Vijay divorce case: ನಟ ವಿಜಯ್-ಸಂಗೀತಾ ಡಿವೋರ್ಸ್ ಪ್ರಕರಣ; ಜೂನ್ 15ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡದಲ್ಲಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನದ ಪ್ರಕರಣದ ವಿಚಾರಣೆ ಇಂದು ನಡೆದಿದೆ. ಚೆಂಗಲ್ಪಟ್ಟು ಕೌಟುಂಬಿಕ ಕಲ್ಯಾಣ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದೆ.
ನ್ಯಾಯಾಲಯದ ಇಂದಿನ ಕಾರ್ಯಪಟ್ಟಿಯಲ್ಲಿ ಈ ಪ್ರಕರಣವು ನಾಲ್ಕನೇ ವಿಷಯವಾಗಿತ್ತು. ನ್ಯಾಯಾಧೀಶರಾದ ಶಶಿಕಲಾ ಅವರ ಮುಂದೆ ಈ ವಿಚಾರಣೆ ನಡೆದಿದ್ದು, ಸಂಕ್ಷಿಪ್ತ ಚರ್ಚೆಯ ನಂತರ ಪ್ರಕರಣವನ್ನು ಜೂನ್ ಮಧ್ಯಭಾಗಕ್ಕೆ ಅಂದರೆ ಜೂನ್ 15ಕ್ಕೆ ಮುಂದೂಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ವಿಜಯ್ ಮತ್ತು ಸಂಗೀತಾ ದಂಪತಿಯ ವಿಚ್ಛೇದನದ ವದಂತಿಗಳು ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಈಗ ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿರುವುದು ಮತ್ತು ವಿಚಾರಣೆ ನಡೆಯುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ವಿಜಯ್ ಅವರು ಇತ್ತೀಚೆಗಷ್ಟೇ ರಾಜಕೀಯ ಪಕ್ಷವನ್ನು ಘೋಷಿಸಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಡಿವೋರ್ಸ್‌ಗೆ ಮುಂದಾಗಿದ್ದೇಕೆ?
ಸಂಗೀತಾ ಅವರು ಕಳೆದ ಫೆಬ್ರವರಿಯಲ್ಲಿ ಸಲ್ಲಿಸಿದ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ವಿರುದ್ಧ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. 2021 ರಿಂದಲೇ ವಿಜಯ್ ಅವರು ಒಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವು ತಮಗೆ ತೀವ್ರವಾದ ಮಾನಸಿಕ ನೋವು ಮತ್ತು ಭಾವನಾತ್ಮಕ ಹಿಂಸೆಯನ್ನು ನೀಡಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ವಿಜಯ್ ಆ ನಟಿಯೊಂದಿಗೆ ಸಾರ್ವಜನಿಕವಾಗಿ ಮತ್ತು ವಿದೇಶಿ ಪ್ರವಾಸಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ವೈವಾಹಿಕ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದೂ ದೂರಿದ್ದಾರೆ.
ಕಳೆದ ಐದು ವರ್ಷಗಳಿಂದ ವಿಜಯ್ ಅವರು ಕೌಟುಂಬಿಕ ಜೀವನದಿಂದ ಭಾವನಾತ್ಮಕವಾಗಿ ದೂರವಾಗಿದ್ದಾರೆ, ತಮ್ಮನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ಸಂಗೀತಾ ನೋವು ತೋಡಿಕೊಂಡಿದ್ದಾರೆ. ವಿಜಯ್ ಅವರ ಈ ನಡವಳಿಕೆಯಿಂದಾಗಿ ಮಕ್ಕಳ ಮೇಲೆಯೂ ಪರಿಣಾಮ ಬೀರಿದೆ ಮತ್ತು ತಾನು ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಈ ವಿಚಾರಣೆ ನಡೆದಿರುವುದು ರಾಜಕೀಯವಾಗಿಯೂ ಕುತೂಹಲ ಮೂಡಿಸಿದೆ.
ವಿಜಯ್ ಮತ್ತು ಸಂಗೀತಾ ಅವರ ಬಾಂಧವ್ಯವು 1996 ರಲ್ಲಿ ಆರಂಭವಾಗಿತ್ತು. ಶ್ರೀಲಂಕಾ ಮೂಲದ ಸಂಗೀತಾ ಬ್ರಿಟನ್‌ನಲ್ಲಿ ಬೆಳೆದವರು. 1998ರಲ್ಲಿ ಯುಕೆನಲ್ಲಿ ನೋಂದಾಯಿತ ವಿವಾಹವಾಗಿದ್ದ ಈ ಜೋಡಿ, ನಂತರ 1999 ಆಗಸ್ಟ್ 25ರಂದು ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಇವರಿಗೆ ಜೇಸನ್ ಎಂಬ ಮಗ ಮತ್ತು ದಿವ್ಯಾ ಎಂಬ ಮಗಳಿದ್ದಾರೆ. 25 ವರ್ಷಗಳ ಸುದೀರ್ಘ ವೈವಾಹಿಕ ಜೀವನವು ಈಗ ನ್ಯಾಯಾಲಯದ ಅಂಗಳದಲ್ಲಿ ಬಂದು ನಿಂತಿದೆ. ಜೂನ್ 15 ರಂದು ನಡೆಯುವ ಮುಂದಿನ ವಿಚಾರಣೆಯು ಈ ಪ್ರಕರಣದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ.












Click it and Unblock the Notifications