ಸೌತ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ
ತಮಿಳು ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟಿ ಬಿಂದು ಘೋಷ್ (76) ನಿಧನರಾಗಿದ್ದಾರೆ. ಇವರು ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಪ್ರಮುಖ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ ಅಭಿನಯಿಸಿ ಖ್ಯಾತಿ ಪಡೆದಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಚೆನ್ನೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ.
ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅವರು ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಪ್ರಭು, ವಿಜಯಕಾಂತ್ ಸೇರಿದಂತೆ ಅನೇಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಕಾಣಿಸಿಕೊಂಡು ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿದ್ದರು. ಅವರು ಅನೇಕ ಸಂದರ್ಶನಗಳನ್ನು ನೀಡಿ ತಮ್ಮ ಅನಾರೋಗ್ಯ ಹಾಗು ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದರು. ತಮ್ಮ ಮಗನಿಂದಾಗಿ ನಾನು ಒಂಟಿಯಾದೆ ಎಂದು ನೋವು ತೋಡಿಕೊಂಡಿದ್ದರು.

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಬಿಂದು ಘೋಷ್ ಅವರ ವೈದ್ಯಕೀಯ ವೆಚ್ಚಕ್ಕಾಗಿ ನಟ ಬಾಲಾ ಅವರು 80,000 ರೂಪಾಯಿ ಆರ್ಥಿಕ ನೆರವು ನೀಡಿದ್ದರು. ಅಲ್ಲದೆ ಎಲ್ಲ ಖರ್ಚುಗಳನ್ನು ತಾವೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಬಾಲಾ ಮಾತ್ರವಲ್ಲದೆ ನಟರಾದ ರಿಚರ್ಡ್ ಮತ್ತು ರಾಮಲಿಂಗಂ ಕೂಡ ಬಿಂದು ಅವರನ್ನು ಭೇಟಿಯಾಗಿ ಹಣಕಾಸಿನ ನೆರವು ನೀಡಿದ್ದರು. ಆದರೂ ಚಿಕಿತ್ಸೆ ಫಲಿಸದೆ ಭಾನುವಾರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಬಿಂದು ಘೋಷ್ ಹಾಸ್ಯ ಪಾತ್ರಗಳು ಮತ್ತು ವಿಶಿಷ್ಟವಾದ ದೇಹ ಭಾಷೆಗೆ ಹೆಸರುವಾಸಿಯಾಗಿದ್ದರು. ಅವರು ನಟ ಕಮಲ್ ಹಾಸನ್ ಅವರು ಅಭಿನಯಿಸಿದ್ದ "ಕಲತ್ತೂರ್ ಕಣ್ಣಮ್ಮ" ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ರಜನಿಕಾಂತ್, ಕಮಲ್ ಹಾಸನ್, ಗೌಂಡಮಣಿ ಮತ್ತು ಸೆಂಥಿಲ್ ಸೇರಿದಂತೆ ಅವರು ಹಲವು ನಟರೊಂದಿಗೆ ಹಾಸ್ಯ ಪಾತ್ರಗಳಿಂದಲೇ ಖ್ಯಾತಿ ಗಳಿಸಿದ್ದರು.

ಕೋಜಿ ಕೂವುತ್ತು, ಮಂಗಮ್ಮ ಸಬಥಂ, ಕೊಂಬೆರಿ ಮೂಕನ್, ಉರುವಂಗಲ್ ಮರಳಂ, ವರದಕ್ಷಿಣೆ ಕಲ್ಯಾಣಿ, ತೂಂಗಾತೆ ತಂಬಿ ತೂಂಗಾತೆ ಸೇರಿ ಹಲವು ಸಿನಿಮಾಗಳಲ್ಲಿ ಬಿಂದು ನಟಿಸಿದ್ದಾರೆ. ಅವರು ಪ್ರಧಾನವಾಗಿ ತಮಿಳು ಮತ್ತು ತೆಲುಗು ಮತ್ತು ಕೆಲವು ಮಲಯಾಳಂ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.
ಇತ್ತೀಚೆಗೆ ಅವರು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದರು. ಬಿಂದು ಘೋಷ್ ತನ್ನ ಮಗ ಸೇರಿದಂತೆ ತನ್ನ ಸ್ವಂತ ಕುಟುಂಬ ದೂರ ಇಟ್ಟಿರುವುದಾಗಿ ಬಹಿರಂಗಪಡಿಸಿದ್ದರು. ಅವರ ಇತ್ತೀಚಿನ ಸಂಕಷ್ಟಗಳು ಸಂದರ್ಶನದಲ್ಲಿ ಬೆಳಕಿಗೆ ಬಂದವು. ಬಿಂದು ಘೋಷ್ ತಮ್ಮ ಕ್ಷೀಣಿಸುತ್ತಿರುವ ಆರೋಗ್ಯ ಮತ್ತು ಪ್ರೀತಿಪಾತ್ರರ ನಿರ್ಲಕ್ಷ್ಯದ ಬಗ್ಗೆಯೂ ನೋವು ಹಂಚಿಕೊಂಡಿದ್ದರು. ತೆರೆ ಮೇಲೆ ಮಿಂಚಿದ್ದ ಅವರು ಕೊನೇ ಕಾಲದಲ್ಲಿ ಇಂತಹ ಸ್ಥಿತಿಗೆ ತಲುಪಿದ್ದು ಕಂಡು ಅಭಿಮಾನಿಗಳು ಕಣ್ಣೀರು ಸುರಿಸಿದ್ದಾರೆ.












Click it and Unblock the Notifications