Bhagyashree: ಸಲ್ಮಾನ್ ಖಾನ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದ ನಟಿ ಭಾಗ್ಯಶ್ರೀ, ಸಿನಿಮಾ ಹಿಟ್ ಆದ್ರೂ ಚಿತ್ರರಂಗ ಬಿಟ್ಟಿದ್ದೇಕೆ?
1989ರ ಅವಧಿಯಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಇತಿಹಾಸ ಸೃಷ್ಟಿಸಿದ ಸಿನಿಮಾ ಸೂರಜ್ ಬರ್ಜಾತ್ಯ ನಿರ್ದೇಶನದ 'ಮೈನೆ ಪ್ಯಾರ್ ಕಿಯಾ'. ಈ ಚಿತ್ರದ ಮೂಲಕವೇ ನಟಿ ಭಾಗ್ಯಶ್ರೀ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಾಯಕ ಸಲ್ಮಾನ್ ಖಾನ್ ಅವರಿಗೆ ಇದು ಎರಡನೇ ಸಿನಿಮಾವಾಗಿದ್ದರೂ, ನಾಯಕನಾಗಿ ಮೊದಲ ಚಿತ್ರವಾಗಿತ್ತು. ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕರಿಗೆ ಹೆಚ್ಚಿನ ಸಂಭಾವನೆ ನೀಡುವ ಸಂಪ್ರದಾಯವಿದೆ. ಆದರೆ, ಈ ಚಿತ್ರದ ವಿಷಯದಲ್ಲಿ ನಾಯಕಿ ಭಾಗ್ಯಶ್ರೀ ಅವರಿಗೆ ಸಲ್ಮಾನ್‌ಗಿಂತ ದುಬಾರಿ ಮೊತ್ತದ ಸಂಭಾವನೆ ನೀಡಲಾಗಿತ್ತು.
37 ವರ್ಷಗಳ ಬಳಿಕ ಹೊರಬಂತು ಅಸಲಿ ಸತ್ಯ
ಇದರ ಹಿಂದಿರುವ ಆರ್ಥಿಕ ಲೆಕ್ಕಾಚಾರವನ್ನು 57 ವರ್ಷದ ನಟಿ ಭಾಗ್ಯಶ್ರೀ ಇತ್ತೀಚಿನ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಭಾಗ್ಯಶ್ರೀ ಅವರ ಪ್ರಕಾರ, ಸಿನಿಮಾ ರಂಗದಲ್ಲಿ ಸಂಭಾವನೆಯ ಲೆಕ್ಕಾಚಾರವು ಸಂಪೂರ್ಣವಾಗಿ 'ಬೇಡಿಕೆ ಮತ್ತು ಪೂರೈಕೆ'ಯ ಮಾರುಕಟ್ಟೆ ನಿಯಮದ ಮೇಲೆ ಕೆಲಸ ಮಾಡುತ್ತದೆ. ಹಣದ ವಿಷಯ ಬಂದಾಗ ಇದೊಂದು ಸರಳ ವ್ಯವಹಾರವಷ್ಟೇ. ನಿರ್ಮಾಪಕರು ಮತ್ತು ನಿರ್ದೇಶಕರು ಒಬ್ಬ ನಟ ಅಥವಾ ನಟಿಯ ಜನಪ್ರಿಯತೆ ಹಾಗೂ ಮೌಲ್ಯವನ್ನು ಆಧರಿಸಿ ಬಂಡವಾಳ ಹೂಡುತ್ತಾರೆ ಎಂದಿದ್ದಾರೆ.

ಒಂದು ವೇಳೆ ಯಾವುದೇ ನಟಿ ತಮಗೆ ಇಷ್ಟ ಬಂದಷ್ಟು ಸಂಭಾವನೆ ಕೇಳಿದರೆ ಮತ್ತು ಅದೇ ಪಾತ್ರವನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಮತ್ತೊಬ್ಬರು ಸಿದ್ಧರಿದ್ದರೆ, ನಿರ್ಮಾಪಕರು ತಕ್ಷಣವೇ ಆ ನಟಿಯನ್ನು ಬದಲಾಯಿಸುತ್ತಾರೆ. ಹಾಗಾಗಿ, ಮಹಿಳಾ ನಟಿಯರೆಲ್ಲರೂ ಒಟ್ಟಾಗಿ ತಮಗೆ ಇಷ್ಟೇ ಸಂಭಾವನೆ ಬೇಕು ಎಂದು ನಿರ್ಧಾರ ಕೈಗೊಳ್ಳುವವರೆಗೆ ಈ ತಾರತಮ್ಯ ಮುಂದುವರಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ರಂಗ ಒಂದು ಏರಿಳಿತದ ಮಾರುಕಟ್ಟೆ
ಮನರಂಜನಾ ಕ್ಷೇತ್ರವು ನಿರಂತರ ಸಂಧಾನ ಮತ್ತು ರಾಜಿಗಳ ಮೇಲೆ ನಡೆಯುತ್ತದೆ. ಇಲ್ಲಿ ಕಡಿಮೆ ಸಂಬಳಕ್ಕೆ, ಹೆಚ್ಚಿನ ಸಮಯ ಕೆಲಸ ಮಾಡಲು ಅಥವಾ ಯಾವುದೇ ರೀತಿಯ ಪಾತ್ರ ಮಾಡಲು ಯಾರಾದರೂ ಒಬ್ಬರು ಸದಾ ಸಿದ್ಧರಿರುತ್ತಾರೆ. ಹೀಗೆ ಒಬ್ಬರಿಗಿಂತ ಒಬ್ಬರು ಬಿಟ್ಟುಕೊಡಲು ಸಿದ್ಧರಿರುವುದರಿಂದಲೇ ಚಿತ್ರರಂಗವು ಸದಾ ಏರಿಳಿತಗಳಿಂದ ಕೂಡಿರುತ್ತದೆ ಎಂದು ಅವರು ಹೇಳಿದ್ದಾರೆ.
ಸಂಭಾವನೆಯ ಲೆಕ್ಕಾಚಾರವನ್ನು ಸುಲಭವಾಗಿ ಅರ್ಥೈಸಲು ಭಾಗ್ಯಶ್ರೀ ಅವರು ಮನೆ ಖರೀದಿಸುವ ಉದಾಹರಣೆ ನೀಡಿದ್ದಾರೆ. "ನಾವು ಒಂದು ಫ್ಲ್ಯಾಟ್ ಖರೀದಿಸುವಾಗ, ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಅಥವಾ ಇತರ ಹೆಚ್ಚುವರಿ ಸೌಲಭ್ಯಗಳಿದ್ದರೆ ಸ್ವಲ್ಪ ಹೆಚ್ಚು ಹಣ ಕೊಡಲು ಸಿದ್ಧರಿರುತ್ತೇವೆ. ಅದೇ ನಮಗೆ ಆ ಸೌಲಭ್ಯಗಳು ಬೇಡ ಎಂದಾಗ, ಕಡಿಮೆ ಬೆಲೆಯ ಮನೆಗೆ ರಾಜಿ ಮಾಡಿಕೊಳ್ಳುತ್ತೇವೆ. ಚಿತ್ರರಂಗದಲ್ಲೂ ಅಷ್ಟೇ, ಒಬ್ಬ ನಟ ಅಥವಾ ನಟಿಯಿಂದ ಸಿನಿಮಾಗೆ ಸಿಗುವ ಹೆಚ್ಚುವರಿ ಮೌಲ್ಯವನ್ನು ನೋಡಿ ಸಂಭಾವನೆ ನಿಗದಿಪಡಿಸಲಾಗುತ್ತದೆ. ಇದು ಕೇವಲ ಒಂದು ಬಿಸಿನೆಸ್ ಸ್ಟ್ರ್ಯಾಟಜಿ" ಎಂದು ಭಾಗ್ಯಶ್ರೀ ವಿವರಿಸಿದ್ದಾರೆ.
'ಮೈನೆ ಪ್ಯಾರ್ ಕಿಯಾ' ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಭಾಗ್ಯಶ್ರೀ ಅವರು ಹಿಮಾಲಯ ದಾಸಾನಿ ಅವರನ್ನು ವಿವಾಹವಾದರು. ನಂತರ ತಮ್ಮ ಪತಿಯ ಜೊತೆಗೇ ಕೆಲವು ಸಿನಿಮಾಗಳಲ್ಲಿ ನಟಿಸಿದ ಅವರು, ಮಕ್ಕಳ ಪಾಲನೆಗಾಗಿ ಬಣ್ಣದ ಲೋಕದಿಂದ ದೂರ ಸರಿದರು. ಹಲವು ವರ್ಷಗಳ ನಂತರ 'ಹಮ್ಕೋ ದೀವಾನಾ ಕರ್ ಗಯೇ' ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ ಇವರು, ಇತ್ತೀಚಿನ ವರ್ಷಗಳಲ್ಲಿ 'ರಾಧೆ ಶ್ಯಾಮ್', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಮತ್ತು 'ರಾಜಾ ಶಿವಾಜಿ'ಯಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.













Click it and Unblock the Notifications