Lakshmi Nivasa: 'ಲಕ್ಷ್ಮೀ ನಿವಾಸ' ಸೀರಿಯಲ್‌ನಿಂದ ನಟ ನೀನಾಸಂ ಅಶ್ವತ್ಥ್ ಹೊರಬಂದಿದ್ದೇಕೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಜನಪ್ರಿಯ ಧಾರಾವಾಹಿಗೆ ಪ್ರೇಕ್ಷಕರ ಬಳಗ ದೊಡ್ಡಸಂಖ್ಯೆಯಲ್ಲಿದೆ. ಆದರೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶ್ವೇತಾ ಹೊರನಡೆದಿದ್ದರು. ಇದರಿಂದ ಪ್ರೇಕ್ಷಕರು ಬೇಸರ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಪಾತ್ರಧಾರಿ ಕೂಡ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಖ್ಯಾತ ನಟ ನೀನಾಸಂ ಅಶ್ವತ್ಥ್ ಅವರು ಕೂಡ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಹೌದು, ನೀನಾಸಂ ಅಶ್ವತ್ಥ್ ಅವರು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನರಸಿಂಹ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತ್ತು. ಆದರೆ ಇತ್ತೀಚೆಗೆ ಅವರು ಧಾರಾವಾಹಿಯಿಂದ ಏಕಾಏಕಿ ಹೊರಬಂದಿದ್ದಾರೆ. ಈ ನಿರ್ಧಾರಕ್ಕೆ ಸ್ಪಷ್ಟ ಕಾರಣವನ್ನು ಅಧಿಕೃತವಾಗಿ ಇನ್ನೂ ಹೊರಬಂದಿಲ್ಲ. ನೀನಾಸಂ ಅಶ್ವತ್ಥ್ ಅವರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹಿರಿಯ ಕಲಾವಿದರಾಗಿದ್ದು, ಅವರ ನಿರ್ಗಮನಕ್ಕೆ ಧಾರಾವಾಹಿ ತಂಡದಿಂದ ಅಥವಾ ಅವರಿಂದಲೂ ಯಾವುದೇ ಸ್ಪಷ್ಟನೆ ಬಂದಿಲ್ಲ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇತ್ತೀಚೆಗೆ ಪ್ರಮುಖ ಪಾತ್ರಧಾರಿಗಳ ಬದಲಾವಣೆಗಳು ನಡೆದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ಇಲ್ಲಿವರೆಗೆ ಆ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದರು ದಿಢೀರ್ ಸೀರಿಯಲ್‌ನಿಂದ ಹೊರನಡೆಯುತ್ತಿರುವುದರಿಂದ ಶಾಕ್‌ಗೂ ಒಳಗಾಗಿದ್ದಾರೆ. ಇತ್ತೀಚೆಗೆ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದ ಶ್ವೇತಾ ಅವರು ವೈಯಕ್ತಿಕ ಕಾರಣಗಳಿಂದಾಗಿ ಧಾರಾವಾಹಿಯಿಂದ ಹೊರಬಂದಿದ್ದಾಗಿ ಅವರೇ ಸ್ಪಷ್ಟನೆ ನೀಡಿದ್ದರು. ಈಗ ಅವರ ಸ್ಥಾನಕ್ಕೆ ಮತ್ತೊಬ್ಬ ಕಲಾವಿದೆಯಾದ ಮಾಧುರಿ ಅವರು ಬಂದಿದ್ದಾರೆ.
ಈಗ ನೀನಾಸಂ ಅಶ್ವತ್ಥ್ ಅವರು ಕೂಡ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಪ್ರೇಕ್ಷಕರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಗಳ ಬದಲಾವಣೆಗಳು ನಡೆಯುತ್ತಿದ್ದು, ಹಿರಿಯ ನಟಿ ಶ್ವೇತಾ, ತನು ಪಾತ್ರಧಾರಿಯೂ ಧಾರಾವಾಹಿಯಿಂದ ಹೊರಬಂದಿದ್ದಾರೆ. ನಿರ್ಮಾಪಕರ ಬದಲಾವಣೆ ಹಾಗೂ ಕಲಾವಿದರು ಮತ್ತು ತಂತ್ರಜ್ಞರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿರುವುದರಿಂದ ಈ ಬೆಳವಣಿಗೆ ನಡೆದಿರಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹಳೆಯ ನಿರ್ಮಾಪಕರು ಕಲಾವಿದರು ಮತ್ತು ತಂತ್ರಜ್ಞರಿಗೆ ನೀಡಬೇಕಾಗಿದ್ದ ಸಂಭಾವನೆ ನೀಡದೆ, ಹೊಸ ನಿರ್ಮಾಪಕರು ಬದಲಾಗಿರುವ ಕಾರಣದಿಂದ ಕಲಾವಿದರು ಅಸಮಾಧಾನಗೊಂಡು ಧಾರಾವಾಹಿ ತೊರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಧಾರಾವಾಹಿಯ ತಂಡವು ಕುಟುಂಬದಂತೆ ಇದ್ದರೂ, ಈ ಬದಲಾವಣೆಗಳು ಧಾರಾವಾಹಿಯ ಜನಪ್ರಿಯತೆ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಈಗ ನೀನಾಸಂ ಅಶ್ವತ್ಥ್ ಅಥವಾ ಧಾರಾವಾಹಿ ತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.












Click it and Unblock the Notifications