Maha Kumbh Mela 2025: ಮಹಾಕುಂಭ ಮೇಳಕ್ಕಾಗಿ ನಾಲ್ಕು ಕ್ಯೂಆರ್ ಕೋಡ್ ಬಿಡುಗಡೆ, ಏನೆಲ್ಲ ಮಾಹಿತಿ ಲಭ್ಯ?
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಯಾತ್ರಾರ್ಥಿಗಳಿಗೆ ಈ ಬಾರಿ ಯಾವುದೇ ತೊಂದರೆಗಳಾಗದಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಕೋಟ್ಯಂತರ ಭಕ್ತಾದಿಗಳು ಈ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗುವ ಕಾರಣ ಯಾವುದೇ ತೊಡಕಾಗದಂತೆ ಅಲ್ಲಿನ ಸರ್ಕಾರವು ವಿಶೇಷ ಕಾಳಜಿ ತೆಗೆದುಕೊಂಡಿದೆ. ಸದ್ಯ ಭಕ್ತಾದಿಗಳ ಅನುಕೂಲಕ್ಕಾಗಿ ಸ್ಕ್ಯಾನರ್‌ಗಳನ್ನು ರಿಲೀಸ್ ಮಾಡಿದ್ದು, ಇದನ್ನು ಸ್ಕ್ಯಾನ್ ಮಾಡಿದರೆ ಇಡೀ ಮಹಾಕುಂಭ ಮೇಳದ ಪ್ರಕ್ರಿಯೆ ಸರಳವಾಗಲಿದೆ.
ನಾಲ್ಕು ಬಣ್ಣಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಇವುಗಳ ನೆರವಿನಿಂದ ನೀವು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳವನ್ನು ಕಣ್ತುಂಬಿಕೊಂಡು ಬರಬಹುದು. ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವವರು ತಮ್ಮ ಫೋನ್‌ಗಳಲ್ಲಿ ಪ್ರಮುಖ ಮಾಹಿತಿ ಮತ್ತು ಸೇವೆಗಳನ್ನು ತಕ್ಷಣವೇ ತಿಳಿಯಲು 4 ಬಣ್ಣ-ಕೋಡೆಡ್ QR ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ.

ನಾಲ್ಕು ಬಣ್ಣಗಳಲ್ಲಿ ಹಸಿರು ಬಣ್ಣದ ಕ್ಯೂಆರ್ ಕೋಡ್ ಮಹಾಕುಂಭ ಮೇಳದ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲಿದೆ. ಕೆಂಪು ಬಣ್ಣದ ಕ್ಯೂಆರ್ ಕೋಡ್ ತುರ್ತು ಸೇವೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ನೀಡಲಿದೆ. ನೀಲಿ ಬಣ್ಣದ ಸ್ಕ್ಯಾನರ್ ಮಹಾಕುಂಭಮೇಳಕ್ಕೆ ಬರುವವರಿಗೆ ತಂಗಲು ಹೋಟೆಲ್‌ಗಳು ಹಾಗೂ ಊಟದ ವ್ಯವಸ್ಥೆ ಬಗ್ಗೆ ಮಾಹಿತಿ ಒದಗಿಸಲಿದೆ. ಕೇಸರಿ ಬಣ್ಣದ ಕ್ಯೂಆರ್ ಕೋಡ್ ಉತ್ತರಪ್ರದೇಶದ ಸಾಧನೆಗಳನ್ನು ನಿಮ್ಮ ಮುಂದಿಡಲಿದೆ.
ಮಹಾಕುಂಭ ಮೇಳಕ್ಕೆ ತೆರಳುವವರು ತಮ್ಮ ಮೊಬೈಲ್ ಮೂಲಕ ಈ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಇದೇ ಕಾರಣಕ್ಕಾಗಿ ಸ್ಕ್ಯಾನರ್‌ಗಳನ್ನು ಅಲ್ಲಿನ ಸರ್ಕಾರ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಅಲ್ಲಿನ ಸಿಬ್ಬಂದಿ ಧರಿಸುವ ಜಾಕೆಟ್ ಮೇಲೆಯೂ ಕ್ಯೂಆರ್ ಕೋಡ್‌ಗಳನ್ನು ಪ್ರಿಂಟ್ ಮಾಡಲಾಗಿದೆ.
ಭದ್ರತೆಗಾಗಿ ಎಲ್ಲೆಡೆಯೂ ಸಿಬ್ಬಂದಿ ಇರುವುದರಿಂದ ಸ್ಕ್ಯಾನರ್ ಭಕ್ತರ ಮುಂದೆಯೇ ಇರುತ್ತದೆ. ಒಂದು ವೇಳೆ ತಮಗೆ ಏನಾದರೂ ತುರ್ತು ಸಹಾಯ ಬೇಕಾದರೂ ಸಿಬ್ಬಂದಿಯ ಜಾಕೆಟ್ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಮಹಾಕುಂಭಮೇಳದಲ್ಲಿ ಭಾಗಿಯಾಗುವವರಿಗೆ ತಡೆರಹಿತ ಸೇವೆಗಳನ್ನು ಒದಗಿಸಲು ಭಾರತೀಯ ರೈಲ್ವೆ ಕೂಡ ಟೋಲ್-ಫ್ರೀ ಸಹಾಯವಾಣಿ, ಮೀಸಲು ವೆಬ್‌ಸೈಟ್ ಮತ್ತು ಮಹಾಕುಂಭ ಮೇಳ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದಕ್ಕಾಗಿ ರೈಲ್ವೆ ಸಿಬ್ಬಂದಿಗೆ ಹಸಿರು ಜಾಕೆಟ್ ನೀಡಲಾಗಿದ್ದು, ಅದರ ಮೇಲೆ ಕ್ಯೂಆರ್ ಕೋಡ್ ಕೂಡ ಇರಲಿದೆ. ಯಾತ್ರಿಕರು ಕ್ಯೂಆರ್ ಕೋಡ್ ಹೊಂದಿರುವ ಹಸಿರು ಜಾಕೆಟ್ ಸ್ಕ್ಯಾನ್ ಮಾಡಿ ಅವರ ಟಿಕೆಟ್‌ಗಳನ್ನು ಸುಲಭವಾಗಿ ಕಾಯ್ದಿರಿಸಬೇಕು. ಈ ಸೌಲಭ್ಯಗಳು ಮಹಾ ಕುಂಭಮೇಳ ನಡೆಯು ಜನವರಿ 13ರಿಂದ ಫೆಬ್ರವರಿ 26ರವರೆಗೆ ಲಭ್ಯವಿರಲಿದೆ.
ಸಿಬ್ಬಂದಿಯ ಜಾಕೆಟ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ. ಬಳಿಕ ಗೂಗಲ್ ಪ್ಲೇಸ್ಟೋರ್ ಮೂಲಕ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (UTS) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೀಗಾಗಿ ಈ ಬಾರಿಯ ಮಹಾಕುಂಭಮೇಳಕ್ಕೆ ಡಿಜಿಟಲ್ ತಂತ್ರಜ್ಞಾನವನ್ನು ಕೂಡ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.












Click it and Unblock the Notifications