Ramya: ಈಗಿನ ಸ್ಟಾರ್ ನಟರ ಸಂಭಾವನೆ ನನಗಿಂತ ಕಡಿಮೆ ಇತ್ತು: ಯಶ್‌ಗೆ ಟಾಂಗ್ ಕೊಟ್ರಾ ರಮ್ಯಾ?
ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗದ ಸಂಭಾವನೆ ತಾರತಮ್ಯ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ವೇಳೆ ರಮ್ಯಾ ಅವರು ಆಡಿರುವ ಮಾತುಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಕನ್ನಡ ಚಿತ್ರರಂಗದಲ್ಲಿ ನಟರು ಹಾಗೂ ನಟಿಯರ ಸಂಭಾವನೆ ವಿಚಾರವಾಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ "ಮಹಿಳೆ ಹಾಗೂ ಸಿನಿಮಾ" ವಿಚಾರಗೋಷ್ಠಿಯಲ್ಲಿ ರಮ್ಯಾ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇಷ್ಟಕ್ಕೂ ರಮ್ಯಾ ಏನ್ ಹೇಳಿದ್ದಾರೆ ಗೊತ್ತಾ..?
ಸ್ಯಾಂಡಲ್‌ವುಡ್‌ನಲ್ಲಿ ಸಂಭಾವನೆ ಹೇಗಿದೆ? ನಟಿಯರ ಸಂಭಾವನೆ ಎಷ್ಟಿದೆ ಎಂದು ತಮ್ಮನ್ನೇ ಅವರು ಉದಾಹರಣೆ ಕೊಟ್ಟಿದ್ದಾರೆ. ಅಲ್ಲದೆ ನಟರು ಹಾಗೂ ನಟಿಯರ ನಡುವೆ ಇರುವ ಸಂಭಾವನೆ ತಾರತಮ್ಯದ ಬಗ್ಗೆಯೂ ಗಂಭೀರವಾಗಿ ಮಾತನಾಡಿದ್ದಾರೆ. ಈಗ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಟರು ನನ್ನೊಂದಿಗೆ ನಟಿಸುವಾಗ ಅವರು ಅಷ್ಟೊಂದು ಪರಿಚಿತರಾಗಿರಲಿಲ್ಲ. ಆಗ ನನಗಿಂತ ಅವರಿಗೆ ಸಂಭಾವನೆ ಕಡಿಮೆ ಇತ್ತು. ಆದರೆ ಒಂದು ಸಿನಿಮಾ ಹಿಟ್ ಆದ ಕೂಡಲೇ ಮತ್ತೊಂದು ಸಿನಿಮಾಗೆ ನಟರ ಸಂಭಾವನೆ ದಿಢೀರ್ 50 ಪಟ್ಟು ಹೆಚ್ಚಾಗುತ್ತಿತ್ತು ಎಂದು ನಟಿ ರಮ್ಯಾ ಹೇಳಿದ್ದಾರೆ.

ಆದರೆ ನಟಿಯಾಗಿ ನಾನು ಅಬ್ಬಬ್ಬಾ ಅಂದ್ರೆ ಒಂದು ಐದು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದೆ. ಚಿತ್ರರಂಗದಲ್ಲಿ ಈ ರೀತಿಯ ಸಂಭಾವನೆ ತಾರತಮ್ಯ ಇದೆ. ಒಂದೇ ಸಿನಿಮಾದಲ್ಲಿ ನಟಿಸಿರುತ್ತೇವೆ. ಒಟ್ಟಿಗೆ ಹಿಟ್ ಕೂಡ ಪಡೆದಿರುತ್ತೇವೆ. ಆದರೆ ನಟ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾನೆ. ಆದರೆ, ನಾನು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯಲು ಹರಸಾಹಸ ಪಡಬೇಕು ಎಂದು ರಮ್ಯಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಟಿಯರ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಸಮಸ್ಯೆಗಳ ಕುರಿತು ಸಾಕಷ್ಟು ವಿಚಾರಗಳಿವೆ. ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಟರಷ್ಟೇ ಕೆಲಸ ನಾವೂ ಮಾಡುತ್ತೇವೆ. ಆದರೆ, ನಮಗೆ ಕಡಿಮೆ ಸಂಭಾವನೆ, ಅವರಿಗೆ ಹೆಚ್ಚು ಸಂಭಾವನೆ ಏಕೆ? ಈ ತಾರತಮ್ಯ ಮೊದಲು ನಿಲ್ಲಬೇಕು ಎಂದಿದ್ದಾರೆ. ಜೊತೆಗೆ ನಟನನ್ನು ನೋಡಲು ಜನ ಸಿನಿಮಾಗೆ ಬರ್ತಾರೆ ಅನ್ನಫ ಮನಸ್ಥಿತಿಯಿಂದಲೂ ನಾವು ಹೊರಬರಬೇಕು ಎಂದು ಹೇಳಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ. ಕನ್ನಡದಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗ್ತಿವೆ. ಈಗಲೂ ನಮ್ಮ ಪ್ರಕಾರ ಮಹಿಳಾ ಪ್ರಧಾನ ಸಿನಿಮಾ ಅಂದ್ರೆ, ಮಹಿಳೆಯರು ಪೊಲೀಸ್ ಡ್ರೆಸ್‌ನಲ್ಲಿ ರೌಡಿಗಳನ್ನು ಹೊಡೆಯುವುದು ಎಂದುಕೊಂಡಿದ್ದಾರೆ. ಇದು ಬದಲಾಗಬೇಕು ಎಂದೂ ರಮ್ಯಾ ಮಾತನಾಡಿದ್ದಾರೆ.
ಯಶ್‌ಗೆ ಕೌಂಟರ್ ಎಂದ ಫ್ಯಾನ್ಸ್: ರಮ್ಯಾ ಅವರು ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗಿನ ಸ್ಟಾರ್ ನಟರ ಪೈಕಿ ಯಶ್ ಅವರೊಂದಿಗೆ ರಮ್ಯಾ ಅವರು ಮೊದಲು ನಟಿಸಿದ್ದರು. ಇದಕ್ಕೂ ಮುನ್ನವೇ ರಮ್ಯಾ ಅವರು ಲೀಡಿಂಗ್ ನಟಿಯಾಗಿದ್ದರು. ಈಗ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಂಭಾವನೆಯಲ್ಲೂ ಮುಂದಿದ್ದಾರೆ. ರಮ್ಯಾ ಅವರು ಪರೋಕ್ಷವಾಗಿ ಇದನ್ನೇ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ ಎಂದು ಕೆಲವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಲಕ್ಕಿ ಸಿನಿಮಾದಲ್ಲಿ ಯಶ್ ಜೊತೆ ರಮ್ಯಾ ಅವರು ನಟಿಸಿದ್ದರು.












Click it and Unblock the Notifications