ಕರ್ನಾಟಕದ ಈ ಜಿಲ್ಲೆಯಲ್ಲಿ ಕೂದಲಿಗೆ ಫುಲ್ ಡಿಮ್ಯಾಂಡ್, ಕೆ.ಜಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
ದೇವಸ್ಥಾನಗಳಲ್ಲಿ ಮುಡಿ ಕೊಡುವ ಪದ್ಧತಿ ಮೊದಲಿನಿಂದಲೂ ಇದೆ. ಕೂದಲನ್ನು ದೇವರಿಗೆ, ಹರಕೆ ಬಿಟ್ಟಿದ್ದೇನೆ ಎನ್ನುವವರಿದ್ದಾರೆ. ಆದರೆ, ಈ ಕೂದಲಿನಿಂದಲೇ ಕೋಟಿಗಟ್ಟಲೆ ಹಣ ಮಾಡುವ ಉದ್ಯಮ ನಡೆಯುತ್ತಿದೆ ಎಂದರೆ ನೀವು ಬೆರಗಾಗುತ್ತೀರಿ. ಅದರಲ್ಲೂ ಕರ್ನಾಟಕ ಈ ಒಂದು ಜಿಲ್ಲೆಯಲ್ಲಿ ಕೂದಲಿನ ವ್ಯಾಪಾರ ಸಖತ್ ಸದ್ದು ಮಾಡುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಕೂದಲಿನ ವ್ಯಾಪಾರದಿಂದಲೇ ಕೋಟಿಗಟ್ಟಲೆ ವಹಿವಾಟು ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಲ್ಲಿನ ಜನರ ಪಾಲಿಗೆ ಕೂದಲು ಅಕ್ಷರಶಃ ಕಪ್ಪು ಚಿನ್ನವಾಗಿದೆ. ಇದನ್ನೇ ಕಸುಬು ಮಾಡಿಕೊಂಡಿರುವ ಕೆಲವರು ವಾರ್ಷಿಕವಾಗಿ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ.

ಇಲ್ಲಿ ಬಹುತೇಕ ಗ್ರಾಮೀಣ ಭಾಗವೇ ಆಗಿರುವುದರಿಂದ ಮಹಿಳೆಯರು ಪ್ರತಿದಿನವೂ ತಲೆ ಬಾಚಿಕೊಳ್ಳುವಾಗ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕೂದಲು ಉದುರುವುದು ಸಾಮಾನ್ಯ. ಇದನ್ನು ಕೆಲವರು ಬಿಸಾಡದೆ, ಮನೆಯಲ್ಲೇ ಗಂಟಿನಂತೆ ಸಂಗ್ರಹಿಸುವುದು ವಾಡಿಕೆ. ಅದನ್ನು ಖರೀದಿಸಲೆಂದು ದೂರದೂರುಗಳಿಂದ ವ್ಯಾಪಾರಿಗಳು ಬರುತ್ತಾರೆ. ಇದಕ್ಕೆ ಬದಲಾಗಿ ಅವರಿಗೆ ಸಣ್ಣಪುಟ್ಟ ಏನಾದರೂ ವಸ್ತುಗಳು ಹಾಗೂ ಚೂರುಪಾರು ಕಾಸು ಕೈಗಿಟ್ಟು ಕೂದಲು ತೆಗೆದುಕೊಂಡು ಹೋಗುತ್ತಾರೆ ಎನ್ನಲಾಗಿದೆ.
ಇದೇ ರೀತಿ ಕೆಲವರು ಮನೆಮನೆಗೂ ಭೇಟಿ ನೀಡಿ, ಮಹಿಳೆಯರಿಂದ ಕೂದಲುಗಳನ್ನು ಸಂಗ್ರಹಿಸುತ್ತಿದ್ದಾರೆ. ಅದನ್ನು ನಗರ ಪ್ರದೇಶಗಳಲ್ಲಿರುವ ಸಗಟು ವ್ಯಾಪಾರಿಗಳಿಗೆ ಮಾರಿಕೊಂಡು ಕೈತುಂಬಾ ಕಾಂಚಾಣವನ್ನೂ ಕಾಣುತ್ತಿದ್ದಾರಂತೆ. ಬಳಿಕ ವ್ಯಾಪಾರಿಗಳು ಇದನ್ನು ಭಾರಿ ಪ್ರಮಾಣದಲ್ಲಿ ಗುಡ್ಡೆ ಹಾಕಿಕೊಂಡು ದೊಡ್ಡ ವಾಹನಗಳಲ್ಲಿ ದೂರದ ಚೆನ್ನೈವರೆಗೆ ಪೂರೈಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕೆಲಸದಿಂದ ವ್ಯಾಪಾರಿಗಳು ವಾರ್ಷಿಕವಾಗಿ ಕೋಟಿಗಟ್ಟಲೆ ಹಣ ದುಡಿಯುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಈ ವಿಚಾರ ಅರಿತ ಹಲವು ಕೂದಲು ಸಂಗ್ರಹಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರಂತೆ. ನಿರ್ಗತಿಕರು, ಚಿಂದಿ ಆಯುವವರು, ಭಿಕ್ಷೆ ಬೇಡುವವರೂ ಕೂಡ ತಮ್ಮ ಕಸುಬಿನ ಜೊತೆ ಕೂದಲು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕೆಲ ಚಿಗುರು ಮೀಸೆ ಯುವಕರೂ ಕೂಡ ಕೂದಲು ವ್ಯಾಪಾರದಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲೇ ಕೂದಲು ತೂಕ ಮಾಡಿ, ಅದಕ್ಕೆ ಹಣ ಕೊಟ್ಟು ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹಾವೇರಿಯಲ್ಲೇ ಪ್ರತಿದಿನ ಏನಿಲ್ಲವೆಂದರೂ 50 ಕೆ.ಜಿಯಷ್ಟು ಕೂದಲು ಸಂಗ್ರಹವಾಗುತ್ತಿದೆ. ಹಳ್ಳಿಗಳಿಂದ ತಂದ ಕೂದಲನ್ನು ಹಾವೇರಿಯ ಹೋಲ್‌ಸೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ. ಕೂದಲು ತಂದುಕೊಟ್ಟರೆ 6,000ರಿಂದ 6,500 ರೂಪಾಯಿ ನೀಡುತ್ತಿದ್ದಾರೆ ಎನ್ನಲಾಗಿದೆ. ವ್ಯಾಪಾರಿಗಳು ಈ ಕೂದಲನ್ನು ಚೆನ್ನೈಗೆ ಕಳುಹಿಸಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 50 ಕೆ.ಜಿ.ಗೆ ಏನಿಲ್ಲವೆಂದರೂ 3.25 ಲಕ್ಷ ರೂಪಾಯಿ ಹಣ ಸಿಗುತ್ತದೆ. ಇದು ವಾರ್ಷಿಕವಾಗಿ ಕೋಟಿಗಟ್ಟಲೆ ವಹಿವಾಟು ನಡೆಸುವವರೂ ಇದ್ದಾರೆ ಎನ್ನಲಾಗಿದೆ.
ಇದರಲ್ಲಿ ಲಾಭ ಸಿಗುವುದನ್ನು ಮನಗಂಡು ವ್ಯಾಪಾರಿಗಳು ಕೂಡ ಹೆಚ್ಚಾಗಿದ್ದಾರಂತೆ. ಹಾವೇರಿಯಲ್ಲಿ ಈಗ 10 ಮಂದಿಗೂ ಹೆಚ್ಚು ಸಗಟು ಕೂದಲು ವ್ಯಾಪಾರಿಗಳಿದ್ದಾರೆ. ಮನೆಗಳಿಂದ ಸಂಗ್ರಹವಾಗುವ ಕೂದಲ ಬಂಡಲ್‌ಗಳನ್ನು ಚೆನ್ನೈಗೆ ಕಳಿಸಿದರೆ, ಅದನ್ನು ಸಂಸ್ಕರಿಸಿ ಬೇರೆ ಉತ್ಪನ್ನಗಳಾಗಿ ಸಿದ್ಧಪಡಿಸಿ ಮಾರುಕಟ್ಟೆಗಳಿಗೆ ಪರಿಚಯಿಸುತ್ತಿದ್ದಾರೆ ಎನ್ನಲಾಗಿದೆ. ಹಾವೇರಿ ಮಾತ್ರವಲ್ಲದೆ ಉಳಿದ ಜಿಲ್ಲೆಗಳಲ್ಲೂ ಈ ಕೂದಲು ಸಂಗ್ರಹಿಸುವುದು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications