ವಿಂಟೇಜ್ ಕಾರ್ ಮುಂದೆ ಗ್ಯಾಂಗ್‌ಸ್ಟರ್ ಪೋಸ್, ಯಶ್ ಸುತ್ತಲೂ ಗನ್‌ಮ್ಯಾನ್‌ಗಳು: ಟಾಕ್ಸಿಕ್ ಹೊಸ ಫೋಟೋ ಭಾರೀ ವೈರಲ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಹೊಚ್ಚ ಹೊಸ ಪೋಸ್ಟರ್‌ಗಳು ಇಂಟರ್ನೆಟ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಖಡಕ್ ಇಮೇಜ್‌ನಲ್ಲಿ ನಟ ಯಶ್ ಅತ್ಯಂತ ಸ್ಟೈಲಿಶ್ ಆಗಿ ವಿಂಟೇಜ್ ಕಾರೊಂದರ ಮೇಲೆ ಒರಗಿ ನಿಂತು ಪೋಸ್ ಕೊಟ್ಟಿದ್ದಾರೆ. ವಿಶೇಷವೆಂದರೆ ಅವರ ಸುತ್ತಲೂ ಮಾರಕಾಸ್ತ್ರಗಳನ್ನು ಹಿಡಿದ ಗನ್‌ಮೆನ್‌ಗಳು ನಿಂತಿದ್ದು, ಇಡೀ ಪೋಸ್ಟರ್ ಸಿನಿಮಾ ಪ್ರೇಕ್ಷಕರಿಗೆ ಕತ್ತಲೆಯ ಗ್ಯಾಂಗ್‌ಸ್ಟರ್ ಜಗತ್ತಿನ ರಗಡ್ ಲುಕ್ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಿಡುಗಡೆಯ ದಿನಾಂಕದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿವೆ. ಆರಂಭದಲ್ಲಿ ಮಾರ್ಚ್ 19 ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ, ಕೇವಲ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಷ್ಟೇ ಅಲ್ಲದೆ, ಅಧಿಕೃತ ಇಂಗ್ಲಿಷ್ ಆವೃತ್ತಿಯಲ್ಲೂ ಅತ್ಯಂತ ವಿಶಿಷ್ಟ ದಿನಾಂಕದಂದು ವರ್ಲ್ಡ್‌ವೈಡ್ ರಿಲೀಸ್ ಮಾಡಲು ಚಿತ್ರತಂಡ ಈಗ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ. ಹೀಗಾಗಿ ಮತ್ತೆ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಸದ್ಯ ರಿಲೀಸ್ ಆಗಿರುವ ಈ ಒಂದೇ ಒಂದು ಫೋಟೋ ಯಶ್ ಅವರ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ಹೈಪ್ ಅನ್ನು ದುಪ್ಪಟ್ಟು ಮಾಡಿದೆ. ರಾಕಿಭಾಯ್ ರೆಡಿಯಾಗಿದ್ದಾರೆ ಎಂದು ಅಭಿಮಾನಿಗಳು ಈ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

'ಟಾಕ್ಸಿಕ್' ಕಥೆಯ ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್
ಪ್ರಖ್ಯಾತ ಅಂತರರಾಷ್ಟ್ರೀಯ ನಿಯತಕಾಲಿಕೆ 'ವೆರೈಟಿ' (Variety) ಜೊತೆ ಸಿನಿಮಾ ಕುರಿತು ಪ್ರತ್ಯೇಕವಾಗಿ ಮಾತನಾಡಿದ್ದ ನಟ ಯಶ್, ಈ ಚಿತ್ರದ ಆಳವಾದ ಕಥಾಹಂದರದ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಎಲ್ಲಾ ರೀತಿಯ ಕಮರ್ಷಿಯಲ್ ಎಲಿಮೆಂಟ್ಸ್‌ಗಳನ್ನು ಒಳಗೊಂಡಿರುವ ಪಕ್ಕಾ ಗ್ಯಾಂಗ್‌ಸ್ಟರ್ ಸಿನಿಮಾದಂತೆ ಕಾಣಿಸಬಹುದು. ಆದರೆ ಇದರ ಒಳಗೆ ಮನುಷ್ಯನ ಕರಾಳ ಮುಖ, ಭಾವನಾತ್ಮಕ ಏರಿಳಿತಗಳು ಹಾಗೂ ನೈತಿಕತೆಯ ಗೊಂದಲಗಳ ಬಗೆಗಿನ ಸೂಕ್ಷ್ಮ ಸಂಗತಿಗಳು ಅಡಗಿವೆ. ಒಬ್ಬ ಕಲಾವಿದನಾಗಿ ನನ್ನ ಬದುಕಿನ ಈ ಹಂತದಲ್ಲಿ ಇಂತಹ ವಿಭಿನ್ನ ಆಯಾಮಗಳನ್ನು ತೆರೆಯ ಮೇಲೆ ತರಲು ನಾನು ಕಾಯುತ್ತಿದ್ದೆ. ಗೀತು ಮೋಹನ್‌ದಾಸ್ ಹೇಳಿದ ಕಥೆ ಮತ್ತು ನನ್ನ ಕ್ರಿಯೇಟಿವ್ ಆಲೋಚನೆಗಳು ಸಂಪೂರ್ಣವಾಗಿ ಮ್ಯಾಚ್ ಆದವು ಎಂದಿದ್ದಾರೆ.
ಟಾಕ್ಸಿಕ್ ಚಿತ್ರದಲ್ಲಿ ಕೇವಲ ಗ್ಯಾಂಗ್‌ಸ್ಟರ್‌ಗಳ ಅಬ್ಬರ ಮಾತ್ರ ಇರುವುದಿಲ್ಲ, ಬದಲಿಗೆ ಚಿತ್ರದ ನಟಿಯರ ಪಾತ್ರಗಳು ಕಥೆಗೆ ಮೇಜರ್ ಟ್ವಿಸ್ಟ್ ನೀಡಲಿವೆ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ. ಚಿತ್ರದ ತಾರಾಗಣದ ಬಗ್ಗೆ ಮಾತನಾಡಿರುವ ಅವರು, ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಬ್ರಿಟಿಷ್ ಥಿಯೇಟರ್ ಆರ್ಟಿಸ್ಟ್ ಡ್ಯಾರೆಲ್ ಡಿಸಿಲ್ವಾ ಸೇರಿದಂತೆ ಭಾರಿ ತಾರಾಬಳಗವೇ ಚಿತ್ರದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಮ್ಮ ಸಿನಿಮಾದಲ್ಲಿರುವ ಮಹಿಳಾ ಪಾತ್ರಗಳು ಅತ್ಯಂತ ಪವರ್‌ಫುಲ್ ಆಗಿ ಮೂಡಿಬಂದಿವೆ. ತಮ್ಮ ಬದುಕಿನ ಜವಾಬ್ದಾರಿಯನ್ನು ತಾವೇ ಹೊತ್ತು, ಎಂತಹ ಕಠಿಣ ಅಥವಾ ಕರಾಳ ಪರಿಸ್ಥಿತಿಯಲ್ಲೂ ಹೇಗೆ ಬದುಕುಳಿಯಬೇಕು ಎಂದು ನಿರ್ಧರಿಸುವ ಧೀಮಂತ ಮಹಿಳೆಯರ ಪಾತ್ರಗಳಿವು. ಕಥೆಯಲ್ಲಿ ಅವರ ಪಾತ್ರಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದಿದ್ದಾರೆ.
ಹಾಲೀವುಡ್ ಸ್ಟೈಲ್‌ನಲ್ಲಿ ಆಕ್ಷನ್ ಸೀನ್
ಪ್ರತಿಷ್ಠಿತ ಕಾನ್ ಚಲನಚಿತ್ರ ಹಬ್ಬದಲ್ಲಿ (Cannes Film Festival) ಭಾಗವಹಿಸಿದ್ದ ನಟಿ ತಾರಾ ಸುತಾರಿಯಾ ಅವರು 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಜೊತೆ ಮಾತನಾಡುತ್ತಾ ಚಿತ್ರದ ಬಗ್ಗೆ ಒಂದು ರೋಚಕ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಿತ್ರದ ಕಥೆಯಲ್ಲಿ ನಾಯಕಿಯರೆಲ್ಲರೂ ಒಂದಾಗಿ, ಹಾಲೀವುಡ್‌ನ 'ಅವೆಂಜರ್ಸ್' ಮಾದರಿಯಲ್ಲಿ ಭರ್ಜರಿ ಸ್ಲೋ-ಮೋಷನ್ ಆಕ್ಷನ್ ಸೀನ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಸುಳಿವು ನೀಡಿದ್ದಾರೆ. ಯಶ್ ಅವರ ಮಾಸ್ ಲುಕ್ ಜೊತೆಗೆ ಭಾರತೀಯ ಚಿತ್ರರಂಗದ ಟಾಪ್ ನಟಿಯರು ಈ ರಗಡ್ ಆಕ್ಷನ್ ಜಗತ್ತಿನಲ್ಲಿ ಹೇಗೆ ಅಬ್ಬರಿಸಲಿದ್ದಾರೆ ಎಂಬುದು ಈಗ ಸಿನಿಮಾ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.













Click it and Unblock the Notifications