ಸೌತ್ ಅಫ್ರಿಕಾದಲ್ಲಿ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ಮುಷ್ಕರ; ಕಾರಣ ಏನು?

ಹರಿಣಗಳ ನಾಡು ದಕ್ಷಿಣ ಆಫ್ರಿಕಾದಲ್ಲಿ ಸಾವಿರಾರು ಜನರು ವಿವಿಧೆಡೆ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಟು ಕಾರ್ಮಿಕರ ಒಕ್ಕೂಟಗಳು ಕರೆ ನೀಡಿರುವ ಮುಷ್ಕರದಲ್ಲಿ ಇನ್ನೂ ಹಲವಾರು ಸಂಘಟನೆಗಳು ಕೈಜೋಡಿಸಿವೆ.

ಸೌತ್ ಆಫ್ರಿಕಾದಲ್ಲಿ ಈಗ ಆಡಳಿತ ನಡೆಸುತ್ತಿರುವ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದೊಂದಿಗೆ ಬಹಳ ಕಾಲದಿಂದ ಮೈತ್ರಿಯಲ್ಲಿರುವ ಕಾರ್ಮಿಕ ಒಕ್ಕೂಟಗಳ ಸಂಘಟನೆಯು ಈ ಮುಷ್ಕರದ ಹಿಂದಿರುವುದು ಕುತೂಹಲ. ಸೌತ್ ಆಫ್ರಿಕನ್ ವ್ಯಾಪಾರ ಒಕ್ಕೂಟಗಳ ಸಂಘಟನೆ (COSATU- ಸಿಒಎಸ್‌ಎಟಿಯು) ಅಲ್ಲಿನ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು, ಆಡಳಿತ ಪಕ್ಷದ ಮಿತ್ರನಾಗಿದ್ದೂ ಪ್ರತಿಭಟನೆಯ ಮುಂದಾಳತ್ವ ವಹಿಸಿದೆ. ಹೀಗಾಗಿ ಪರಿಸ್ಥಿತಿ ಸಾಮಾನ್ಯವಲ್ಲ.

ಎಂಟು ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಪ್ರಿಟೋರಿಯಾ, ಕೇಪ್‌ಟೌನ್ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಕೇಪ್‌ಟೌನ್ ನಗರದಲ್ಲಿರುವ ಅಲ್ಲಿನ ದೇಶದ ಸಂಸತ್ ಕಟ್ಟಡದತ್ತ ಪ್ರತಿಭಟನಾಕಾರರು ಲಗ್ಗೆ ಇಡುತ್ತಿದ್ದಾರೆ.

ಇನ್ನೊಂದೆಡೆ ಅಲ್ಲಿ ಸರಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ವೇಳೆ, ಈ ಪ್ರತಿಭಟನೆಗೆ ಏನು ಕಾರಣ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಪ್ರತಿಭಟನೆಗೆ ಏನು ಕಾರಣ?

ಪ್ರತಿಭಟನೆಗೆ ಏನು ಕಾರಣ?

ಸೌತ್ ಆಫ್ರಿಕಾದಲ್ಲಿ ಬಡತನ ಹೆಚ್ಚುತ್ತಿದೆ. ಜೀವನ ವೆಚ್ಚ ದುಬಾರಿಯಾಗುತ್ತಿದೆ. ನಿರುದ್ಯೋಗ ದರ ಹೆಚ್ಚುತ್ತಿದೆ. ಇದೆಲ್ಲವೂ ಅಲ್ಲಿನ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರನ್ನು ಹೈರಾಣಗೊಳಿಸಿದೆ. ಈ ಸಮಸ್ಯೆಗಳಿಗೆ ಸರಕಾರ ಪರಿಹಾರ ಒದಗಿಸಲಿ ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ.

"ದುಬಾರಿ ಜೀವನ ವೆಚ್ಚ ಹಾಗೂ ಹೀನಾಯ ಆರ್ಥಿಕ ಪರಿಸ್ಥಿತಿಯಲ್ಲಿ ಕಾರ್ಮಿಕ ವರ್ಗದ ಜನರು ಪರದಾಡುತ್ತಿರುವುದು ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಕಾರಣ" ಎಂದು ಮುಷ್ಕರದ ಮುಂದಾಳತ್ವ ವಹಿಸಿದ ನಾಯಕರೊಬ್ಬರು ಹೇಳಿದ್ದಾರೆ.

ಆರ್ಥಿಕ ಪರಿಸ್ಥಿತಿ ಕುಸಿತ ಯಾಕೆ?

ಆರ್ಥಿಕ ಪರಿಸ್ಥಿತಿ ಕುಸಿತ ಯಾಕೆ?

ಕೋವಿಡ್‌ನಿಂದ ಇಡೀ ಜಗತ್ತು ವಿವಿಧ ರೀತಿಯಲ್ಲಿ ನಲುಗಿ ಹೋಗುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅಮೆರಿಕ, ಬ್ರಿಟನ್ ಇತ್ಯಾದಿ ಸಿರಿವಂತ ದೇಶಗಳಿಗೇ ಈ ಬಿಕ್ಕಟ್ಟು ಮಹಾಪೆಟ್ಟು ಕೊಟ್ಟಿದೆ. ಇನ್ನು, ಭಾರತ, ಸೌತ್ ಆಫ್ರಿಕಾದಂಥ ಅಭಿವೃದ್ಧಿಶೀಲ ದೇಶಗಳಿಗೆ ಅದೆಂಥ ಏಟು ಕೊಟ್ಟಿರಬೇಡ?

ಸೌತ್ ಆಫ್ರಿಕಾದಲ್ಲೂ ಕೋವಿಡ್ ಸೋಂಕು ವಿಪರೀತ ಇದ್ದು, ವಿವಿಧ ಕಾಲಘಟ್ಟದಲ್ಲಿ ಲಾಕ್ ಡೌನ್ ಇತ್ಯಾದಿ ಕ್ರಮ ಕೈಗೊಳ್ಳಲಾಗಿತ್ತು. ಅದರಿಂದ ಆರ್ಥಿಕತೆಗೆ ಸಂಕಷ್ಟ ಉಂಟಾಗಿತ್ತು. ಕೋವಿಡ್ ತೀವ್ರತೆ ಕಡಿಮೆ ಆದ ಬಳಿಕ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ವ್ಯತ್ಯಯವಾಯಿತು. ಆಹಾರ ಮತ್ತು ಇಂಧನದ ಬೆಲೆ ಗಗನಕ್ಕೇರಿವೆ.

ವಿದ್ಯುತ್, ಔಷಧ, ಆಹಾರ, ಇಂಧನ ಇತ್ಯಾದಿ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರ ದರ ಶೇ. 7.8ಕ್ಕೆ ಏರಿದೆ. ಕಳೆದ 13 ವರ್ಷಗಲ್ಲಿ ಇದು ಇಲ್ಲಿ ಅತಿ ಹೆಚ್ಚು ಹಣದುಬ್ಬರವಾಗಿದೆ.

ಬಡ್ಡಿ ಮತ್ತು ತೆರಿಗೆ

ಬಡ್ಡಿ ಮತ್ತು ತೆರಿಗೆ

ಹಣದುಬ್ಬರ ಏರುತ್ತಿರುವುದನ್ನು ತಡೆಯಲು ಸೌತ್ ಆಫ್ರಿಕಾದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರವನ್ನು ಏರಿಸುವುದು ಅನಿವಾರ್ಯವಾಗಿತ್ತು. ಬಡ್ಡಿ ದರ ಕಳೆದ 20 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ. ಸತತ ಐದು ಬಾರಿ ಬಡ್ಡಿ ದರಗಳನ್ನು ಏರಿಕೆ ಮಾಡಿದೆ. ಪರಿಣಾಮವಾಗಿ ಬ್ಯಾಂಕ್ ಬಡ್ಡಿ ದರಗಳೂ ಏರಿಕೆ ಆಗಿವೆ.

ಇದರ ಜೊತೆಗೆ ಸರಕಾರ ತೆರಿಗೆಯ ಬರೆ ಹೇರಿದೆ. ಹಣದ ಕ್ರೋಢೀಕರಣಕ್ಕಾಗಿ ಸರಕಾರ ತೆರಿಗೆ ದರ ಏರಿಕೆ ಮಾಡಿದೆ ಎನ್ನಲಾಗಿದೆ. ಇದು ಜನಸಾಮಾನ್ಯರನ್ನು ಹೈರಾಣಗೊಳಿಸಿದೆ. ಒಂದು ಕಡೆ ಕೈಯಲ್ಲಿ ಕೆಲಸ ಇಲ್ಲ, ಇನ್ನೊಂದೆಡೆ ದುಬಾರಿ ಜೀವನ, ಈ ಪರಿಸ್ಥಿತಿಯಲ್ಲಿ ಜನರು ಹೇಗೆ ಬದುಕಬೇಕು.

"ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿಧಿಸುವುದನ್ನು ನಿಲ್ಲಿಸಿ" ಎಂಬಂತಹ ಸಂದೇಶಗಳಿರುವ ಪ್ಲೆಕಾರ್ಡ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಮೆರವಣಿಗೆ ನಡೆಸುತ್ತಿದ್ದಾರೆ.

ವಿಶ್ವ ಬ್ಯಾಂಕ್ ವರದಿಯೊಂದರ ಪ್ರಕಾರ ಸೌತ್ ಆಫ್ರಿಕಾದಲ್ಲಿ 3 ಕೋಟಿ ಜನರು ಬಡತನದಲ್ಲಿ ಬದುಕುತ್ತಿದ್ದಾರೆ. 1.38 ಕೋಟಿ ಜನರಿಗೆ ಆಹಾರದ ಅಭಾವ ಕಾಡುತ್ತಿದೆ. ಕೋವಿಡ್ ನಂತರವೂ ಆರ್ಥಿಕತೆಯಲ್ಲಿ ಸುಧಾರಣೆ ಆಗದೇ ಇರುವುದು ಜನರನ್ನು ಘಾಸಿಗೊಳಿಸಿದೆ.

ಬ್ರೆಡ್ ಮತ್ತು ಕಾಳುಗಳುಗಳ ಬೆಲೆ ಜುಲೈ ತಿಂಗಳಲ್ಲಿ ಶೇ. 13.7ರಷ್ಟು ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇಂಧನ ಬೆಲೆ ಶೇ. 56.2ರಷ್ಟು ಏರಿದೆ. ನಿರುದ್ಯೋಗ ದರ ಶೇ. 34ರಷ್ಟು ಇದೆ.

ಸರಕಾರದಿಂದ ಏನು ಕ್ರಮ?

ಸರಕಾರದಿಂದ ಏನು ಕ್ರಮ?

ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆಯಾದರೂ ಯಾವುದೂ ಪರಿಣಾಮಕಾರಿ ಎನಿಸಿಲ್ಲ. ಹಣದುಬ್ಬರ ನಿಯಂತ್ರಣಕ್ಕೆ ತರಲು ಬಡ್ಡಿ ದರ ಹೆಚ್ಚಿಸುವುದು ಅನಿವಾರ್ಯವಾಗಿತ್ತು.

ಇನ್ನು, ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಹತ್ತಿಕ್ಕಲು ಸರಕಾರ ಪ್ರಯತ್ನ ಮಾಡುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸರಕಾರಿ ನೌಕರರಿಗೆ ಸಂಬಳ ನೀಡುವುದಿಲ್ಲ ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. ಆದರೂ ಪ್ರತಿಭಟನೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.


ಆಫ್ರಿಕಾ ಖಂಡದ ಮತ್ತೊಂದು ದೇಶ ಹೈಟಿಯಲ್ಲೂ ಪ್ರತಿಭಟನೆಗಳು ಇತ್ತೀಚೆಗೆ ನಡೆದವು. ಇಲ್ಲಿಯೂ ದುಬಾರಿ ಬೆಲೆ ಮತ್ತು ಸಾಮಾಜಿಕ ಅಭದ್ರತೆಯು ಜನರನ್ನು ಆಕ್ರೋಶದ ಮಡುವಿಗೆ ನೂಕಿದೆ.

ಹೈಟಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಗ್ಯಾಂಗ್ ವಾರ್‌ಗಳು ಒಂದೆಡೆಯಾದರೆ, ಅಪಹರಣ ಇತ್ಯಾದಿ ಕುಕೃತ್ಯಗಳು ಹೆಚ್ಚುತ್ತಿವೆ. ಕಳೆದ ವರ್ಷ ಅಧ್ಯಕ್ಷ ಜೋವೆನೆಲ್ ಮೋಯ್ಸ್ ಅವರ ಹತ್ಯೆ ಬಳಿಕ ರಾಜಕೀಯ ಅಸ್ಥಿರತೆ ಹೆಚ್ಚಿದೆ.

ಹಣದುಬ್ಬರ ಶೇ. 29ಕ್ಕೆ ಹೋಗಿದೆ. ಇಂಧನ ಸರಬರಾಜು ಕಡಿಮೆ ಆಗಿದ್ದು, ಬೆಲೆ ದುಬಾರಿಯಾಗಿದೆ. ಈ ಕಾರಣಕ್ಕೆ ಮೂರು ದಿನಗಳ ಹಿಂದೆ ಅಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿದ್ದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+