Daali Dhananjaya: ಡಿಸಿಎಂ ಡಿ.ಕೆ.ಶಿವಕುಮಾರ್ ದಂಪತಿಗೆ ಮದುವೆ ಆಮಂತ್ರಣ ಕೊಟ್ಟ ನಟ ಡಾಲಿ
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಸದ್ಯದಲ್ಲೇ ಮದುವೆ ಆಗುತ್ತಿದ್ದಾರೆ. ಸದ್ಯ ಡಾಲಿ ಮದುವೆ ಕಾರ್ಯಗಳು ಶುರುವಾಗಿದ್ದು, ಈಗಿನಿಂದಲೇ ಎಲ್ಲರನ್ನೂ ನಟ ತನ್ನ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ, ದಂಪತಿಗೆ ಮದುವೆ ಆಮಂತ್ರಣ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ನಟ ಡಾಲಿ ಧನಂಜಯ್ ಅವರಿಗೆ ಶುಭಕೋರಿದ್ದಾರೆ. ಈ ಮಾಹಿತಿಯನ್ನು ಹಂಚಿಕೊಂಡಿರುವ ಡಿಕೆಶಿ, ಕನ್ನಡದ ಪ್ರತಿಭಾವಂತ ನಟ ಹಾಗೂ ಸಹೃದಯಿ ಡಾಲಿ ಧನಂಜಯ್ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ, ತಮ್ಮ ವಿವಾಹ ಆಮಂತ್ರಣ ಪತ್ರಿಕೆ ನೀಡಿದರು ಎಂದಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅವರಿಗೆ ಶುಭಹಾರೈಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗ ಪ್ರವೇಶಿಸಿರುವ ಡಾಲಿ ಅವರು ಅಲ್ಲೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟರೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುತ್ತಿರುವುದೇ ಖುಷಿಯ ವಿಷಯ ಎಂದು ಡಾಲಿ ಅವರ ಸಿನಿ ಬದುಕನ್ನು ಶ್ಲಾಘಿಸಿದ್ದಾರೆ.
ಬಳಿಕ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ನಿವಾಸಕ್ಕೂ ತೆರಳಿ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು. ಹೊಸ ಬದುಕಿಗೆ ಕಾಲಿಡುತ್ತಿರುವ ಅವರಿಗೆ ಶುಭ ಹಾರೈಸಿದೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ನಟ ಡಾಲಿ ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಮದುವೆಗೆ ಆಮಂತ್ರಣ ನೀಡಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದ್ದು, ಹೊಸ ಬದುಕಿಗೆ ಮುಂದಡಿ ಇಡುತ್ತಿರುವ ಜೋಡಿಗೆ ಶುಭವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಕೂಡ ಹಾರೈಸಿದ್ದರು.
ಡಾಲಿ ಅವರು ಇತ್ತೀಚೆಗಷ್ಟೇ ಸಿಂಪಲ್ ಆಗಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಿತ್ರದುರ್ಗ ಮೂಲದ ವೈದ್ಯೆ ಡಾ.ಧನ್ಯತಾ ಅವರನ್ನು ಡಾಲಿ ಮದುವೆಯಾಗಲಿದ್ದಾರೆ. ಧನು ಹಾಗೂ ಧನ್ಯತಾ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರ ಮದುವೆಗೆ ಪೋಷಕರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ಫೆಬ್ರವರಿಯಲ್ಲಿ ಧನಂಜಯ್ ಅವರು ಧನ್ಯತಾ ಅವರ ಕೈಹಿಡಿಯಲಿದ್ದಾರೆ.
2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಮತ್ತು ಧನ್ಯತಾ ಅವರ ವಿವಾಹ ಅದ್ಧೂರಿಯಾಗಿ ನಡೆಯಲಿದೆ. ಇವರ ವಿವಾಹಕ್ಕೆ ಸಿನಿಮಾರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ. ಸದ್ಯ ಬಹುಭಾಷೆಗಳಲ್ಲಿ ಮಿಂಚಿರುವ ನಟ ಡಾಲಿ ಅವರ ಮದುವೆಗೆ ಹಲವು ಸೆಲೆಬ್ರಿಟಿಗಳು ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಡಾಲಿ-ಧನ್ಯತಾ ಜೋಡಿಯ ಕ್ಯೂಟ್ ಫೋಟೋಗಳು ಹಾಗೂ ಮದುವೆ ಮುದ್ದಾದ ಆಮಂತ್ರಣದ ಫೋಟೊಗಳು ಕೂಡ ವೈರಲ್ ಆಗಿವೆ.












Click it and Unblock the Notifications