ಟಾಪ್ ನಟಿಯಾಗಿದ್ದ ಅನುಷ್ಕಾ ಶೆಟ್ಟಿ ಹಲವು ವರ್ಷ ಬ್ರೇಕ್ ಪಡೆದಿದ್ದೇಕೆ? ಕೊನೆಗೂ ಹೊರಬಂತು ಸತ್ಯ!
ಮೂಲತಃ ಕನ್ನಡತಿಯಾದ ಅನುಷ್ಕಾ ಶೆಟ್ಟಿ ಅವರು ದಶಕಗಳ ಕಾಲ ತೆಲುಗು ಹಾಗೂ ತಮಿಳು ಚಿತ್ರರಂಗವನ್ನಾಳಿದ ಟಾಪ್ ನಟಿ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅನುಷ್ಕಾ ಮಿಂಚಿದ್ದರು. ಇನ್ನು ಟಾಲಿವುಡ್‌ನಲ್ಲಿ ಅನುಷ್ಕಾ ಟಾಪ್ ನಟಿಯಾಗಿಯೇ ಮುಂಚೂಣಿಯಲ್ಲಿದ್ದರು. ಆದರೆ ಬಾಹುಬಲಿ ಸಿನಿಮಾದ ನಂತರ ಅವರು ಹಲವು ವರ್ಷಗಳ ಕಾಲ ಸಿನಿಮಾದಿಂದ ದೂರು ಉಳಿದಿದ್ದರು. ಇದಕ್ಕೆ ಸ್ಪಷ್ಟ ಕಾರಣವೇನು ಎಂದು ಅವರು ಎಲ್ಲಿಯೂ ಹೇಳಿರಲಿಲ್ಲ. ಈ ಬಗ್ಗೆ ಅನುಷ್ಕಾ ಅವರೇ ಖುದ್ದಾಗಿ ಸ್ಪಷ್ಟನೆ ನೀಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಅಷ್ಟು ವರ್ಷ ಸಿನಿಮಾಗಳಿಂದ ದೂರ ಉಳಿದಿದ್ದೇಕೆ? ಎಂಬ ಸತ್ಯ ಹೊರಬಂದಿದೆ.
ಇತ್ತೀಚೆಗೆ ಅನುಷ್ಕಾ ಶರ್ಮಾ ಈ ಬಗ್ಗೆ ಮಾತನಾಡಿರುವ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವು ವರ್ಷಗಳ ಬ್ರೇಕ್ ಬಳಿಕ ಅವರು ಸೈಜ್‌ಜೀರೋ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ಬ್ರೇಕ್ ತೆಗೆದುಕೊಳ್ಳುವುದಕ್ಕೂ ಸೈಜ್‌ಜೀರೋ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಸೈಜ್‌ಜೀರೋ ಸಿನಿಮಾ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಆ ಸಿನಿಮಾ ಮಾಡಲು ಬಯಸಿದ್ದೆ. ನೀವು ಒಂದು ಪಾತ್ರವನ್ನು ಮಾಡುವಾಗ, ನಿಮಗೆ ಪ್ಲಸ್ ಮತ್ತು ಮೈನಸ್ ಎರಡೂ ಇರುತ್ತವೆ. ನೀವು ಅವಕಾಶಗಳನ್ನು ತೆಗೆದುಕೊಳ್ಳಬೇಕು ಎಂದು ಅನುಷ್ಕಾ ಹೇಳಿದ್ದಾರೆ.

ನೀವು ಮೊದಲೇ ಹೇಳಿದಂತೆ, ಮಹಿಳೆಯಾಗಿ ನಾನು ಎರಡು ದಶಕಗಳ ವೃತ್ತಿಜೀವನ ಕಳೆದಿದೆ. ನಮಗೂ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವುದು ಅಷ್ಟು ಗಂಭೀರವಾದ ವಿಷಯ ಆಗಿಲ್ಲದೆ ಇರಬಹುದು. ಆದರೆ ನಮ್ಮ ಜೀವಿತಾವಧಿಯಲ್ಲಿ ಬೆಳೆಯುತ್ತಿರುವಾಗ ನಮ್ಮಲ್ಲಿ ಹೆಚ್ಚಿನವರು ಅನುಭವಿಸಬಹುದಾದ ವಿಷಯಗಳಾಗಿವೆ. ಆದ್ದರಿಂದ ನಾನು ನನ್ನ ಕಾರಣಗಳಿಗಾಗಿ ವಿರಾಮ ತೆಗೆದುಕೊಂಡೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅದಕ್ಕಾಗಿ ಬ್ರೇಕ್ ಬೇಕಾಗಿತ್ತು
ನಾನು 2012ರಿಂದ 2018ರವರೆಗೆ ನಿರಂತರವಾಗಿ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ನನಗೆ ಸಾಕಷ್ಟು ಗಾಯಗಳಾಗಿದ್ದವು. ಹಲವು ಸಿನಿಮಾಗಳ ಚಿತ್ರೀಕರಣದ ಸಮಯದಲ್ಲಿ ನನಗೂ ಗಂಭೀರ ಗಾಯಗಳಾಗಿವೆ. ಅದು ವೃತ್ತಿಜೀವನದ ಒಂದು ಭಾಗ ಮತ್ತು ಅದಕ್ಕೂ ಬ್ರೇಕ್ ಪಡೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ವೈಯಕ್ತಿಕ ಕಾರಣಗಳಿಗಾಗಿ ನನಗೆ ಬ್ರೇಕ್ ಬೇಕಾಗಿತ್ತು ಎಂದು ಅನುಷ್ಕಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಅನುಷ್ಕಾ ಶೆಟ್ಟಿ ಅವರ ದೇಹದಲ್ಲಿ ತುಂಬಾ ಬದಲಾವಣೆಗಳಾಗಿದ್ದು, ಇದೇ ಕಾರಣಕ್ಕೆ ಅವರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂಬ ವದಂತಿ ಹಬ್ಬಿತ್ತು. ಬಳಿಕ ಸೈಜ್ ಜೀರೋ ಸಿನಿಮಾದಲ್ಲೂ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಅವರು ಸಿನಿಮಾಗಳಿಂದ ದೂರ ಉಳಿದಿದ್ದಾರೆ ಎಂದೆಲ್ಲ ವದಂತಿ ಹರಡಿತ್ತು. ಈ ಎಲ್ಲದಕ್ಕೂ ಅವರೇ ಖುದ್ದಾಗಿ ಸ್ಪಷ್ಟನೆ ನೀಡಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಅಬ್ಬರಿಸಿದ್ದರು. ನಟ ಪ್ರಭಾಸ್ ಹಾಗೂ ಅನುಷ್ಕಾ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಲವ್‌ನಲ್ಲಿದ್ದಾರೆ ಎಂಬ ಗಾಸಿಪ್ ಇಂದಿಗೂ ಮುಂದುವರಿದಿದೆ. ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.












Click it and Unblock the Notifications