ಬಿಗ್ ಬಾಸ್ ರಜತ್ ಮೇಲೆ ಮೊದಲು ಕೇಸ್ ಹಾಕಿದ್ದು ಯಾರು ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್‌ಗೆ ಬಿಗ್ ಬಾಸ್ ಮುಗಿದ ಬಳಿಕ ಕೆಟ್ಟ ಸಮಯ ಬೆನ್ನು ಹತ್ತಿದಂತಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ರಜತ್‌ಗೆ ಸದ್ಯಕ್ಕೆ ರಿಲೀಫ್ ಸಿಗುವಂತೆ ಕಾಣುತ್ತಿಲ್ಲ. ರಿಯಾಲಿಟಿ ಶೋ ಸೆಟ್‌ನಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಕೇಸ್‌ನಲ್ಲಿ ಇತ್ತೀಚೆಗಷ್ಟೇ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದರು.
ಇದೀಗ ಇದೇ ಪ್ರಕರಣದಲ್ಲಿ ಮತ್ತೆ ಬಸವೇಶ್ವರ ನಗರ ಪೊಲೀಸರು ರಜತ್‌ಅನ್ನು ಬಂಧಿಸಿ ಮೂರು ದಿನಗಳು ಕಳೆಯುತ್ತಿದೆ. ಈ ಪ್ರಕರಣದಲ್ಲಿ ವಿನಯ್ ಗೌಡಗೆ ಸದ್ಯ ರಿಲೀಫ್ ಸಿಕ್ಕಿದ್ದು, ರಜತ್‌ಗೆ ಮಾತ್ರ ರೀಲ್ಸ್ ಕಂಟಕ ಮುಂದುವರಿದಿದೆ. ಜಾಮೀನು ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ರಜತ್‌ಅನ್ನು ಮತ್ತೆ ಅರೆಸ್ಟ್ ಮಾಡಲಾಗಿದೆ. ಜಾಮೀನ ಮೇಲೆ ಹೊರಬಂದ ಬಳಿಕ ಎರಡು ಬಾರಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ರಜತ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಮೊದಲ ಬಾರಿಗೆ ಜೈಲಿಗೆ ಹೋಗುತ್ತಿದ್ದಂತೆ ರಜತ್ ವಿರುದ್ಧ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು, ರಜತ್ ಕಿಶನ್ ಮೇಲೆ ಮೂರು ನಾಲ್ಕು ಪ್ರಕರಣ ಈ ಹಿಂದೆಯೇ ದಾಖಲಾಗಿತ್ತು ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಈ ಬಗ್ಗೆ ಸ್ವತಃ ರಜತ್ ಈ ಹಿಂದೆಯೇ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದು, ತಮ್ಮ ಮೇಲೆ ಈ ಹಿಂದೆ ಇದ್ದ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದರು.
'ನಾಲ್ಕೈದು ಪ್ರಕರಣಗಳು ನನ್ನ ಮೇಲೆ ಇರಲು ನಾನೇನು ರೌಡಿ ಅಲ್ಲ. ನನ್ನ ಮೇಲೆ ಒಂದು ಪ್ರಕರಣ ಇದೆ. 324 ಕೇಸ್ ನನ್ನ ಮೇಲಿದ್ದು, ಅದು ನನ್ನ ಚಿಕ್ಕಪ್ಪ ಹಾಕಿರುವುದು. ನಮ್ಮ ಕುಟುಂಬದ ಗಲಾಟೆ ಅದು. ನಮ್ಮ ಚಿಕ್ಕಪ್ಪನೂ ಈಗ ಮಾತನಾಡಿ ಆ ಕೇಸ್‌ಅನ್ನು ವಾಪಸ್ ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಆ ಪ್ರಕರಣದಿಂದ ನನಗೇನು ಸಮಸ್ಯೆ ಇಲ್ಲ. ಕುಟುಂಬದ ಗಲಾಟೆಯಲ್ಲಿ ಆಸ್ತಿ ವಿಚಾರಕ್ಕೆ ಆಗಿರುವ ಕೇಸ್ ಅದು. ಅವತ್ತು ನಮ್ಮ ಚಿಕ್ಕಪ್ಪ ಕೋಪದಿಂದ ದೂರು ಕೊಟ್ಟರು ಈಗ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ' ಎಂದರು.

'ಇನ್ನೊಂದು ಆಕಸ್ಮಿಕವಾಗಿ ಎಲ್ಲೋ ಗಾಡಿ ನಿಲ್ಲಿಸಿದಾಗ ಆದ ಘಟನೆ. ಆಗ ಅಕ್ಷಿತಾ ಗರ್ಭಿಣಿ ಬೇರೆ ಆಗಿದ್ದರು. ಆ ಸಮಯದಲ್ಲಿ ಆದ ಗಲಾಟೆಯ ಕೇಸ್ ಅದು. ಆ ಸಮಯದಲ್ಲಿ ಯಾವ ಗಂಡಸಾದರೂ ಬಿಡುತ್ತಿರಲಿಲ್ಲ. ಬೇಕು ಅಂತಾ ನಾವೇನೂ ಮಾಡಿಲ್ಲ. ಬೇಕು ಅಂತಾ ಜಗಳ ಮಾಡಿಲ್ಲ. ಬೇಕು ಅಂತಾ ಕೇಸ್ ಹಾಕಿಸಿಕೊಳ್ಳಲು ತಲೆಕೆಟ್ಟಿದೆಯಾ?' ಎಂದು ರಜತ್ ಪ್ರಶ್ನಿಸಿದ್ದಾರೆ.
'ನಾನೇನು ಕೆಣುಕಿಕೊಂಡು ಹೋಗಿ ಯಾರ ಜೊತೆಗೂ ಜಗಳ ಮಾಡಿಲ್ಲ. ನನಗೂ ಕುಟುಂಬದವರು ಇದ್ದಾರೆ, ನನಗೂ ಕೆಲಸ ಇದೆ. ಕರ್ನಾಟಕದಲ್ಲಿ ನನ್ನದು ಎನ್ನುವ ವ್ಯಕ್ತಿತ್ವ ಇದೆ. ನನ್ನದು ಎನ್ನುವ ಹೆಸರಿದೆ. ಅದನ್ನು ಉಳಿಸಿಕೊಂಡು ಹೋಗಬೇಕೇ ಹೊರತು ನಾವು ಈ ರೀತಿ ಎಲ್ಲ ಮಾಡಿಕೊಂಡು ಹೋಗುವವರಲ್ಲ' ಎಂದು ರಜತ್ ಹೇಳಿದ್ದರು.












Click it and Unblock the Notifications