Metro: ಮೆಟ್ರೋ ರೈಲನ್ನೇ ಬಾರ್ ಮಾಡಿಕೊಂಡ ಪ್ರಯಾಣಿಕ: ಸೀಟಲ್ಲೇ ಪೆಗ್, ತಿನ್ನೋಕೆ ಎಗ್
ಪ್ರಯಾಣಿಕರಿಗೆ ನೆಮ್ಮದಿಯ ಪ್ರಯಾಣ ಕಲ್ಪಿಸಲು ದೇಶದ ಪ್ರಮುಖ ನಗರಗಳಲ್ಲಿ ಮೆಟ್ರೋ ಸೇವೆ ಕಲ್ಪಿಸಲಾಗಿದೆ. ಇದು ಲಕ್ಷಾಂತರ ಜನರಿಗೆ ದಿನನಿತ್ಯದ ಸಾರಿಗೆಯೂ ಹೌದು. ಬೆಂಗಳೂರಿನಲ್ಲಿ ಇತ್ತೀಚೆಗೆ ಟಿಕೆಟ್ ದರ ಏರಿಕೆಯಾದ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಮೊದಲಿನಂತೆ ಮೆಟ್ರೋದಲ್ಲಿ ರಶ್ ಇಲ್ಲವೇ ಇಲ್ಲ. ಇನ್ನು ಮೆಟ್ರೋ ರೈಲುಗಳಲ್ಲಿ ಯಾವುದೇ ರೀತಿಯ ತಿಂಡಿ-ಆಹಾರ ಸೇವನೆಗೆ ನಿರ್ಬಂಧವಿದೆ. ಹೀಗಿರುವಾಗ ಪ್ರಯಾಣಿಕನೊಬ್ಬ ಮೆಟ್ರೋ ಬೋಗಿಯನ್ನೇ ಬಾರ್ ಮಾಡಿಕೊಂಡಿರುವ ಸಂಗತಿ ಬಯಲಿಗೆ ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರಯಾಣಿಕನೊಬ್ಬ ಮೆಟ್ರೋ ರೈಲನ್ನೇ ಬಾರ್ ಮಾಡಿಕೊಂಡಿದ್ದಾನೆ ಎನ್ನಲಾದ ವಿಡಿಯೋ ಹರಿದಾಡುತ್ತಿದೆ. ಈತ ಯಾವುದೋ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗ ಎಂದು ವಿಡಿಯೋದಲ್ಲಿ ತಿಳಿದುಬಂದಿದೆ. ಮೆಟ್ರೋ ಒಳಗೆ ಪ್ರವೇಶಿಸಿರುವ ಈತ ಬಾರ್‌ನಲ್ಲಿರುವಂತಹ ಗ್ಲಾಸ್ ಅನ್ನೇ ಜೊತೆಗೆ ಒಳಗೆ ತಂದಿದ್ದಾನೆ. ಅದರಲ್ಲಿ ಎಣ್ಣೆ ಹಾಕಿಕೊಂಡು, ನನ್ನ ಯಾರ್ ಗುರೂ ಕೇಳೋದು ಅಂತಾ ಸ್ಟೈಲಾಗಿ ಒಂದು ಪೆಗ್ ಎಣ್ಣೆ ಕುಡಿದೇಬಿಟ್ಟಿದ್ದಾನೆ.

ಬರೀ ಎಣ್ಣೆ ಅಲ್ಲ, ಜೊತೆಗೆ ತಿನ್ನಲು ಸೈಡ್ಸ್ ಕೂಡ ಮೆಟ್ರೋಗೆ ತಂದಿದ್ದಾನೆ ಭೂಪ. ಈತ ಎಣ್ಣೆಯೊಂದಿಗೆ ಬೇಯಿಸಿದ ಮೊಟ್ಟೆಯೊಂದನ್ನು ಕೂಡ ಮೆಟ್ರೋಗೆ ಒಳಗೆ ತಂದಿದ್ದಲ್ಲದೆ, ಅದನ್ನು ಅಲ್ಲಿಯೇ ಸಿಪ್ಪೆ ಬಿಡಿಸಿ ಎಣ್ಣೆ ಜೊತೆ ತಿಂದು ತೇಗಿದ್ದಾನೆ. ಮೆಟ್ರೋ ಒಳಗೆ ಚಿಲ್ ಆದ ಎಸಿ ಜೊತೆಗೆ ನೆಮ್ಮದಿಯಾಗಿ ಪೆಗ್ಗು ಹೊಡೆದಿದ್ದಾನೆ. ಈ ವಿಡಿಯೋ ಅನ್ನು ಅಲ್ಲಿದ್ದ ಪ್ರಯಾಣಿಕರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಳಿಕ ಈ ಘಟನೆ ನಡೆದಿರುವುದು ದೆಹಲಿಯ ಮೆಟ್ರೋದಲ್ಲಿ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಮೆಟ್ರೋದಲ್ಲಿ ಮದ್ಯ ಸೇವಿಸಲು ಯಾವಾಗಿಂದ ಅವಕಾಶ ಕೊಟ್ಟಿದ್ದಾರೆ? ನಿಜವಾಗಿಯೂ ಇದಕ್ಕೆ ಅನುಮತಿ ಇದೆಯೇ ಎಂದು ಪ್ರಶ್ನೆ ಕೇಳಿದ್ದಾರೆ. ಬಾರ್‌ನ ಕಿರಿಕಿರಿಗಿಂತ ಸೀದಾ ಎಣ್ಣೆ ತಗೊಂಡು ಬಂದು ಮೆಟ್ರೋದಲ್ಲಿ ಕುಡ್ಕೊಂಡು ಸಿಟಿ ವ್ಯೂ ನೋಡೋದು ಏನ್ ಮಜಾ ಅಲ್ವಾ? ಎಂದು ಕಾಮೆಂಟ್ ಮಾಡಿದ್ದಾರೆ.

ಆದರೆ, ಆಘಾತಕಾರಿ ವಿಚಾರ ಅಂದ್ರೆ ಮೆಟ್ರೋ ರೈಲುಗಳಲ್ಲಿ ಯಾವುದೇ ರೀತಿಯ ಆಹಾರ ಸೇವನೆಗೆ ಅವಕಾಶವಿಲ್ಲ, ಮದ್ಯ ಸೇವನೆಗೂ ಚಾನ್ಸೇ ಇಲ್ಲ. ಹೀಗಿರುವಾಗ ಪ್ರಯಾಣಿಕ ಹೇಗೆ? ಇಷ್ಟು ರಾಜಾರೋಷವಾಗಿ ಮದ್ಯ, ಮೊಟ್ಟೆ ತಂದು ಬೋಗಿಯೊಳಗೆ ಸೇವನೆ ಮಾಡಿದ್ದಾನೆ? ಎಂದು ಪ್ರಶ್ನೆ ಎತ್ತಿದ್ದಾರೆ. ಒಂದು ವೇಳೆ ಈತ ಮದ್ಯ ತಂದಿದ್ದರೆ ಅದು ಚೆಕ್ ಪಾಯಿಂಟ್‌ನಲ್ಲೇ ಸಿಕ್ಕಿಬಿಡುತ್ತಿತ್ತು. ಇದನ್ನು ಹೇಗೆ ಮೆಟ್ರೋ ಒಳಗೆ ಬಿಟ್ಟರು ಎಂದು ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಈ ವಿಡಿಯೋ ಟ್ಯಾಗ್ ಮಾಡಿ ಕೇಳಿದ್ದಾರೆ.
ಆದರೆ, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಹೋಗುವುದಕ್ಕೆ ಮಾತ್ರವೇ ಅವಕಾಶವಿದೆ. ಒಬ್ಬ ಗ್ರಾಹಕ ಸೀಲ್ ಆಗಿರುವ 2 ಬಾಟಲಿಗಳನ್ನು ಮಾತ್ರ ಮೆಟ್ರೋದಲ್ಲಿ ಕೊಂಡೊಯ್ಯಬಹುದು. ಆದರೆ, ಅದನ್ನು ಅಲ್ಲಿ ಸೇವನೆ ಮಾಡುವಂತಿಲ್ಲ ಎಂದು ವರದಿಯಾಗಿದೆ.












Click it and Unblock the Notifications