ಆ ನಟನ ಜೊತೆ ಸಿನಿಮಾ ಮಾಡಬೇಡ, ಸೇಫ್ ಅಲ್ಲ ಅಂದ್ರು: ಬ್ಯಾಂಗಲ್ ಬಂಗಾರಿಗೆ ಆಗಿದ್ದೇನು?
ಸ್ಯಾಂಡಲ್‌ವುಡ್ ನಟಿ ಸಂಜನಾ ಆನಂದ್ ಅವರು ಸದ್ಯ ಎಕ್ಕ ಸಿನಿಮಾ ಮೂಲಕ ಬ್ಯಾಂಗಲ್ ಬಂಗಾರಿ ಎಂದೇ ಫೇಮಸ್ ಆಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಗೆದ್ದಿರುವ ಅವರು ಪರಭಾಷಾ ಚಿತ್ರಗಳಿಗೂ ಕಾಲಿಟ್ಟಿದ್ದಾರೆ. ಹೀಗಿರುವಾಗ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಆದ ಕೆಟ್ಟ ಅನುಭವೊಂದನ್ನು ಹೇಳಿದ್ದಾರೆ. 'ನಟರೊಬ್ಬರ ಜೊತೆ ಸಿನಿಮಾ ಮಾಡುವುದು ಬೇಡ, ಅದು ಸೇಫ್ ಅಲ್ಲ' ಎಂದು ವಾರ್ನಿಂಗ್ ಕೊಟ್ಟಿದ್ದರು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಆ ಮಾತು ಕೇಳದೆ, ಅದೇ ನಟನ ಜೊತೆ ಸಿನಿಮಾದಲ್ಲಿ ನಟಿಸಿದ ಮೇಲೆ ಏನಾಯ್ತು? ಎಂಬುದನ್ನೂ ಸಂಜನಾ ವಿವರಿಸಿದ್ದಾರೆ.
ನಟಿ ಸಂಜನಾ ಆನಂದ್ ಕನ್ನಡ ಚಿತ್ರರಂಗದಲ್ಲಿ ಎದುರಿಸಿದ ಕೆಟ್ಟ ಅನುಭವಗಳ ಬಗ್ಗೆ ಇತ್ತೀಚೆಗೆ 'ರಾಪಿಡ್ ರಶ್ಮಿ' ಯುಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 'ಆರಂಭದಲ್ಲಿ ನಾನು ಒಂದು ಸಿನಿಮಾದಲ್ಲಿ ನಟಿಸಿದೆ. ನಾನು ಅವರನ್ನು ಅತಿಯಾಗಿ ನಂಬಿದ್ದೆ. ಅವರು ನನ್ನ ಮೇಲೆ ತೋರಿದ ಪ್ರೀತಿ ಬಗ್ಗೆ ಯಾವುದೇ ಅನುಮಾನ ಇಲ್ಲ. ಅದೇ ನಂಬಿಕೆ ಮೇಲೆ ನಾನು ಸಿನಿಮಾದಲ್ಲಿ ತೊಡಗಿದೆ. ಆದರೆ ನಂತರ ಅವರು ಪೇಮೆಂಟ್ ಕೊಡಲಿಲ್ಲ. ಆಗ ನನ್ನ ಬಳಿಯೂ ಹಣ ಇರಲಿಲ್ಲ, ಐಟಿ ಕೆಲಸಕ್ಕೂ ಗುಡ್‌ಬೈ ಹೇಳಿದ್ದೆ' ಎಂದಿದ್ದಾರೆ.

'ನಾನು ಮುಂಚೆಯೇ ಹಣ ತಗೊಂಡು ಅಗ್ರಿಮೆಂಟ್ ಮಾಡಿಕೊಳ್ಳಬೇಕಿತ್ತು. ಕೋವಿಡ್ ಸಮಯ ಆದ ಕಾರಣ ನನ್ನ ಬಳಿಯೂ ಹಣ ಇರಲಿಲ್ಲ. ಐಟಿ ಕೆಲಸ ಮಾಡುತ್ತಿದ್ದಾಗ 10 ಲಕ್ಷ ಸೇವಿಂಗ್ಸ್ ಇತ್ತು. ನಾನು ಸಿನಿಮಾ ಮಾಡಬೇಕು, ಕಷ್ಟ ಅಂದಿದಕ್ಕೆ ಆ ಹಣ ಕೊಟ್ಟೆ. ಆದರೆ ವಾಪಸ್ ಕೇಳಿದಾಗ ಕೊಡಲ್ಲ ಏನಿವಾಗ? ಅಂದ್ರು. ಅದು ಕೂಡ ಕೋವಿಡ್ ಟೈಮ್‌ನಲ್ಲಿ. ನನ್ನ ಬಳಿ ದುಡ್ಡು ಇರಲಿಲ್ಲ. ಆ ಅನುಭವ ಆದ್ಮೇಲೆ ಯಾರಿಗೂ ಹಣ ಕೊಡೋಕೆ ಹೋಗಲಿಲ್ಲ. ಅದರಿಂದ ಒಂದು ದೊಡ್ಡ ಪಾಠ ಕಲಿತೆ' ಎಂದು ಸಂಜನಾ ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಸೇಫ್ ಅಲ್ಲ ಅಂದ್ರು, ಆದರೆ...
'ನಾನು ಮೊದಲಿಗೆ ತಲೆಯಲ್ಲಿ ಹೀಗೆ, ಹಾಗೆ ಅಂತ ಇಟ್ಟುಕೊಳ್ಳಲ್ಲ. ಒಬ್ಬರ ಬಗ್ಗೆ ನಾನು ತುಂಬಾ ವಿಚಾರ ಕೇಳಿದ್ರೂ ಅವರು ಸಿಕ್ಕಾಗ ಹೊಸದಾದ ಅಭಿಪ್ರಾಯವನ್ನೇ ಹೊಂದಿರುತ್ತೇನೆ. ನಾನು ಒಂದು ಸಿನಿಮಾದಲ್ಲಿ ನಟಿಸಿದೆ. ಅದಕ್ಕೂ ಮುಂಚೆ ತುಂಬಾ ಜನ ನನಗೆ ಆ ನಟನೊಂದಿಗೆ ಸಿನಿಮಾದಲ್ಲಿ ನಟಿಸಬೇಡ, ಅವರ ಜೊತೆ ಸೇಫ್ ಅಲ್ಲ ಅಂತೆಲ್ಲ ಹೇಳಿದ್ರು. ನಾನು ಆ ನಟನ ಹೆಸರು ಹೇಳಲು ಬಯಸುವುದಿಲ್ಲ. ಆದರೆ ಅಸಲಿಗೆ ಅಲ್ಲಿ ನೋಡಿದರೆ ಅದೇ ತುಂಬಾ ಸೇಫ್ ಆದ ಜಾಗ ಆಗಿತ್ತು. ನನಗೆ ತುಂಬಾ ಒಳ್ಳೆಯ ಅನುಭವ ಕೊಟ್ಟ ಸಿನಿಮಾ ಕೂಡ ಅದೇ ಆಗಿದೆ. ಹಾಗಾಗಿ ಎಲ್ಲರೂ ಹೇಳೋ ಮಾತುಗಳನ್ನ ನಾನು ಹೆಚ್ಚಾಗಿ ತಲೆಗೆ ಹಾಕಿಕೊಳ್ಳಲ್ಲ' ಎಂದು ಸಂಜನಾ ಹೇಳಿದ್ದಾರೆ.
'ನಾನು ಎಲ್ಲರಿಗೂ ಏನು ಗೌರವ ಕೊಡುತ್ತೇನೋ ಅದೇ ನನಗೆ ವಾಪಸ್ ಬರುತ್ತೆ. ನಾನು ಯಾವುದೇ ಎಕ್ಸ್‌ಟ್ರಾಗಳು ಮಾಡಲ್ಲ. ನಾನು ಹೋದ ಕಡೆ ಕೆಲಸವನ್ನು ಸರಿಯಾಗಿ ಮಾಡ್ತೀನಿ, ಹೆಚ್ಚಾಗಿ ಯಾರೊಂದಿಗೂ ನಂಟು ಹೊಂದಲ್ಲ' ಎಂದಿದ್ದಾರೆ.












Click it and Unblock the Notifications