Yash: ಶೃಂಗಾರವನ್ನ ಒಬ್ಬ ಮಹಿಳೆ ತೋರಿಸುವ ರೀತಿಯೇ ಬೇರೆ: ಟಾಕ್ಸಿಕ್ ಬೋಲ್ಡ್ ದೃಶ್ಯಗಳ ಬಗ್ಗೆ ನಟ ಯಶ್ ಮೊದಲ ಪ್ರತಿಕ್ರಿಯೆ
ರಾಕಿಂಗ್ ಸ್ಟಾರ್ ಯಶ್ ನಟನೆಯ "ಟಾಕ್ಸಿಕ್" ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಅದರಲ್ಲಿನ ಕೆಲವು ಬೋಲ್ಡ್ ದೃಶ್ಯಗಳು ಮತ್ತು ಪ್ರಚೋದನಾಕಾರಿ ಚಿತ್ರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳ ಬಗ್ಗೆ ಅಮೆರಿಕಾದಲ್ಲಿ ನಡೆದ 'ಸಿನಿಮಾಕಾನ್ 2026' (CinemaCon 2026) ವೇದಿಕೆಯಲ್ಲಿ ಯಶ್ ಮುಕ್ತವಾಗಿ ಮಾತನಾಡಿದ್ದಾರೆ.
ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಗ್ಯಾಂಗ್‌ಸ್ಟರ್ ಅಥವಾ ಬೃಹತ್ ಆ್ಯಕ್ಷನ್ ಸಿನಿಮಾಗಳನ್ನು ಪುರುಷ ನಿರ್ದೇಶಕರು ಮಾತ್ರ ಮಾಡುತ್ತಾರೆ ಎಂಬ ಇತಿಹಾಸವಿದೆ. ಆದರೆ 'ಟಾಕ್ಸಿಕ್' ಮೂಲಕ ಆ ಸಂಪ್ರದಾಯವನ್ನು ಮುರಿಯಲಾಗುತ್ತಿದೆ ಎಂದು ಯಶ್ ಹೇಳಿದ್ದಾರೆ. ಒಬ್ಬ ಮಹಿಳಾ ನಿರ್ದೇಶಕಿಯ ದೃಷ್ಟಿಕೋನದಲ್ಲಿ ಇಂತಹ ಬೃಹತ್ ಮಟ್ಟದ ಗ್ಯಾಂಗ್‌ಸ್ಟರ್ ಕಥೆಯನ್ನು ನೋಡುವುದು ಅತ್ಯಂತ ಹೊಸತು ಮತ್ತು ವಿಶಿಷ್ಟವಾಗಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೃಂಗಾರವನ್ನು ಮಹಿಳೆ ಭಿನ್ನವಾಗಿ ತೋರಿಸಿದ್ದಾರೆ
ಬೋಲ್ಡ್ ದೃಶ್ಯಗಳ ಬಗ್ಗೆಯೂ ಮಾತನಾಡಿರುವ ಯಶ್, "ಗೀತು ಮೋಹನ್ ದಾಸ್ ಅವರಿಗೆ ತಮ್ಮ ಕಥೆಯ ಮೇಲೆ ಅಚಲವಾದ ನಂಬಿಕೆಯಿದೆ. ಪ್ರೇಮ, ಬಯಕೆ ಅಥವಾ ಶೃಂಗಾರವನ್ನು ಒಬ್ಬ ಮಹಿಳೆ ತೆರೆಯ ಮೇಲೆ ಎಷ್ಟು ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಪ್ರಸ್ತುತಪಡಿಸಬಹುದು ಎಂಬುದನ್ನು ಈ ಸಿನಿಮಾ ಚಿತ್ರೀಕರಣದ ವೇಳೆ ನಾನು ಅರಿತುಕೊಂಡೆ. ಪುರುಷ ನಿರ್ದೇಶಕರಿಗಿಂತ ಮಹಿಳೆಯೊಬ್ಬರು ಈ ಭಾವನೆಗಳನ್ನು ಕಟ್ಟಿಕೊಡುವ ರೀತಿ ಸಂಪೂರ್ಣ ಭಿನ್ನವಾಗಿರುತ್ತದೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ದೊಡ್ಡ ಮಟ್ಟದ ಗ್ಯಾಂಗ್‌ಸ್ಟರ್ ಆ್ಯಕ್ಷನ್ ಸಿನಿಮಾಗಳನ್ನು ಪುರುಷ ನಿರ್ದೇಶಕರೇ ಮಾಡುವುದು ವಾಡಿಕೆ. ಆದರೆ, 'ಟಾಕ್ಸಿಕ್' ಚಿತ್ರವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶಿಸುತ್ತಿರುವುದು ಚಿತ್ರಕ್ಕೆ ಹೊಸ ಆಯಾಮ ನೀಡಿದೆ ಎಂದು ಯಶ್ ಹೇಳಿದ್ದಾರೆ. ಒಬ್ಬ ಮಹಿಳಾ ನಿರ್ದೇಶಕಿಯ ದೃಷ್ಟಿಕೋನದಲ್ಲಿ ಗ್ಯಾಂಗ್‌ಸ್ಟರ್ ಕಥೆಯನ್ನು ನೋಡುವುದು ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಅಷ್ಟಾಗಿ ನಡೆದಿಲ್ಲ. ಗೀತು ಅವರು ಒಬ್ಬ ಅದ್ಭುತ ಲೇಖಕಿ, ಅವರಿಂದ ನಾನು ಬಹಳಷ್ಟು ಕಲಿಯುತ್ತಿದ್ದೇನೆ ಎಂದಿದ್ದಾರೆ ಯಶ್.
'ಇಂಟ್ರೊಡ್ಯೂಸಿಂಗ್ ರಾಯಾ' ಎಂಬ ವೀಡಿಯೊದಲ್ಲಿನ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಒಕ್ಕೂಟವು ಈ ಹಿಂದೆ ದೂರನ್ನು ದಾಖಲಿಸಿತ್ತು. ಇದಕ್ಕೆ ಪೂರಕವಾಗಿ ಗೀತು ಮೋಹನ್ ದಾಸ್ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದು, "ಹೆಣ್ಣಿನ ಸಂತೋಷ ಮತ್ತು ಒಪ್ಪಿಗೆಯ ಬಗ್ಗೆ ಜನರು ಇನ್ನೂ ವಿಶ್ಲೇಷಣೆ ನಡೆಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದರು.

ಗೀತು ಬರವಣಿಗೆಗೆ ಯಶ್ ಫಿದಾ
ಗೀತು ಮೋಹನ್ ದಾಸ್ ಅವರನ್ನು ಹೊಗಳಿರುವ ಯಶ್, ಅವರಿಂದ ತಾವು ಬಹಳಷ್ಟು ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಬಿಡುಗಡೆ ತುಸು ವಿಳಂಬವಾಗಿತ್ತು. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಚಿತ್ರವು ಜೂನ್ 4ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ.












Click it and Unblock the Notifications