'ಪುಷ್ಪ-3' ಬರೋದು ಕೂಡ ಕನ್ಫರ್ಮ್, ಅಲ್ಲು ಜೊತೆ ಇರ್ತಾರಂತೆ ಮತ್ತೊಬ್ಬ ಫೇಮಸ್ ನಟ!
ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ಇದೇ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಫ್ಯಾನ್ಸ್ ಎಲ್ಲೆಡೆ ಪುಷ್ಪ...ಪುಷ್ಪ..ಎನ್ನುವ ಜಪ ಮಾಡುತ್ತಿದ್ದು, ಮತ್ತೊಂದೆ ಇದರ ಸೀಕ್ವೆಲ್ ಪುಷ್ಪ-3 ಕೂಡ ಬರಲಿದೆ ಎನ್ನುವ ವಿಚಾರ ಡಬಲ್ ಧಮಾಕಾ ನೀಡಿದಂತಿದೆ.
ಹೌದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ-2 ಬರುವ ಮುನ್ನವೇ ಎಲ್ಲರ ಚಿತ್ತ ಪುಷ್ಪ-3ನತ್ತ ವಾಲಿದೆ. ಚಿತ್ರತಂಡವಂತೂ ಇನ್ನೂ ಪುಷ್ಪ-3 ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ವೈರಲ್ ಆಗಿರುವ ಫೋಟೋವೊಂದು ಪುಷ್ಪ-3 ಬರುವಿಕೆಯನ್ನು ಬಹುತೇಕ ಖಚಿತಗೊಳಿಸಿದೆ.

ಪುಷ್ಪ-2 ಸಿನಿಮಾದ ಎಡಿಟಿಂಗ್ ರೂಂನ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಇದರಲ್ಲಿ ತಂತ್ರಜ್ಞರ ಹಿಂಬದಿಯಲ್ಲಿ ಪುಷ್ಪ-3 ಎನ್ನುವ ಪೋಸ್ಟರ್ ಬಂದಿರುವುದು ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ನೀಡಿದೆ. ಪುಷ್ಪ-1ಗೆ ರೈಸಿಂಗ್, ಪುಷ್ಪ-2ಗೆ The rule ಎಂದು ಹೆಸರಿಡಲಾಗಿದೆ. ಇನ್ನು ಲೀಕ್ ಆಗಿರುವ ಪುಷ್ಪ-3 ಪೋಸ್ಟರ್‌ನಲ್ಲೂ ಈ ಟೈಟಲ್ ಗಮನ ಸೆಳೆದಿದೆ. ಪುಷ್ಪ-3ಗೆ The Rampage ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಸೌಂಡ್ ಡಿಸೈನರ್‌ವೊಬ್ಬರು ಮಿಸ್ ಆಗಿ ಫೋಟೋ ಹಂಚಿಕೊಂಡಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಆ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಎಲ್ಲೆಡೆ ಪುಷ್ಪಾ...ತಗ್ಗೋದೇ ಇಲ್ಲ ಎಂದು ಫ್ಯಾನ್ಸ್ ಇದನ್ನು ಸಂಭ್ರಮಿಸುತ್ತಿದ್ದಾರೆ. ಪಾರ್ಟ್ 2 ಬರುವ ಮುನ್ನವೇ ಪಾರ್ಟ್ 3 ಬಗ್ಗೆ ಮಾಹಿತಿ ಲೀಕ್ ಆಗಿರುವ ಬಗ್ಗೆ ಎಲ್ಲೆಡೆ ಚರ್ಚೆಗಳು ಜೋರಾಗಿವೆ. ಇತ್ತೀಚೆಗೆ ಪುಷ್ಪ ಸಿನಿಮಾದ ನಟಿ ಕನ್ನಡದ ರಶ್ಮಿಕಾ ಮಂದಣ್ಣ ಕೂಡ ತಮ್ಮ ಪೋಸ್ಟ್‌ನಲ್ಲಿ ಪುಷ್ಪ-3 ಬಗ್ಗೆ ಸುಳಿವು ನೀಡಿದ್ದರು ಎನ್ನಲಾಗಿತ್ತು.

ಇದರ ಜೊತೆಗೆ ಮತ್ತೊಂದು ಸುದ್ದಿ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಪುಷ್ಪ-3 ಬಗ್ಗೆ ಮತ್ತೊಬ್ಬ ಟಾಲಿವುಡ್ ನಟರಾದ ವಿಜಯ್ ದೇವರಕೊಂಡ ಕೂಡ ಮೊದಲೇ ರಿವೀಲ್ ಮಾಡಿದ್ದರು ಎನ್ನಲಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ಅವರ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ವಿಶ್ ಮಾಡಿದ್ದ ಪೋಸ್ಟರ್ ಕೂಡ ಸದ್ಯ ವೈರಲ್ ಆಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಅವರು ಪುಷ್ಪ-3 ಬಗ್ಗೆಯೂ ಹೇಳಿದ್ದಾರೆ.
ಅಲ್ಲದೆ ಸುಕುಮಾರ್ ಅವರೊಂದಿಗೆ ಸಿನಿಮಾ ಮಾಡಲು ತುಂಬಾ ಕಾತುರನಾಗಿದ್ದೇನೆ ಎಂದು ವಿಜಯ್ ದೇವರಕೊಂಡ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, ಎರಡು ವರ್ಷಗಳ ಹಿಂದಿನ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಇನ್ನು ಪುಷ್ಪ-3 ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆಯೇ ವಿಜಯ್ ಈ ವಿಚಾರ ಹೇಳಿಕೊಂಡಿದ್ದರೂ ಇದು ಯಾರಿಗೂ ತಿಳಿಯಲಿಲ್ಲವಲ್ಲಾ? ಎಂದು ತಲೆಕೆಡಿಸಿಕೊಂಡಿದ್ದಾರೆ. ಸದ್ಯ ಇದೆಲ್ಲ ಗಾಸಿಪ್‌ಗಳಿಗೆ ಪುಷ್ಟಿ ನೀಡುವಂತಿದ್ದು, ಅಸಲಿ ವಿಚಾರ ಪುಷ್ಪ-2 ರಿಲೀಸ್ ದಿನ ಅಂದರೆ ಗುರುವಾರ ಕನ್ಫರ್ಮ್ ಆಗಲಿದೆ.












Click it and Unblock the Notifications