ್ ಬಳಿ ದೂರು ಕೊಡಬಹುದು. ಈ ದೂರಿನ ಆಧಾರದ ಮೇಲೆ ಸ್ಪೀಕರ್ ಅವರು ಆರೋಪಿತ ಶಾಸಕರಿಂದ ಉತ್ತರ ಕೇಳಿ ನೋಟೀಸ್ ಕೊಡಬಹುದು. ಈ ನೋಟಿಸ್ ತಲುಪಿದ 7 ದಿನದೊಳಗೆ ಶಾಸಕರು ಉತ್ತರ ನೀಡಬೇಕು. ಪಕ್ಷ ತ್ಯಜಿಸಲು ಶಾಸಕರು ಸಕಾರಣ ಕೊಟ್ಟು, ಸ್ಪೀಕರ್‌ಗೆ ಅದು ಸಮಾಧಾನವಾದಲ್ಲಿ ಕಾಯ್ದೆ ಅನ್ವಯ ಮಾಡದೇ ಹೋಗಬಹುದು. ಅದರೆ, ತೃಪ್ತಿಕರ ಉತ್ತರ ಕೊಡದಿದ್ದಲ್ಲಿ ಸ್ಪೀಕರ್ ಶಿಸ್ತಿನ ಕ್ರಮ ಕೈಗೊಳ್ಳಬಹುದು.

ಮಹಾರಾಷ್ಟ್ರದಲ್ಲಿ ಸ್ಪೀಕರ್ ಸ್ಥಾನ ಖಾಲಿ
ಮಹಾರಾಷ್ಟ್ರದಲ್ಲಿ ಸದ್ಯಕ್ಕೆ ಸ್ಪೀಕರ್ ಸ್ಥಾನ ಖಾಲಿ ಇದೆ. 2019ರಲ್ಲಿ ಕಾಂಗ್ರೆಸ್‌ನ ನಾನಾ ಪಟೋಲೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗಿನಿಂದಲೂ ಆ ಸ್ಥಾನ ಖಾಲಿ ಉಳಿದಿದೆ. ಡೆಪ್ಯುಟಿ ಸ್ಪೀಕರ್ ಆಗಿರುವ ಎನ್‌ಸಿಪಿಯ ನರಹರಿ ಝಿರವಾಲ್ ಅವರೇ ಆಗಿನಿಂದಲೂ ಸ್ಪೀಕರ್ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ರೀತಿ ಮಾಡಲು ಸಂವಿಧಾನದ 180(1) ರಲ್ಲಿ ಅವಕಾಶ ಇದೆ.
ಒಬ್ಬ ಸ್ಪೀಕರ್ ಏನೆಲ್ಲಾ ಅಧಿಕಾರ ಹೊಂದಿರುತ್ತಾರೋ ಅದೆಲ್ಲವೂ ಅವರ ಅನುಪಸ್ಥಿತಿಯಲ್ಲಿ ಡೆಪ್ಯುಟಿ ಸ್ಪೀಕರ್‌ಗೆ ಇರುತ್ತದೆ.
ಈಗ ಒಂದು ವೇಳೆ ಸ್ಪೀಕರ್ ಅಥವಾ ಡೆಪ್ಯುಟಿ ಸ್ಪೀಕರ್ ಆದವರು ಶಾಸಕರನ್ನು ಅನರ್ಹಗೊಳಿಸಿದ್ದೇ ಅದಲ್ಲಿ ಆ ಅನರ್ಹ ಶಾಸಕರು ಕೋರ್ಟ್ ಮೆಟ್ಟಿಲೇರುವ ಅವಕಾಶ ಇದೆ.
ಕರ್ನಾಟಕದಲ್ಲೂ ಹೀಗೇ ಆಗಿದ್ದು ನೆನಪಿರಬಹುದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳಿಂದ 17 ಶಾಸಕರು ಬಂಡಾಯ ಎದ್ದು ರಾಜೀನಾಮೆ ನೀಡಿದ್ದರು. ಅವರ ಪೈಕಿ 16 ಶಾಸಕರನ್ನು ಅನರ್ಹಗೊಳಿಸಲಾಯಿತು. ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಿ ಸ್ಪೀಕರ್ ತೀರ್ಪು ನೀಡಿದ್ದರು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಈ ಶಾಸಕರು ಮೇಲ್ಮನವಿ ಮಾಡಿದರು. ಆಗ ಶಾಸಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಕೋರ್ಟ್ ತೀರ್ಪು ಕೊಟ್ಟಿತ್ತು. ಈಗ ಮಹಾರಾಷ್ಟ್ರದಲ್ಲಿ ಇಂಥದ್ದೇ ಬೆಳವಣಿಗೆ ಆದರೂ ಆಗಬಹುದು.
(ಒನ್ಇಂಡಿಯಾ ಸುದ್ದಿ)