Flying Taxi: ಬೆಂಗಳೂರಲ್ಲಿ ಹಾರುವ ಟ್ಯಾಕ್ಸಿ ಸೇವೆ ಯಾವಾಗ ಶುರುವಾಗುತ್ತೆ? ಇಲ್ಲಿದೆ ಅಪ್‌ಡೇಟ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನರ ಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದು ಕ್ರಮೇಣ ಟ್ರಾಫಿಕ್ ಜಾಮ್ ಕೂಡ ಮಿತಿ ಮೀರುತ್ತಿದೆ. ಇನ್ನು ಇತ್ತೀಚೆಗೆ ಬಿಡುಗಡೆಯಾದ ವರದಿಯಲ್ಲಿ ಬೆಂಗಳೂರು ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ನಗರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಸುಗಮ ಪ್ರಯಾಣ ಎನ್ನುವುದು ಕನಸಿನ ಮಾತಾಗಿದೆ. ಇದಕ್ಕೆ ಭವಿಷ್ಯದ ಪರಿಹಾರ ಹಾರುವ ಟ್ಯಾಕ್ಸಿ (flying taxi) ಸೇವೆ ಎಂದು ಹೇಳಲಾಗುತ್ತಿದೆ.
ಹೌದು ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಿ ನೆಮ್ಮದಿಯಾಗಿ ಪ್ರಯಾಣ ಸೇವೆ ಕಲ್ಪಿಸಲು ಫ್ಲೈಯಿಂಗ್ ಟ್ಯಾಕ್ಸಿ ಪರಿಕಲ್ಪನೆ ಈಗಾಗಲೇ ಅಂತಿಮ ರೂಪ ಪಡೆದುಕೊಂಡಿದೆ. ಈ ಹಿಂದೆ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಬಗ್ಗೆ ಸುದ್ದಿಯಷ್ಟೇ ಹೊರಬಂದಿತ್ತು. ಆದರೆ, ಅದು ಹೇಗಿರಲಿದೆ, ಯಾವ ರೀತಿ ಸೇವೆ ಕೊಡಲಿದೆ? ಯಾವಾಗ ಶುರುವಾಗುತ್ತೆ? ಎಂಬೆಲ್ಲ ಪ್ರಶ್ನೆಗಳಿಗೆ ಇತ್ತರ ಸಿಕ್ಕಿರಲಿಲ್ಲ.

ಸದ್ಯ ಇದೀಗ ಈ ಹಾರುವ ಟ್ಯಾಕ್ಸಿ ಸೇವೆ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಅಲ್ಲದೆ ಬೆಂಗಳೂರಿನಲ್ಲಿ ಯಾವಾಗಿನಿಂದ ಈ ಹೊಸ ಟ್ಯಾಕ್ಸಿ ಸೇವೆ ಶುರುವಾಗಲಿದೆ ಎಂಬುದಕ್ಕೆ ಉತ್ತರವೂ ಸಿಕ್ಕಿದೆ. ಈ ಫ್ಲೈಯಿಂಗ್ ಟ್ಯಾಕ್ಸಿಯನ್ನು ಆಟೋ ಎಕ್ಸ್‌ಪೋದಲ್ಲಿ (Auto Expo 2025) ಪ್ರದರ್ಶನಕ್ಕೆ ಇಡಲಾಗಿದೆ. ಈ ಫೋಟೋಗಳು ವೈರಲ್ ಆಗಿವೆ.
ಇನ್ನು ಬೆಂಗಳೂರಿನ ಟ್ರಾಫಿಕ್ ಪ್ರಮಾಣ ಎಷ್ಟಿದೆ ಎಂದರೆ ಕೇವಲ ಕೇವಲ 10 ಕಿಲೋಮೀಟರ್ ದೂರ ಕ್ರಮಿಸಲು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನೂ ಕೆಲವೊಮ್ಮೆ ಪೀಕ್ ಅವರ್‌ಗಳಲ್ಲಿ ಒಂದೇ ಜಂಕ್ಷನ್‌ನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯೂ ಇದೆ.

ಸದ್ಯ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಏನೆಲ್ಲ ಮಾರ್ಗಗಳನ್ನು ಕಂಡುಕೊಂಡರೂ ಅದರಿಂದ ಫಲ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಇರುವುದರಿಂದ ಟ್ಯಾಕ್ಸಿ ಸೇವೆ ಕೂಡ ದೊಡ್ಡಮಟ್ಟದಲ್ಲಿದೆ. ಏರ್‌ಪೋರ್ಟ್ ರಸ್ತೆಯಿಂದ ನಗರದ ಪ್ರದೇಶಗಳಲ್ಲಿ ದಿನವಿಡೀ ಟ್ಯಾಕ್ಸಿ ಸೇವೆ ಸದ್ಯಕ್ಕೆ ಇದ್ದರೂ ಟ್ರಾಫಿಕ್‌ನಿಂದ ಬೇಸತ್ತು ಬೆಂಗಳೂರಿಗೆ ಪ್ರಯಾಣಿಸಲು ಹೆಣಗಾಡಬೇಕಿದೆ.
ಇದಕ್ಕೆಲ್ಲ ಪರಿಹಾರ ನೀಡುವ ಸದುದ್ದೇಶದೊಂದಿಗೆ ಬೆಂಗಳೂರು ಮೂಲದ ಸಂಸ್ಥೆಯೇ ಈ ಫ್ಲೈಯಿಂಗ್ ಟ್ಯಾಕ್ಸಿ ಸೇವೆಯನ್ನು ಪರಿಚಯಿಲು ಸಜ್ಜಾಗಿದೆ. ಹೌದು ಬೆಂಗಳೂರು ಮೂಲದ ಸರಳಾ ಏವಿಯೇಷನ್ ಎನ್ನುವ ಸ್ಟಾರ್ಟಪ್ ಈ ಹಾರುವ ಟ್ಯಾಕ್ಸಿಯ ಮಾದರಿಯನ್ನು ಪ್ರದರ್ಶಿಸಿದೆ. ಇದು ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಆಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 200 ಕಿಮೀ ಪ್ರಯಾಣಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಹಾರುವ ಟ್ಯಾಕ್ಸಿಗೆ ಒಂದು ಪೂರ್ಣ ಚಾರ್ಜ್ ಮಾಡಲು 25 ನಿಮಿಷಗಳು ಸಾಕು ಎಂದು ಹೇಳಲಾಗಿದೆ. ಸದ್ಯ ಈ ಫ್ಲೈಯಿಂಗ್ ಕಾರು ಪ್ರಸ್ತುತ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಸರಳಾ ಏವಿಯೇಷನ್ ಸಂಸ್ಥೆಯು ಸರ್ಕಾರದ ಅನುಮೋದನೆಗಳಿಗಾಗಿ ಕಾಯುತ್ತಿದ್ದು, ಇದು 2028ರ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಲ್ಲಿದೆ.
ಒಂದು ವೇಳೆ ಈ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಬೆಂಗಳೂರಿನಲ್ಲಿ ಶುರುವಾಗಿದ್ದೇ ಆದರೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೂರದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 18 ನಿಮಿಷಗಳಲ್ಲಿ ತಲುಪಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ 1800 ರೂಪಾಯಿವರೆಗೆ ದರ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಬೆಂಗಳೂರಿನ ಆಗಸದಲ್ಲಿ ಈ ಫ್ಲೈಯಿಂಗ್ ಟ್ಯಾಕ್ಸಿಗಳು ಹಾರಾಡಲಿ ಎಂದು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.












Click it and Unblock the Notifications