ಮುದ್ದಿನ ನಾಯಿಯ ಹುಟ್ಟುಹಬ್ಬಕ್ಕೆ ₹5 ಲಕ್ಷ ಖರ್ಚು, ನೂರಾರು ಗೆಸ್ಟ್ ಬಂದಿದ್ದ ಪಾರ್ಟಿ ಹೇಗಿತ್ತು?
ಮನುಷ್ಯರ ಬದುಕಿನಲ್ಲಿ ಹುಟ್ಟಿದ ದಿನಕ್ಕೆ ವಿಶೇಷ ಮಹತ್ವವಿದೆ. ಇದೇ ಕಾರಣಕ್ಕೆ ಪ್ರತಿ ವರ್ಷವೂ ಹುಟ್ಟಿದ ದಿನವನ್ನು ಹಬ್ಬದಂತೆ ಆಚರಣೆ ಮಾಡಿ ಸಂಭ್ರಮಿಸುವುದು ವಾಡಿಕೆ. ಚಿಕ್ಕಮಕ್ಕಳಿಗೆ ಪ್ರತಿ ವರ್ಷವೂ ಅದ್ಧೂರಿಯಾಗಿ ಬರ್ತ್‌ಡೇ ಆಚರಿಸಿ, ಬಂಧುಬಳಗವನ್ನು ಕರೆದು ಆತಿಥ್ಯ ನೀಡುವ ಪದ್ಧತಿ ಮೊದಲಿನಿಂದಲೂ ಇದೆ. ಅಷ್ಟರಮಟ್ಟಿಗೆ ಹುಟ್ಟುಹಬ್ಬಕ್ಕೆ ಜನ ಸ್ಥಾನ ನೀಡಿದ್ದಾರೆ.
ಇನ್ನು ಶ್ರೀಮಂತರಂತೂ ಹುಟ್ಟುಹಬ್ಬವನ್ನು ದೊಡ್ಡಮಟ್ಟದಲ್ಲಿ ದುಬಾರಿ ಹಣ ಖರ್ಚು ಮಾಡಿ ಎಲ್ಲರ ಹುಬ್ಬೇರಿಸುತ್ತಾರೆ. ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸುತ್ತಾರೆ. ಹೆಚ್ಚೆಂದರೆ ಮಕ್ಕಳಿಗೆ ಒಂದು ಹೊಸ ಬಟ್ಟೆ, ಕೇಕು, ಸಿಹಿ ತಿನಿಸುಗಳನ್ನು ಕೊಡಿಸಿ ಇಂದಿಗೂ ಹುಟ್ಟುಹಬ್ಬ ಆಚರಿಸುತ್ತೇವೆ. ಈಗ ಪ್ರಾಣಿಗಳನ್ನು ಕೂಡ ಮಕ್ಕಳಂತೆಯೇ ಪರಿಪಾಲಿಸುವ ಟ್ರೆಂಡ್ ಇದೆ. ಮೊದಲೆಲ್ಲ ಶೋಕಿಗಾಗಿ ಕೆಲವರು ಮನೆಗಳನ್ನು ನಾಯಿಗಳನ್ನು ಸಾಕಿಕೊಳ್ಳುತ್ತಿದ್ದರು. ಈಗ ಬಹುತೇಕರ ಮನೆಗಳಲ್ಲಿ ಸಾಕುನಾಯಿಗಳು ಮನೆಮಂದಿಯಲ್ಲಿ ಒಬ್ಬರಾಗಿವೆ.

ಅಷ್ಟರಮಟ್ಟಿಗೆ ಪ್ರಾಣಿಪ್ರಿಯರು ಈಗ ಎಲ್ಲೆಡೆ ಇದ್ದಾರೆ. ಬಹುತೇಕರು ವಿಶೇಷ ಕಾಳಜಿ ತೋರಿ ತಮ್ಮ ಮನೆಗಳಲ್ಲಿ ನಾಯಿ ಮರಿಗಳನ್ನು ಸಾಕಿಕೊಂಡಿದ್ದಾರೆ. ಆದರೆ, ಈಗ ಮುದ್ದಿನ ನಾಯಿಗಳಿಗೂ ಹುಟ್ಟುಹಬ್ಬ ಆಚರಿಸುವ ಕಾಲ ಬಂದಾಗಿದೆ. ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿಗೆ ಲಕ್ಷಲಕ್ಷ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಹೌದು, ಜಾರ್ಖಂಡ್‌ನ ಮಹಿಳೆಯೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೆ ಅದ್ಧೂರಿ ಹುಟ್ಟುಹಬ್ಬವನ್ನು ಆಯೋಜಿಸಿ ಅತಿಥಿಗಳಿಗೆ ಆಹ್ವಾನಿಸಿದ್ದಾರೆ.
ಮಹಿಳೆ ಬರೋಬ್ಬರಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಾವೆಲ್ಲ ಹೆಚ್ಚೆಂದರೆ ಒಂದು ಸಾವಿರ ರೂಪಾಯಿಯೊಳಗೆ ಕೇಕ್ ತಂದು ಹುಟ್ಟುಹಬ್ಬ ಆಚರಿಸುತ್ತೇವೆ. ಆದರೆ ಈ ಮಹಿಳೆ ತನ್ನ ಪ್ರೀತಿಯ ನಾಯಿಗೆ ದುಬಾರಿ ಕೇಕ್ ಆರ್ಡರ್ ಮಾಡಿ ಗಮನ ಸೆಳೆದಿದ್ದಾರೆ. ನಾಯಿಯ ಬರ್ತ್‌ಡೇ ಪಾರ್ಟಿಯಲ್ಲಿ ತರಿಸಿದ್ದ ಕೇಕ್‌ನ ಬೆಲೆಯೇ ಬರೋಬ್ಬರಿ 40,000 ರೂಪಾಯಿ ಎನ್ನಲಾಗಿದೆ. ಈ ರೀತಿ ಮಹಿಳೆ ತನ್ನ ನಾಯಿಯ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ನಾಯಿಯ ಹುಟ್ಟುಹಬ್ಬ ಕಣ್ತುಂಬಿಕೊಂಡು ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ.

ಮಹಿಳೆ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಗೆ 300ಕ್ಕೂ ಹೆಚ್ಚು ಅತಿಥಿಗಳನ್ನು ಕೂಡ ಕರೆಸಿದ್ದರು ಎಂದು ತಿಳಿದುಬಂದಿದೆ. ಜಾರ್ಖಂಡ್‌ನ ಸಪ್ನಾ ಎಂಬ ಮಹಿಳೆ ಈ ರೀತಿ ತನ್ನ ನಾಯಿಯ ಮೇಲಿನ ಪ್ರೀತಿಗೆ ಲಕ್ಷ ಲಕ್ಷ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ನಾಯಿ ನಿಜಕ್ಕೂ ಅದೃಷ್ಟ ಮಾಡಿದೆ ಎಂದು ಎಲ್ಲರ ಕಣ್ಣುದೃಷ್ಟಿಗೆ ಬಿದ್ದಿದೆ.
ಸಪ್ನಾ ಸೋನಾ ಎಂಬುವವರು ತನ್ನ ನಾಯಿಗೆ ಪ್ರೀತಿಯಿಂದ ರೋಸ್ ಎಂದು ಹೆಸರಿಟ್ಟಿದ್ದರು. ಈ ನಾಯಿಯನ್ನು ತನ್ನ ಮಗಳಂತೆಯೇ ಅವರು ಕಾಣುತ್ತಿದ್ದರು. ನಾಯಿಯ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಸಪ್ನಾ ಅವರು ಆಯೋಜಿಸಿ, ಇದಕ್ಕೆ ನೂರಾರು ಮಂದಿ ಅತಿಥಿಗಳಿಗೆ ಆಹ್ವಾನವೂ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಮುದ್ದಿನ ರೋಸ್ ಬರುತ್ತಿದ್ದಂತೆ ಡ್ರಮ್ ಹಾಗೂ ತುತ್ತೂರಿಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ನಾಯಿಮರಿಗೆ ಸಾಂಪ್ರದಾಯಿಕ ಆರತಿ ಬೆಳಗಿ, ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ ಎಂದು ವರದಿಯಾಗಿದೆ.












Click it and Unblock the Notifications