ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿದೆ ಮೂವರು ರಾಜಕುಮಾರಿಯರ ಅರಮನೆ!

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರಿಗೆ ಭೇಟಿ ನೀಡಿದವರಿಗೆ ಮೈಸೂರು ಅರಮನೆ ಸೇರಿದಂತೆ ನಗರದಲ್ಲಿರುವ ಹಲವಾರು ಅರಮನೆಗಳು ಅಚ್ಚರಿ ಮೂಡಿಸುತ್ತವೆ. ಬಹುಶಃ ಮೈಸೂರಿನಲ್ಲಿರುವಷ್ಟು ಅರಮನೆಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಮೈಸೂರನ್ನು 'ಅರಮನೆಗಳ ನಗರಿ' ಎಂದು ಕರೆಯಲಾಗುತ್ತದೆ.

ಈ ಅರಮನೆಗಳ ಪೈಕಿ ಮೂರು ಅರಮನೆಗಳ ಬಗ್ಗೆ ಹೇಳಲೇ ಬೇಕಾಗುತ್ತದೆ. ಏಕೆಂದರೆ ಈ ಮೂರು ಅರಮನೆಗಳು ರಾಜಕುಮಾರಿಯರಿಗಾಗಿಯೇ ನಿರ್ಮಾಣಗೊಂಡ ಅರಮನೆಗಳಾಗಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಮ್ಮ ಮೂವರು ಸಹೋದರಿಯರಿಗಾಗಿ ಮೂರು ಅರಮನೆಗಳನ್ನು ಕಟ್ಟಿಸಿದ್ದರು ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್ಲಾಲ್‌ಬಾಗ್ ಮಾದರಿಯಲ್ಲಿ ಲಿಂಗಾಂಬುಧಿ ಕೆರೆ ಆವರಣದಲ್ಲಿ ಬೊಟಾನಿಕಲ್ ಗಾರ್ಡನ್

ಆ ಮೂರು ಅರಮನೆಗಳು ಯಾವುವು ಎಂಬುದನ್ನು ನೋಡಿದ್ದೇ ಆದರೆ ಮೊದಲನೆಯದು ಸಹೋದರಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರಿಗಾಗಿ ಕಟ್ಟಿಸಿದ 'ಜಯಲಕ್ಷ್ಮಿ ವಿಲಾಸ ಅರಮನೆ', ಎರಡನೆಯದು ಕೃಷ್ಣರಾಜಮ್ಮಣ್ಣಿಯವರಿಗಾಗಿ ಕಟ್ಟಿಸಿದ 'ಕಾರಂಜಿ ವಿಲಾಸ ಅರಮನೆ' ಮತ್ತು ತಮ್ಮ ಮೂರನೆಯದು ಚೆಲುವ ರಾಜಮ್ಮಣ್ಣಿಯವರಿಗಾಗಿ 'ಚೆಲುವಾಂಬ ವಿಲಾಸ ಅರಮನೆ'.

 ಜಯಲಕ್ಷ್ಮಿ ವಿಲಾಸ ಅರಮನೆ

ಜಯಲಕ್ಷ್ಮಿ ವಿಲಾಸ ಅರಮನೆ

ಮೊದಲನೇ ಅರಮನೆಯಾದ ಜಯಲಕ್ಷ್ಮಿ ವಿಲಾಸ ಅರಮನೆಯು ಈಗಿನ ಮೈಸೂರು ಮಾನಸ ಗಂಗೋತ್ರಿ ಆವರಣದಲ್ಲಿದ್ದು, ಇದು ಮೈಸೂರು ಅರಸರ ಕೊಡುಗೆ ಎಂದರೆ ತಪ್ಪಾಗಲಾರದು. ಚಾಮರಾಜ ಒಡೆಯರ್‌ ಅವರ ಹಿರಿಯ ಮಗಳು ಹಾಗೂ ಕೃಷ್ಣರಾಜ ಒಡೆಯರ್‌ರವರ ಸಹೋದರಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರಿಗಾಗಿ 1905ರಲ್ಲಿ ಸುಮಾರು ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಲಾಯಿತು. ಹೀಗಾಗಿ ಇದನ್ನು ಮೊದಲನೆ ರಾಜಕುಮಾರಿಯ ಅರಮನೆ ಎಂದೇ ಕರೆಯಲಾಗುತ್ತಿತ್ತು. ಕುಕ್ಕರಹಳ್ಳಿ ಕೆರೆ ಬಳಿ ನಿರ್ಮಾಣವಾಗಿರುವುದರಿಂದ ಕೆಬ್ಬೆಕಟ್ಟೆ ಬಂಗಲೆ ಎಂಬುವುದಾಗಿಯೂ ಕೆಲವರು ಕರೆಯುತ್ತಿದ್ದರು.

ಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ ಭವಿಷ್ಯದ ಅಂಬಾರಿ ಆನೆ ಭೀಮನ ಕಥೆಸಿನಿಮಾ ಸ್ಟೋರಿಗಿಂತ ಕಡಿಮೆಯಿಲ್ಲ ಭವಿಷ್ಯದ ಅಂಬಾರಿ ಆನೆ ಭೀಮನ ಕಥೆ

 ರಾಜಮನೆತನದ ಕಾರ್ಯಕ್ರಮಗಳಿಗೆ ವೇದಿಕೆ

ರಾಜಮನೆತನದ ಕಾರ್ಯಕ್ರಮಗಳಿಗೆ ವೇದಿಕೆ

ಮೈಸೂರು ಸಂಸ್ಥಾನದ ಮುಖ್ಯ ಇಂಜಿನೀಯರ್ ರಾಘವಲು ನಾಯ್ಡು ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಈ ಅರಮನೆಗೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ನಾಲ್ಕು ಭಾಗಗಳಿಂದ ಕೂಡಿರುವ ಈ ಅರಮನೆ ಒಟ್ಟಾಗಿ ಸೇರಿ ಒಂದೇ ಕಟ್ಟಡ ಎಂಬಂತೆ ಭಾಸವಾಗುತ್ತದೆ. ಇಂಡೋಗ್ರೀಕ್ ಮತ್ತು ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗಿರುವ ಅರಮನೆಗೆ ಅರ್ಧ ಚಂದ್ರಾಕೃತಿಯ ಕಮಾನುಗಳು, ಗ್ರೀಕ್, ರೋಮನ್, ಕೆತ್ತನೆ ಕುಸುರಿ ಕೆಲಸಗಳು, ಬೃಹತ್ ಮರದ ಬಾಗಿಲುಗಳು ಮೆರುಗು ನೀಡಿವೆ.

ಈ ಅರಮನೆಯ ನೆಲ ಅಂತಸ್ತಿನಲ್ಲಿ ಪ್ರವೇಶ ದ್ವಾರ, ಸ್ವಾಗತ ಮಂದಿರ, ವಿಶಾಲ ಸಭಾಂಗಣ ಮತ್ತು ಭುವನೇಶ್ವರಿ ತೊಟ್ಟಿಗಳನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಅತಿಥಿಗಳಿಗೆಂದೇ ಅತಿಥಿ ಕೋಣೆಗಳ ಛಾವಣಿಗೆ ಲೋಹದ ಹಾಳೆ ಹಾಗೂ ನೆಲಕ್ಕೆ ಮೊಸಾಯಿಕ್ ಹಾಕಲಾಗಿದೆ. ಇಲ್ಲಿರುವ ಕೃಷ್ಣ ತೊಟ್ಟಿ ಹಾಗೂ ಭುವನೇಶ್ವರಿ ತೊಟ್ಟಿಗಳು ರಾಜಮನೆತನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದವು. ಈ ಅರಮನೆಯ ಒಳಾಂಗಣವನ್ನು ವೈಭವೋಪೇತವಾಗಿ ಅಲಂಕಾರ ಮಾಡಲಾಗಿದೆ.

 ಬಾಗಿಲುಗಳಿಗೆ ದೇವ, ದೇವತೆಯ ಸಿಂಗಾರ

ಬಾಗಿಲುಗಳಿಗೆ ದೇವ, ದೇವತೆಯ ಸಿಂಗಾರ

ಇಲ್ಲಿ ಕಾಣಸಿಗುವ ಅಪೂರ್ವ ಕಲಾಕುಸುರಿ ಕೆಲಸ, ಮರಗಳ ಮೇಲೆ ಕೆತ್ತಲಾದ ಸಾಂಪ್ರದಾಯಿಕ ಕೆತ್ತನೆ ಕಲಾವಿದನ ಕಲಾ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೃಹತ್ ಬಾಗಿಲುಗಳು, ಕಿಟಿಕಿಗಳು, ಕಮಾನುಗಳು, ಗುಮ್ಮಟಗಳು ಇಸ್ಲಾಮಿಕ್ ಶೈಲಿಯಲ್ಲಿದ್ದು ಗಮನಸೆಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಕೂಡಿರುವ ಅರಮನೆಯಲ್ಲಿ ನೃತ್ಯಶಾಲೆ ಮತ್ತು ಕಲ್ಯಾಣ ಮಂಟಪವಿದೆ. ನೃತ್ಯಶಾಲಾ ಮಂಟಪವು ತೇಗದ ಮರದ ಹಲಗೆಯ ನೆಲಹಾಸನ್ನು ಹೊಂದಿದ್ದು, ಹಲಗೆಯನ್ನು ಯಾವುದೇ ಮೊಳೆಯನ್ನು ಬಳಸದೆ ಜೋಡಿಸಲಾಗಿದೆ. ನಲುವತ್ತು ಅಡಿ ಎತ್ತರದ ಛಾವಣಿಯನ್ನು ಬಣ್ಣದ ಗಾಜುಗಳಿಂದ ಅಲಂಕರಿಸಲಾಗಿದೆ. ನೃತ್ಯ ಶಾಲಾ ಮಂಟಪವು 40 ಅಡಿ ಚದರಳತೆಯಲ್ಲಿದೆ.

ಇನ್ನು ಕಲ್ಯಾಣ ಮಂಟಪವು ವಿಶಾಲ ಹಜಾರದಲ್ಲಿ ತೇಗ ಮರದ 20 ಅಡಿ ಎತ್ತರದ ಸುಂದರ ಕೆತ್ತನೆಯ ವೃತ್ತಾಕಾರವಾಗಿ ಸುತ್ತುವರೆದಿರುವ 12 ಕಂಬಗಳಿಂದ ಕೂಡಿದೆ. ಅರಮನೆಯಲ್ಲಿ ಸುಮಾರು 123ಕ್ಕೂ ಹೆಚ್ಚು ಕೋಣೆಗಳಿದ್ದು, 90ಕೋಣೆಗಳನ್ನು ರಾಣಿಯರ ವಾಸಕ್ಕೆ ಮೀಸಲಿರಿಸಿ ಉಳಿದವುಗಳನ್ನು ಸೇವಕರಿಗೆ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿಯ ಪ್ರತಿ ಬಾಗಿಲುಗಳ ಮೇಲೂ ದೇವ ದೇವತೆಯ ಹೂಗಳನ್ನು ರಚಿಸಿ ಸಿಂಗರಿಸಲಾಗಿದೆ.

 ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತನೆ

ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತನೆ

ಈ ಅರಮನೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ನರಸರಾಜ ಒಡೆಯರ್ ಹಾಗೂ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ನಡೆದಿತ್ತು. ಈ ಅರಮನೆ ಹಾಗೂ 300 ಎಕರೆ ಜಾಗವನ್ನು ರಾಷ್ಟ್ರಕವಿ ಕುವೆಂಪುರವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾಗ ವ್ಯವಸ್ಥಿತ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ 1959ರಲ್ಲಿ 10ಲಕ್ಷ ರೂಪಾಯಿಗಳಿಗೆ ಖರೀದಿಸಿದರು ಎನ್ನಲಾಗಿದೆ. ಇದೀಗ ಅರಮನೆಯು ಮೈಸೂರು ವಿವಿಯ ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ದುಃಸ್ಥಿತಿಗೀಡಾಗಿದ್ದ ಈ ಕಟ್ಟಡವನ್ನು ಹಲವು ವರ್ಷಗಳ ಹಿಂದೆ ಇನ್ಪೋಸಿಸ್‌ನ ಅಧ್ಯಕ್ಷೆ ಸುಧಾಮೂರ್ತಿಯವರು ನೀಡಿದ 1.17ಕೋಟಿ ರೂಪಾಯಿಯ ಧನ ಸಹಾಯದಿಂದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರುಜ್ಜೀವನಗೊಳಿಸಲಾಗಿದೆ.

ಒಟ್ಟಾರೆ ಇದು ಮೂರು ಭಾಗಗಳಾಗಿ ವಿಂಗಡಿಸಲ್ಪಟ್ಟು, ಸಾಲು ಅರಮನೆಗಳಂತೆ ಕಾಣುತ್ತದೆ. ಇನ್ನು ಅರಮನೆಯ ಉತ್ತರ ಭಾಗದ ಮುಖಮಂಟಪದ ಮೇಲ್ಭಾಗದಲ್ಲಿದ್ದ ಸುಂದರ ಗಜಲಕ್ಷ್ಮಿ ವಿಗ್ರಹ ಅವತ್ತಿನ ಕಾಲಕ್ಕೆ ಆಕರ್ಷಣೀಯ ಮತ್ತು ಅರಮನೆಗೆ ಸೊಬಗಾಗಿತ್ತು.

 ನಜರ್‌ಬಾದ್‌ನ ಕಾರಂಜಿ ವಿಲಾಸ

ನಜರ್‌ಬಾದ್‌ನ ಕಾರಂಜಿ ವಿಲಾಸ

ಎರಡನೇ ಅರಮನೆ ಕಾರಂಜಿ ವಿಲಾಸವು ನಜರ್‌ಬಾದ್‌ನ ಕಾರಂಜಿಕೆರೆಯ ಸುಂದರ ಪರಿಸರದಲ್ಲಿ ನಿರ್ಮಾಣವಾಗಿದ್ದು, ಈ ಸುಂದರ ಅರಮನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ತಮ್ಮ ಎರಡನೆಯ ಸಹೋದರಿ ಕೃಷ್ಣರಾಜಮ್ಮಣ್ಣಿಯವರಿಗಾಗಿ 1902ರಲ್ಲಿ ನಿರ್ಮಿಸಿದರೆಂದು ಹೇಳಲಾಗಿದೆ. ಆಗಿನ ಕಾಲದಲ್ಲಿ ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ ಸುಮಾರು 4,27,610 ರೂಪಾಯಿಗಳಂತೆ. ಕಾರಂಜಿ ಕೆರೆಯ ಪಕ್ಕದಲ್ಲಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಕಾರಂಜಿವಿಲಾಸ ಅರಮನೆ ಎಂದೇ ಕರೆಯುತ್ತಾರೆ. ಹಿಂದೂ ಗ್ರೀಕ್ ಶೈಲಿಯ ಈ ಅರಮನೆಗೆ ರಾಜಸ್ತಾನಿ ಶೈಲಿಯ ಕಿಟಕಿಗಳನ್ನು ಕಮಲದ ಹೂವಿನ ರಚನೆಯ ಮೇಲೆ ರೂಪಿಸಿರುವುದು ಆಕರ್ಷಣೀಯವಾಗಿದೆ.

 ಚೆಲುವಾಂಬ ವಿಲಾಸ ಅರಮನೆ

ಚೆಲುವಾಂಬ ವಿಲಾಸ ಅರಮನೆ

ಮೂರನೇ ಅರಮನೆಯಾಗಿರುವ ಚೆಲುವಾಂಬ ವಿಲಾಸ ಅರಮನೆಯನ್ನು ನಾಲ್ವಡಿಕೃಷ್ಣರಾಜ ಒಡೆಯರ್‌ ಅವರು ತಮ್ಮ ಮೂರನೇ ಸಹೋದರಿಯಾದ ರಾಜಕುಮಾರಿ ಚೆಲುವ ರಾಜಮ್ಮಣ್ಣಿಯವರಿಗಾಗಿ 1911ರಲ್ಲಿ ಕಟ್ಟಿಸಿದರು. ಈ ಅರಮನೆಯು ನಗರದ ರೈಲ್ವೆ ನಿಲ್ದಾಣದ ಬಳಿ ಪಶ್ಚಿಮಕ್ಕೆ ಎತ್ತರದ ಸ್ಥಳದಲ್ಲಿ ಕಟ್ಟಲಾಗಿದೆ. ಇಂಡೋಸಾರ್ಸನಿಕ್ ಶೈಲಿಯ ಅರಮನೆಯನ್ನು 1950ರ ದಶಕದಲ್ಲಿ ಸರ್ಕಾರಕ್ಕೆ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಯಿತು. ಸದ್ಯಕ್ಕೆ ಇದು ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ದ ಕಛೇರಿಯಾಗಿ ಬಳಕೆಯಾಗುತ್ತಿದೆ.

ಈ ಮೂರು ಅರಮನೆಗಳ ಬಗ್ಗೆ ಹೇಳುತ್ತಾ ಹೋದಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ತಮ್ಮ ಸಹೋದರಿಯರ ಮೇಲಿದ್ದ ಪ್ರೀತಿಯ ಬಗ್ಗೆ ಗೊತ್ತಾಗುತ್ತದೆ. ಇವತ್ತು ಈ ಮೂರು ಅರಮನೆಗಳು ಬೇರೆ, ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೂ ಮೈಸೂರು ಮಹಾರಾಜರ ಇತಿಹಾಸಕ್ಕೆ ಸಾಕ್ಷಿಯಾಗಿ ಉಳಿದಿವೆ.

English summary
Know more about Three palaces in Mysuru, which were built for the three princesses of Mysore wodeyar kingdom,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X