Vijay Deverakonda: ನಟ ವಿಜಯ್ ದೇವರಕೊಂಡ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದೇಕೆ?
ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಟ ವಿಜಯ್ ದೇವರಕೊಂಡ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ಅವರ ಕಿಂಗ್‌ಡಮ್ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದ್ದು, ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಇದರ ನಡುವೆ ವಿಜಯ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಚೆನ್ನಾಗಿಯೇ ಕಾಣಿಸಿಕೊಂಡಿದ್ದ ವಿಜಯ್ ದೇವರಕೊಂಡ ಅವರು ಇದಕ್ಕಿದ್ದಂತೆ ಆಸ್ಪತ್ರೆ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ. ನಟ ವಿಜಯ್ ಅವರಿಗೆ ನಿಜಕ್ಕೂ ಏನಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ತಮ್ಮ ಮುಂಬರುವ ಚಿತ್ರ ಕಿಂಗ್‌ಡಮ್ ಬಿಡುಗಡೆಗಾಗಿ ಎದುರು ನೋಡುತ್ತಿರುವ ನಟ ವಿಜಯ್ ದೇವರಕೊಂಡ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಕಾರಣಕ್ಕೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 36 ವರ್ಷದ ನಟನಿಗೆ ಸದ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಆದರೆ ಅವರ ಸಿನಿಮಾ ರಿಲೀಸ್ ಹೊತ್ತಲ್ಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.

ಇತ್ತೀಚಿನ ಹಠಾತ್ ಹವಾಮಾನ ಬದಲಾವಣೆಯಿಂದ ನಟ ವಿಜಯ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ವಿಜಯ್‌ಗೆ ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಆಗ ದೇವರಕೊಂಡಗೆ ಡೆಂಗ್ಯೂ ಪತ್ತೆಯಾಗಿತ್ತು. ಅವರು ಪ್ರಸ್ತುತ ಬೆಂಗಳೂರಿನ ಪ್ರಮುಖ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಜುಲೈ 20ರವರೆಗೆ ಅವರು ಆಸ್ಪತ್ರೆಯಲ್ಲಿಯೇ ಇರುತ್ತಾರೆ ಎಂದೂ ಹೇಳಲಾಗುತ್ತಿದೆ.
ಆದರೆ ವಿಜಯ್ ಅವರ ಟೀಂ ಈ ಸುದ್ದಿಯನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು ವಿಜಯ್‌ಗೆ ಏನಾಯಿತು? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಿನಿಮಾ ಇನ್ನು 10 ದಿನಗಳಲ್ಲೇ ಬಿಡುಗಡೆಯಾಗುತ್ತಿರುವುದರಿಂದ ಈ ಸಮಯದಲ್ಲೇ ವಿಜಯ್ ಆರೋಗ್ಯ ಕೆಟ್ಟಿರುವುದು ಅಭಿಮಾನಿಗಳಿಗೆ ಇನ್ನಷ್ಟು ನಿರಾಶಾದಾಯಕವಾಗಿದೆ. ಲೈಗರ್ ಸಿನಿಮಾ ಫ್ಲಾಪ್ ಆಗಿದ್ದರಿಂದ ನಂತರ ತೆರೆಕಂಡ ಸಿನಿಮಾಗಳು ಅಷ್ಟಾಗಿ ಕೈಹಿಡಿದಿರಲಿಲ್ಲ. ಹೀಗಾಗಿ ಕಿಂಗ್‌ಡಮ್ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ವಿಜಯ್ ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಪ್ರಾಥಿಸುತ್ತಿದ್ದಾರೆ.

"ಜೆರ್ಸಿ" ಖ್ಯಾತಿಯ ಗೌತಮ್ ತಿನ್ನನುರಿ ನಿರ್ದೇಶನದ ಕಿಂಗ್‌ಡಮ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಬಹಳ ದಿನಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದ ಕಾರಣ ಅಭಿಮಾನಿಗಳು ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಈ ಚಿತ್ರದ ಪ್ರಚಾರಗಳು ನಡೆಯುತ್ತಿರುವಾಗಲೇ ಅನಾರೋಗ್ಯ ಎದುರಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ತೀವ್ರ ಆಯಾಸದಿಂದಾಗಿ ಆಸ್ಪತ್ರೆಗೆ ಹೋಗಿದ್ದ ವಿಜಯ್‌ಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಕನಿಷ್ಠ ಮೂರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications