Master Anand: ಮಾಸ್ಟರ್ ಆನಂದ್ ಚಿತ್ರರಂಗಕ್ಕೆ ಬಂದಿದ್ದೇಗೆ?
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಒಂದು ಕಾಲದಲ್ಲಿ ಬಹುಬೇಡಿಕೆಯ ಬಾಲ ನಟ. ತೆರೆ ಮೇಲೆ ಮಾಸ್ಟರ್ ಆನಂದ್ ಅವರನ್ನು ನೋಡುತ್ತಿದ್ದಂತೆ ಚಿಕ್ಕ ವಯಸ್ಸಿನಲ್ಲೇ ಎಂತಹ ಪ್ರತಿಭೆ ಎಂದು ಮನೋತವರೇ ಹೆಚ್ಚು. ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಬಾಲ್ಯದಲ್ಲಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಇದೀಗ ಕನ್ನಡದ ಬಹುಬೇಡಿಕೆಯ ನಟ, ನಿರ್ದೇಶಕ ಹಾಗೂ ನಿರೂಪಕ. ಹಾಗಾದರೆ ಮಾಸ್ಟರ್ ಆನಂದ್‌ಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೇಗೆ? ಎಷ್ಟು ಚಿಕ್ಕ ಬಾಲಕ ನಿರ್ದೇಶಕರ ಮನಸ್ಸು ಗೆದ್ದಿದ್ದೇಗೆ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಮಾಸ್ಟರ್ ಆನಂದ್ ಚಿತ್ರರಂಗದ ಪ್ರವೇಶ ಹೇಗಾಯ್ತು ಎನ್ನುವುದರ ಬಗ್ಗೆ ಸಿಹಿಕಹಿ ಚಂದ್ರು ಮಾತನಾಡಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂ್ಟಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಸಿನಿಮಾಗಳು ಸಿಕ್ಕಿದರೆ ಸಾಕು ಅಂತಾ ಕಾಯುತ್ತಿದ್ದ ಕಾಲ ಅದು. ಸಿನಿಮಾಗಳು ಮಾಡುತ್ತಿದ್ದವರು ಕೂಡ ಕಡಿಮೆ. ಆಗ ಚಿತ್ರರಂಗದಲ್ಲಿ ವರ್ಷಕ್ಕೆ ಒಂದು ಅರವತ್ತು ಸಿನಿಮಾ ಮಾಡಿದರೆ ದೊಡ್ಡ ವಿಚಾರ. ಧಾರಾವಾಹಿಗಳೆಲ್ಲಾ ವಾರಕ್ಕೆ ಒಂದು ಸಂಚಿಕೆ ಬರುವಂತ್ತದ್ದು. ಹೀಗಾಗಿ ಯಾರಿಗೂ ಕೆಲಸನೇ ಸಿಗುತ್ತಿರಲಿಲ್ಲ. ನಾವೆಲ್ಲರೂ ಕನಿಷ್ಕ ಹೋಟೆಲ್‌ನಲ್ಲಿ ನಿಂತುಕೊಂಡು ಯಾರಾದರೂ ನಿರ್ದೇಶಕರು ಬಂದರೆ ನನಗೊಂದು ಅವಕಾಶ ಕೊಡಿ ಅಂತಾ ಕೇಳುತ್ತಿದ್ದೆವು'.

'ನಮ್ಮ ತಂಡದಲ್ಲಿದ್ದ ಯಾರಿಗಾದರೂ ಕೆಲಸ ಸಿಕ್ಕಿ ಸಂಬಳ ಬಂದಿದ್ದರೆ ಅವರು ಕಾಫಿ ಕೊಡಿಸುತ್ತಿದ್ದರು. ಒಂದು ದಿನ ನಾನು, ಪ್ರಕಾಶ್ ರೈ ಎಲ್ಲರೂ ಕಾಫಿ ಕುಡಿಯುತ್ತಾ ಕುಳಿತಿದ್ದೆವು. ಆಗ ಮಾಸ್ಟರ್ ಆನಂದ್ ಅವರ ತಂದೆ ಚಿಕ್ಕ ಹುಡುಗನಾಗಿದ್ದ ಮಾಸ್ಟರ್ ಆನಂದ್‌ನ್ನು ಕರೆದುಕೊಂಡು ಬಂದರು. ಅವರು ನಮ್ಮನ್ನು ನೋಡಿ ಸರ್ ನನ್ನ ಮಗನಿಗೆ ಒಂದು ಚಾನ್ಸ್ ಕೊಡಿಸಿ ಅಂದರು'.
'ನಾವೇ ಅವಕಾಶಕ್ಕಾಗಿ ಕಾಯುತ್ತಿದ್ದೇವೆ ನಮಗೆ ಅವಕಾಶ ಕೊಡಿ ಅಂತಾ ಕೇಳುತ್ತಿದ್ದರಲ್ಲಾ ಅಂತಾ ಮನಸಿನೊಳಗಡೆ ಆಲೋಚನೆ ಇತ್ತು. ಹೋಗಲಿ ಅಂತಾ ಹುಡುಗ ಏನು ಮಾಡುತ್ತಾನೆ ಅಂತಾ ಕೇಳಿದೆ. ಅವರು ಮಿಮಿಕ್ರಿ ತುಂಬಾ ಚೆನ್ನಾಗಿ ಮಾಡುತ್ತಾನೆ ಅಂದರು. ಹೌದಾ ಅಂತಾ ನಾನೇ ಅವನನ್ನು ಎತ್ತಿಕೊಂಡು ಟೇಬಲ್ ಮೇಲೆ ನಿಲ್ಲಿಸಿದೆ. ಆಗ ಅವನು ಅಣ್ಣಾವ್ರು, ವಿಷ್ಣು ವರ್ಧನ್ ಅವರ ಹಾಗೆ ಮಾಡಿ ನಿಮ್ಮ ತರ ಮಾಡ್ಲಾ ಅಂದಾ, ಅವನನ್ನು ನೋಡಿ ಫಿದಾ ಆದೆ. ಎಷ್ಟು ಚೆನ್ನಾಗಿ ಮಾಡುತ್ತಾನೆ ಅನಿಸಿತು' ಎಂದರು.

'ಆಗ ರವಿಚಂದ್ರನ್ ಕಿನ್ನರಿ ಜೋಗಿ ಸಿನಿಮಾ ಮಾಡುತ್ತಿದ್ದರು. ರೇಣುಕಾಶರ್ಮಾ ನಿರ್ದೇಶನ ಮಾಡುತ್ತಿದ್ದರು. ಅವರು ಮಕ್ಕಳನ್ನು ಹುಡುಕುತ್ತಿದ್ದರು. ನಾನೇ ಮಾಸ್ಟರ್ ಆನಂದ್ ಅವರ ತಂದೆ ಅವರನ್ನು ರೇಣುಕಾಶರ್ಮಾ ಅವರನ್ನು ಭೇಟಿ ಮಾಡಿ ಅಂತಾ ಕಳುಹಿಸಿದೆ. ಅದಾದ ಮೇಲೆ ಅವನು ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ. ಈಗ ಅವನ ಮಗಳನ್ನು ನೋಡಿದರೆ ಅವನೇ ನೆನಪಾಗುತ್ತಾನೆ' ಎಂದು ಸಿಹಿಕಹಿ ಚಂದ್ರು, ಮಾಸ್ಟರ್ ಆನಂದ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ.












Click it and Unblock the Notifications