ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ತಲಕಾಡು ಮರಳಾಗಿದ್ದು ಹೇಗೆ? ಶಾಪದ ಶಕ್ತಿಯೇ ಕಾರಣವಾ?

|
Google Oneindia Kannada News

ಒಂದು ಕಾಲದಲ್ಲಿ ಗಂಗರು, ಚೋಳರು ರಾಜ್ಯಭಾರ ಮಾಡಿದ್ದ ತಲಕಾಡು ತನ್ನದೇ ಆದ ಇತಿಹಾಸವನ್ನು ಹೊಂದಿ ವೈಭವದಿಂದ ಮೆರೆದ ನಾಡಾಗಿತ್ತು. ಇಂತಹ ನಾಡು ಮರಳು ರಾಶಿಯಿಂದ ಕೂಡಲು ಕಾರಣವೇನು ಎಂಬುದರ ಹಿಂದೆ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಇದೇ ಡಿ.10ರಿಂದ ತಲಕಾಡು ಪಂಚಲಿಂಗ ದರ್ಶನ ಆರಂಭವಾಗಲಿದ್ದು, ಈ ನೆಪದಲ್ಲಿ ತಲಕಾಡಿನ ಇತಿಹಾಸದ ಕುರಿತೂ ಮೆಲಕು ಹಾಕೋಣ...

ತಲಕಾಡನ್ನು ಗಜಾರಣ್ಯ ಕ್ಷೇತ್ರ, ಆನೆಕಾಡು ಎಂದು ಕೂಡ ಕರೆಯಲಾಗುತ್ತಿತ್ತು. ಇಲ್ಲಿರುವ ವೈದ್ಯೇಶ್ವರ ಲಿಂಗವು ಪ್ರಾಚೀನ ಕಾಲದ್ದಾಗಿದ್ದು, ಕಾಡಿನಲ್ಲಿದ್ದ ಈ ಲಿಂಗಕ್ಕೆ ಆಕಸ್ಮಿಕವಾಗಿ ಕೊಡಲಿ ತಾಗಿದಾಗ ರಕ್ತ ಚಿಮ್ಮಿತೆಂದೂ, ಅದನ್ನು ನಿವಾರಿಸಲು ಸ್ವತಃ ವೈದ್ಯ ಮಾಡಿದ್ದರಿಂದ ವೈದ್ಯೇಶ್ವರ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಇಲ್ಲಿ ವೈದ್ಯೇಶ್ವರ ಲಿಂಗವಲ್ಲದೆ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ಎಂಬ ಲಿಂಗಗಳಿದ್ದು, ಇಲ್ಲಿರುವ ಮರಳೇಶ್ವರ, ಪಾತಾಳೇಶ್ವರ ಮತ್ತು ಕೀರ್ತಿ ನಾರಾಯಣ ದೇಗುಲಗಳು ಹಿಂದೆ ಮರಳಿನಿಂದ ಮುಚ್ಚಿಹೋಗಿದ್ದವು. ಮುಂದೆ ಓದಿ...

 ಮರಳು ತೆಗೆಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್

ಮರಳು ತೆಗೆಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್

ಈ ದೇಗುಲಗಳ ಮೇಲೆ ಹರಡಿದ್ದ ಮರಳನ್ನು 1924ರಲ್ಲಿ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತೆಗೆಸಿ, ಪಂಚಲಿಂಗ ದರ್ಶನವಲ್ಲದೆ ಇತರೆ ದಿನಗಳಲ್ಲಿಯೂ ಭಕ್ತರು ದರ್ಶನ ಮಾಡಲು ಅನುಕೂಲ ಮಾಡಿಕೊಟ್ಟರು ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ತಲಕಾಡು ಹೇಗೆ ಮರಳಾಯಿತು ಎಂಬುದನ್ನು ನೋಡುವುದಾದರೆ ಇದರ ಹಿಂದೆ ಮೈಸೂರು ಪ್ರಾಂತ್ಯದಲ್ಲೊಂದು ದಂತಕಥೆಯಿದೆ. ಇದಕ್ಕೆ ಖಚಿತ ಪುರಾವೆ ಇಲ್ಲವಾದರೂ ಒಂದಷ್ಟು ಘಟನೆಗಳ ಸಾಮ್ಯತೆ ಇರುವುದನ್ನು ತಳ್ಳಿ ಹಾಕಲಾಗದು.

ತಲಕಾಡು ಪಂಚಲಿಂಗ ದರ್ಶನ; ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವಂತೆ ಸಲಹೆತಲಕಾಡು ಪಂಚಲಿಂಗ ದರ್ಶನ; ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವಂತೆ ಸಲಹೆ

 ತಲಕಾಡಿನಲ್ಲಿ ಮೃತಪಟ್ಟ ಶ್ರೀರಂಗರಾಯ

ತಲಕಾಡಿನಲ್ಲಿ ಮೃತಪಟ್ಟ ಶ್ರೀರಂಗರಾಯ

ಅದು ವಿಜಯನಗರ ಅರಸರು ಆಳುತ್ತಿದ್ದ ಕಾಲ. ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಆಳ್ವಿಕೆ ನಡೆಸಲಾಗುತ್ತಿತ್ತು. ಈ ವೇಳೆ ಹಲವು ಸಾಮಂತರಾಜರು ವಿಜಯನಗರ ರಾಜರ ಪ್ರತಿನಿಧಿಯಾಗಿ ಆಳ್ವಿಕೆ ನಡೆಸುತ್ತಿದ್ದರು. ಅದರಂತೆ ಶ್ರೀರಂಗಪಟ್ಟಣದಲ್ಲಿ ಶ್ರೀರಂಗರಾಯ ಎಂಬಾತ ಆಳ್ವಿಕೆ ನಡೆಸುತ್ತಿದ್ದನು. ಇತ್ತ ಮೈಸೂರಿನಲ್ಲಿ ರಾಜ ಒಡೆಯರ್ ಆಳ್ವಿಕೆ ನಡೆಸುತ್ತಿದ್ದರು. ರಾಜ ಒಡೆಯರಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಬಯಕೆಯಿತ್ತು. ಇದೇ ಸಮಯದಲ್ಲಿ ಶ್ರೀರಂಗರಾಯನಿಗೆ ಬೆನ್ನುಪಣಿ ರೋಗ ಬಂದಿತ್ತು. ಇದು ವಾಸಿಯಾಗಲು ತಲಕಾಡಿಗೆ ತೆರಳಿ ವೈದ್ಯನಾಥೇಶ್ವರನಿಗೆ ಪೂಜೆ ಸಲ್ಲಿಸಲು ರಾಜವೈದ್ಯರು ಸಲಹೆ ನೀಡಿದರು. ಅದರಂತೆ ತನ್ನ ಪತ್ನಿ ಅಲಮೇಲಮ್ಮನ ಸಹಿತ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಾರೆ. ಆದರೆ ಅಷ್ಟರಲ್ಲೇ ಶ್ರೀರಂಗರಾಯನನ್ನು ಬಾಧಿಸುತ್ತಿದ್ದ ರೋಗ ಉಲ್ಬಣಗೊಳ್ಳುತ್ತದೆ. ಹಲವು ರೀತಿಯ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ರೋಗ ಇನ್ನಷ್ಟು ಉಲ್ಬಣವಾಗಿ ಶ್ರೀರಂಗರಾಯ ತಲಕಾಡಿನಲ್ಲೇ ಮರಣಹೊಂದುತ್ತಾರೆ.

 ರಾಜ ಒಡೆಯರ್ ವಶಕ್ಕೆ ಶ್ರೀರಂಗಪಟ್ಟಣ

ರಾಜ ಒಡೆಯರ್ ವಶಕ್ಕೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ಶ್ರೀರಂಗರಾಯ ಕಾಯಿಲೆಯಿಂದ ಮರಣ ಹೊಂದಿರುವ ವಿಚಾರ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್ ಗೆ ತಿಳಿಯುತ್ತದೆ. ಇದೇ ಸೂಕ್ತ ಸಮಯ ಎಂದರಿತ ಅವರು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಈ ಸಂದರ್ಭ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ಶ್ರೀರಂಗಪಟ್ಟಣವನ್ನು ಬಿಟ್ಟು ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ಮುತ್ತಿನ ಮೂಗುತಿ ಸೇರಿದಂತೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಗೆ ಧರಿಸುತ್ತಿದ್ದ ಬಹಳಷ್ಟು ಒಡವೆಗಳು ಅವಳ ವಶದಲ್ಲಿರುತ್ತದೆ.

ತಲಕಾಡು ಪಂಚಲಿಂಗ ದರ್ಶನದಲ್ಲಿ ಮುಡುಕುತೊರೆಯ ಮಹತ್ವತಲಕಾಡು ಪಂಚಲಿಂಗ ದರ್ಶನದಲ್ಲಿ ಮುಡುಕುತೊರೆಯ ಮಹತ್ವ

 ಆಭರಣ ನೀಡಲು ಅಲಮೇಲಮ್ಮನಿಗೆ ರಾಜಾಜ್ಞೆ

ಆಭರಣ ನೀಡಲು ಅಲಮೇಲಮ್ಮನಿಗೆ ರಾಜಾಜ್ಞೆ

ಈ ನಡುವೆ ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ಅತಿಕ್ರಮಿಸಿ ಅದನ್ನು ರಾಜಧಾನಿಯಾಗಿಸಿ ಅಲ್ಲಿನ ಶ್ರೀ ರಂಗನಾಥಸ್ವಾಮಿ ದೇಗುಲದ ಮುಂಭಾಗದಲ್ಲಿದ್ದ ಅರಮನೆಯಲ್ಲಿ ರಾಜ್ಯಭಾರ ನಡೆಸುತ್ತಿದ್ದರಲ್ಲದೆ, ಅರಮನೆಯ ಸಂಪ್ರದಾಯದಂತೆ ನವರಾತ್ರಿ ಉತ್ಸವವನ್ನು ಆಚರಣೆ ಮಾಡುತ್ತಾರೆ. ಈ ವೇಳೆ ಶ್ರೀ ರಂಗನಾಥ ಸ್ವಾಮಿಗೆ ಅಲಂಕಾರ ಮಾಡಬೇಕಾದ ಒಡವೆಗಳು ತಲಕಾಡಿನಲ್ಲಿದ್ದ ಶ್ರೀರಂಗರಾಯರ ಪತ್ನಿ ಅಲಮೇಲಮ್ಮನ ಬಳಿಯಿರುವುದು ಗೊತ್ತಾಗುತ್ತದೆ. ಹೀಗಾಗಿ ಅದನ್ನು ತಂದು ಒಪ್ಪಿಸುವಂತೆ ರಾಜಾಜ್ಞೆ ಮಾಡುತ್ತಾರೆ. ಆದರೆ ಅವುಗಳನ್ನು ರಾಜ ಒಡೆಯರಿಗೆ ಒಪ್ಪಿಸಲು ಅಲಮೇಲಮ್ಮ ನಿರಾಕರಿಸುತ್ತಾಳೆ. ಈ ವೇಳೆ ಆ ಒಡವೆಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ರಾಜ ಒಡೆಯರು ಮುಂದಾಗುತ್ತಾರೆ.

 ಶಾಪ ನೀಡಿ ನದಿಗೆ ಹಾರಿದ ಅಲಮೇಲಮ್ಮ

ಶಾಪ ನೀಡಿ ನದಿಗೆ ಹಾರಿದ ಅಲಮೇಲಮ್ಮ

ಇದರಿಂದ ಭಯಗೊಂಡ ಅಲಮೇಲಮ್ಮ ರಾಜರ ಮೇಲೆ ಆಕ್ರೋಶಗೊಂಡು ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ. ಅಂದಿನಿಂದ ತಲಕಾಡು ಮರಳಾಯಿತು ಎಂದು ಹೇಳಲಾಗುತ್ತಿದೆ. ಈ ಕಥೆಯ ಸತ್ಯಾಸತ್ಯತೆ ಏನೇ ಇರಲಿ ಆದರೆ ತಲಕಾಡು ಮರಳಾಗಿಯೂ, ಮಾಲಂಗಿ ಮಡುವಾಗಿಯೂ, ಮೈಸೂರು ರಾಜರಿಗೆ ಮಕ್ಕಳಾಗದೆ, ದತ್ತುಪುತ್ರರಿಗೆ ಮಾತ್ರ ಮಕ್ಕಳಾಗುತ್ತಿರುವುದು ನಡೆದುಕೊಂಡು ಬಂದಿದೆ.

ಹಿಂದೆ ತಲಕಾಡಿನಲ್ಲಿರುವ ದೇಗುಲಗಳು ಮರಳಿನಿಂದ ತುಂಬಿ ಹೋಗುತ್ತಿದ್ದವು. ಪಂಚಲಿಂಗದರ್ಶನದ ವೇಳೆ ಮರಳನ್ನು ತೆಗೆದು ಭಕ್ತರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ನಂತರ ಮತ್ತೆ ಮರಳಿನಿಂದ ದೇಗುಲಗಳು ಮುಚ್ಚಿ ಹೋಗುತ್ತಿದ್ದವು. ಆದರೆ ಬದಲಾದ ಕಾಲಮಾನದಲ್ಲಿ ಮೊದಲಿನಂತೆ ಮರಳು ರಾಶಿಗಳು ಇಲ್ಲವಾದರೂ ಸುತ್ತಮುತ್ತಲು ಮರಳಂತು ಇದ್ದೇ ಇದೆ.

English summary
Talakadu of mysuru district has its own rich history. Here is its history and story about how it covered with sand ahead of talakadu panchalinga darshana from dec 10
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X